* ಮೋದಿ ಸರ್ಕಾರದ ವಿರುದ್ಧದ ಪುಸ್ತಕ ಟೀಕಿಸಿದ್ದಕ್ಕೆ ಲೇವಡಿ* ಅಂಬಾನಿ, ಅದಾನಿಗಳ ಗುಲಾಮಗಿರಿಯಿಂದಲೂ ಹೊರ ಬಂದು ಕನ್ನಡದ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು* ಜನರ ಮೇಲೆ ತೆರಿಗೆ ಹೊರೆಯನ್ನು 2013ಕ್ಕಿಂತ 2.7 ಪಟ್ಟು ಹೆಚ್ಚಿಸಲಾಗಿದೆ
ಬೆಂಗಳೂರು(ಜು.05): ‘ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರೆ, ನನ್ನನ್ನು ಹೀಗಳೆಯುವ ಮೊದಲು ತಾವು ಆರ್‌ಎಸ್‌ಎಸ್, ನರೇಂದ್ರ ಮೋದಿ, ಅಮಿತ್ ಶಾ ಗುಲಾಮಗಿರಿಯಿಂದ ಹೊರಬರಬೇಕು. ಹಾಗೆಯೇ ಅಂಬಾನಿ, ಅದಾನಿಗಳ ಗುಲಾಮಗಿರಿಯಿಂದಲೂ ಹೊರ ಬಂದು ಕನ್ನಡದ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ದುರಾಡಳಿತದ ಬಗ್ಗೆ ನಾನು ಹೇಳುತ್ತಿರುವ ಪ್ರತಿ ಸಂಗತಿಯನ್ನೂ ದಾಖಲೆ ಆಧರಿಸಿಯೇ ಹೇಳುತ್ತಿದ್ದೇನೆ. ನಾನು ಸುಳ್ಳು ಹೇಳಿದ್ದೇನೆಂದು ಆರೋಪಿಸಿ ಹುಸಿ ಮಾತುಗಳನ್ನು ಗಾಳಿಗೆ ತೂರಬೇಡಿ. 1999ರಿಂದ ಈವರೆಗೆ ಕೇಂದ್ರ ಸರ್ಕಾರದಿಂದ ಒಂದು ಸಮಗ್ರ ಶ್ವೇತಪತ್ರವನ್ನು ಹೊರಡಿಸಿ ಎಂದು ಸವಾಲು ಎಸೆದಿದ್ದಾರೆ.
ಡಿಕೆಶಿ ಬಂಡೆಗೆ ಡೈನಾಮೈಟ್ ಇಡಲು ಸಿದ್ದು ಸಜ್ಜು: ಬಿಜೆಪಿ
ನರೇಂದ್ರ ಮೋದಿ ಸರ್ಕಾರದ ಆಡಳಿತ ಟೀಕಿಸಿ ತಾವು ಹೊರ ತಂದಿದ್ದ ‘ಮೋದಿ ಸರ್ಕಾರಕ್ಕೆ ವರುಷ ಎಂಟು, ಅವಾಂತರ ನೂರೆಂಟು’ ಎಂಬ ಪುಸ್ತಕದ ಬಗ್ಗೆ ಟೀಕೆ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಾನು ಕಿರುಪುಸ್ತಕ ಬಿಡುಗಡೆ ಮಾಡಿದ ಕೂಡಲೇ ಜೋಶಿಯವರು ಸಿದ್ದರಾಮಯ್ಯ ಪುಸ್ತಕ ಸುಳ್ಳಿನ ಕಂತೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು. ಅವರ ಹೇಳಿಕೆ ನೋಡಿದ ಮೇಲೆ ಕೇಂದ್ರದ ಸಚಿವರೊಬ್ಬರು ಇಷ್ಟೊಂದು ಹಾಸ್ಯಾಸ್ಪದವಾಗಿ ಮೋದಿಯವರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರಲ್ಲಾ ಎಂದು ನನಗೆ ಮುಜುಗರವಾಯಿತು. ಮೋದಿ ಸರ್ಕಾರದ ಮಹಾ ಜನದ್ರೋಹವೆಂದರೆ ಅದಾನಿ, ಅಂಬಾನಿ ಮುಂತಾದ ಕಾರ್ಪೋರೇಟ್ ಧಣಿಗಳ ಆದಾಯದ ಮೇಲಿನ ತೆರಿಗೆಯನ್ನು ಶೇ.30 ರಿಂದ ಶೇ. 22ಕ್ಕೆ ಇಳಿಸಲಾಗಿದೆ. ಜನರ ಮೇಲೆ ತೆರಿಗೆ ಹೊರೆಯನ್ನು 2013ಕ್ಕಿಂತ 2.7 ಪಟ್ಟು ಹೆಚ್ಚಿಸಲಾಗಿದೆ. ಮೋದಿಯವರ ಸರ್ಕಾರಕ್ಕೆ ನಿಜಕ್ಕೂ ಧಮ್ ಇದ್ದರೆ ಯುಪಿಎ ಸರ್ಕಾರದ ಕಾಲಕ್ಕೆ ನಿಂತು ಹೋಗಿರುವ ಎನ್‌ಎಸ್‌ಎಸ್‌ಒ ಸರ್ವೆಗಳನ್ನು ಕೂಡಲೇ ಮಾಡಿಸಬೇಕು. ಸಚಿವರಾಗಿ ನೀವು ಅದರ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದ್ದಾರೆ.
