Asianet Suvarna News Asianet Suvarna News

ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲಿರುವ ರೌಡಿಶೀಟರ್‍‌ಗಳ ಲೆಕ್ಕ ಹಾಕಲಿ: ಸಿಎಂ ಬೊಮ್ಮಾಯಿ

ರೌಡಿಶೀಟರ್ ಗಳನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ರೌಡಿ ಮೋರ್ಚಾ ಎಂಬ ಘಟಕ ತೆರೆಯಬೇಕು ಎಂದು ಕಾಂಗ್ರೆಸ್‌ ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿರುವ ರೌಡಿಶೀಟರ್ ಗಳನ್ನು ಲೆಕ್ಕ ಹಾಕಲಿ ಎಂದು ತಿರುಗೇಟು ನೀಡಿದ್ದಾರೆ. 

Let us count the rowdy sheeters in BJP and Congress parties
Author
First Published Nov 29, 2022, 5:58 PM IST

ಬೆಂಗಳೂರು (ನ.29) : ರಾಜ್ಯ ರಾಜಕಾರಣದಲ್ಲಿ ರೌಡಿಗಳ ಪಕ್ಷ ಸೇರ್ಪಡೆ ವಿಚಾರ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ 40 ಪರ್ಸೆಂಟ್‌ ಕಮಿಷನ್‌ ಸಾಲುತ್ತಿಲ್ಲವೆಂದು, ಕಮಿಷನ್‌ ವಸೂಲಿಗೆ ರೌಡಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ರೌಡಿ ಮೋರ್ಚಾ ಎಂಬ ಹೊಸ ಘಟಕ ತೆರಯಬೇಕಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಲೆಕ್ಕ ಹಾಕಲಿ ಎಂದು ತಿರುಗೇಟು ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ನಡೆದ ರೌಡಿಶೀಟರ್ ಸೈಲೆಂಟ್‌ ರವಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಭಾಗಿಯಾದುದು ಮತ್ತು ಮಂಡ್ಯದ ಫೈಟರ್ ರವಿ ಬಿಜೆಪಿ ಸೇರ್ಪಡೆಯಾದ ನಂತರ ಆರಂಭವಾದ ವಿವಾದ ರಾಜ್ಯ ರಾಜಕಾರಣವನ್ನು ಆವರಿಸಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಟೀಕಾ ಪ್ರಹಾರ ಮುಂದುವರೆಸಿವೆ. ಕಾಂಗ್ರೆಸ್‌ನಿಂದ 40 ಪರ್ಸೆಂಟ್‌ ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ಮುಂದಾಗಿದೆ. ಬಿಜೆಪಿಯಲ್ಲಿ "ರೌಡಿ ಮೋರ್ಚಾ" ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬಸವರಾಜ ಬೊಮ್ಮಾಯೊ ಅವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ? ಎಂದು ಕಿಡಿಕಾರಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೊತ್ವಾಲ್‌ ಶಿಷ್ಯ ಮತ್ತು ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ನಲಪಾಡ್‌ ಅವರ ಹಿಂದಿನ ದಿನಗಳ ಬಗ್ಗೆ ಟ್ವೀಟ್‌ ಮಾಡಿ ತಿರುಗೇಟು ನೀಡಲಾಗಿತ್ತು. ಈಗ ಸಿಎಂ ಬೊಮ್ಮಾಯಿ ಅವರು ಎರಡೂ ಪಕ್ಷಗಳಲ್ಲಿರುವ ರೌಡಿಗಳ ಪಟ್ಟಿ ಸಿದ್ಧಪಡಿಸಲಿ ಎಂದು ತಿಳಿಸಿದ್ದಾರೆ.

ಕೊತ್ವಾಲ್‌ನ ನೆಚ್ಚಿನ ಶಿಷ್ಯ! ಕಾಂಗ್ರೆಸ್‌ ರಾಜ್ಯಾಧ್ಯಕ್ಷರ 'ಆ ದಿನಗಳು' ಮರೆತಿದೆಯಾ?

ನಡ್ಡಾ ಭೇಟಿ ವಿಳಂಬಕ್ಕೆ ಟೀಕೆಗೆ ತಿರುಗೇಟು: ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ ಮಾಡುತ್ತೇನೆ ಎಂದಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ನಡ್ಡಾ ಅಪಾಯಿಂಟ್ಮೆಂಟ್ ಕೊಡಲು ಸತಾಯಿಸುತ್ತಿರುವುದೇಕೆ? ರಾಜ್ಯದ ಸಿಎಂ ಬೊಮ್ಮಾಯಿಯವರನ್ನ ಕಂಡರೆ ಹೈಕಮಾಂಡಿಗೆ ಅಷ್ಟೊಂದು ತಾತ್ಸಾರವೇ? ಬೊಮ್ಮಾಯಿಯವರು ಅಷ್ಟು ಅಸಮರ್ಥರೆ? ಎಂದು ಟೀಕಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿ ಕೇಂದ್ರ ಸಚಿವರ ಭೇಟಿ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯ ಕೇಳಿದ್ದು, ನಾಳೆ ಸಮಯ ದೊರೆಯುವ ವಿಶ್ವಾಸವಿದೆ. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಭೂಪೇಂದ್ರ ಯಾದವ್ ಮತ್ತು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದು,  ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಮೇಕೆದಾಟು, ಭದ್ರಾ ಮೇಲ್ಡಂಡೆ ಯೋಜನೆ, ಮಹದಾಯಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟನೆಗೆ ಆಹ್ವಾನಿಸಲಾಗುವುದು ಹಾಗೂ ಭೂಪೇಂದ್ರ ಯಾದವ್ ಅವರೊಂದಿಗೆ  ಪರಿಸರ ಸಂಬಂಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

ರಾಜ್ಯ ಕಾಂಗ್ರೆಸ್, ಹೈಕಮಾಂಡ್ ಎರಡೂ ನಿರುದ್ಯೋಗಿ: ಒಂದು ಕಾಲದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸ್ಥಿತಿ ದುರಂತವಾಗಿತ್ತು. 21 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಈಗಲೂ ಬ್ಯಾಕ್ ಚೇರ್ ಡ್ರೈವಿಂಗ್ ಮಾಡುತ್ತಿರುವ ಸೋನಿಯಾ ಮೇಡಮ್ ಅವರ ಗನ್ ಮ್ಯಾನ್‌ಗಳನ್ನು ಭೇಟಿ ಮಾಡಿ, ಅದನ್ನೆ ಹೈಕಮಾಂಡ್ ಭೇಟಿ ಎಂದು ಕಾಂಗ್ರೆಸ್‌ ನಾಯಕರು ಬೀಗುತ್ತಿದ್ದರು. ಈಗ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಎರಡು ಕೂಡಾ ನಿರುದ್ಯೋಗಿ! ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು!? ಮಲ್ಲಿಕಾರ್ಜುನ ಖರ್ಗೆ ಅವರು ಹೆಸರಿಗೆ ಮಾತ್ರ ಅಧ್ಯಕ್ಷ. ಸ್ವತಂತ್ರ ನಿರ್ಧಾರ ಪ್ರಕಟಿಸುವುದು ಬಿಡಿ, ಸಹಿ ಮಾಡುವ ಮೊದಲು, ಪೆನ್ನಿನ ಟಾಪ್ ಓಪನ್ ಮಾಡಲೂ ಬ್ಯಾಕ್ ಚೇರ್ ಡ್ರೈವರ್ ಸೋನಿಯಾ ಮೇಡಮ್ ಅವರ ಆಣತಿಗೆ ಕಾಯಬೇಕು. ರಾಜ್ಯ ಸರ್ಕಾರದ ಸಮರ್ಥ ಆಡಳಿತ ರಾಜ್ಯ ಕಾಂಗ್ರೆಸ್‌ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ದಿನಕ್ಕೊಂದು ಸುಳ್ಳಿನ ಮೂಟೆ ಬಿಚ್ಚಿಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಗ್ರಹಿಸಿದ್ದ ಸುಳ್ಳಿನ ಗೋದಾಮು ಖಾಲಿ ಆಗುತ್ತಿದೆ ಎನ್ನುವ ಚಿಂತೆಯಿಂದ ಕಾಂಗ್ರೆಸ್ ನಾಯಕರು ಮೈ ಕೈ ಪರಚಿಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios