ತಮಿಳರಂತೆ ಕನ್ನಡಿಗರು ಪ್ರಾದೇಶಿಕ ಪಕ್ಷವನ್ನು ಉಳಿಸಿ: ಎಚ್.ಡಿ.ದೇವೇಗೌಡ
ತಮಿಳರ ರೀತಿ ಕನ್ನಡಿಗರು ಸಹ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಉಳಿಸಿ, ಪ್ರಾದೇಶಿಕತೆ ಬೆಂಬಲಿಸುವಂತೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ಚನ್ನಪಟ್ಟಣ (ಮೇ.01): ತಮಿಳರ ರೀತಿ ಕನ್ನಡಿಗರು ಸಹ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಉಳಿಸಿ, ಪ್ರಾದೇಶಿಕತೆ ಬೆಂಬಲಿಸುವಂತೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಲೆ ಎತ್ತಿ ನಿಲ್ಲಲು ಸಾಧ್ಯವಾಗಿಲ್ಲ. ಕನ್ನಡಿಗರ ಮೇಲೆ ತಮಿಳುನಾಡಿನವರು ಸವಾರಿ ಮಾಡುತ್ತಿದ್ದಾರೆ. ಅವರಿಗೆ ನಮ್ಮ ನೆಲದ ನೀರನ್ನು ಬಿಟ್ಟು ಕೊಡಬಾರದು ಎಂದು ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟಯೋಜನೆಗಳ ರೀತಿ ಬೇರೆ ಯಾರು ಮಾಡಿಲ್ಲ. ನುಡಿದಂತೆ ನಡೆಯುವ, ಬಡವರ ಕಣ್ಣೀರು ಒರೆಸಿದ ಒಬ್ಬ ರಾಜಕಾರಣಿ ಈ ದೇಶದಲ್ಲಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಪಂಚರತ್ನ ಯೋಜನೆ ಜಾರಿಗಾಗಿ ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಗೆ ನೀರು ಕೊಡಲು ಜಲಧಾರೆ ಯೋಜನೆಯನ್ನು ರೂಪಿಸಿದ್ದಾರೆ ಎಂದು ಹೇಳಿದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವ-ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯ ಸಿಗುತ್ತಿಲ್ಲ. ನಾನು ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ.
ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು: ಎಚ್.ಡಿ.ದೇವೇಗೌಡ
ಜನರು ಕುಮಾರಸ್ವಾಮಿ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ. ಚನ್ನಪಟ್ಟಣದ ಮತದಾರರು ಕುಮಾರಸ್ವಾಮಿ ಅವರನ್ನು ಶಾಸಕರಾಗಿ ಮಾಡಿ, ವಿಧಾನಸೌಧದ ಮುಂಭಾಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಿ ಜನರಲ್ಲಿ ಉತ್ಸಾಹ ಮೂಡಿಸಿದರು. ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಕಾಂಗ್ರೆಸ್, ಬಿಜೆಪಿ ನಾಯಕರು ಯಾರು ರಾಜ್ಯದ ಪರ ನಿಲ್ಲಲಿಲ್ಲ. 40 ತಮಿಳು ಸಂಸದರು ನನ್ನನ್ನು ಕಟ್ಟಿಹಾಕಿದರು. ಇಗ್ಗಲೂರು ಜಲಾಶಯ ನಿರ್ಮಾಣಕ್ಕೆ ಯಾರು ಒಂದು ರುಪಾಯಿ ಕೊಡಲಿಲ್ಲ.
ಅದು ರೈತರು ಬೆವರು ಸುರಿಸಿ ಕೊಟ್ಟ ಹಣದಲ್ಲಿ ಡ್ಯಾಂ ಕಟ್ಟಿದ್ದೇನೆ ಎಂದು ಇಗ್ಗಲೂರು ಜಲಾಶಯ ನಿರ್ಮಾಣದ ಹಿಂದಿನ ಶ್ರಮವನ್ನು ದೇವೇಗೌಡರು ಮೆಲುಕು ಹಾಕಿದರು. ಮಾಜಿ ಶಾಸಕ ಎಂ.ಸಿ.ಅಶ್ವತ್, ಬಮೂಲ ನಿರ್ದೇಶಕ ಜಯಮುತ್ತು, ಜೆಡಿಎಸ್ ಮುಖಂಡರಾದ ರಾಮಚಂದ್ರು, ರೇಖಾಉಮಾಶಂಕರ್ ಮತ್ತಿತರರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ರಾಜಕೀಯದಲ್ಲಿ ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ: ಎಚ್.ಡಿ.ದೇವೇಗೌಡ
ಪ್ರಧಾನಿ ಮೋದಿಯನ್ನು ಬರಬೇಡಿ ಅನ್ನಲಾಗುತ್ತೆಯೇ: ಬರುವವರು ಬರಲಿ, ಹೋಗುವವರು ಹೋಗಲಿ. ಯಾರೇ ಬಂದು ಹೋದರು ಜನರು ಬಯಸಿದ ತೀರ್ಪನ್ನೇ ಕೊಡುತ್ತಾರೆ ಎಂದು ಪ್ರಧಾನಿ ಮೋದಿ ಭೇಟಿ ವಿಚಾರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವವರನ್ನು ಹೋಗುವವರನ್ನು ನಾವು ಬೇಡ ಅನ್ನಲು ಆಗುತ್ತದೆಯೇ? ತೀರ್ಪು ಕೊಡುವವರು ಪುಣ್ಯಾತ್ಮರು. ಅಳೆದು ತೂಗಿ ಆಶೀರ್ವಾದ ಮಾಡುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಸ್ವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯ ಸಿಗುತ್ತಿಲ್ಲ. ನಾನು ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಜನರು ಕುಮಾರಸ್ವಾಮಿ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.