ಲಿಂಗಾಯತ ವಿಷಯದಲ್ಲಿ ತಪ್ಪಾಗಿದ್ದರೆ ಹೇಳಲಿ, ಕ್ಷಮೆ ಕೇಳ್ತೇನೆ: ಪ್ರಲ್ಹಾದ್ ಜೋಶಿ
ಲಿಂಗಾಯತ ವಿಷಯದಲ್ಲಿ ಏನಾದರೂ ತಪ್ಪಾಗಿದ್ದರೆ ನೇರವಾಗಿ ಹೇಳಲಿ. ತಪ್ಪು ಎಸಗಿದ್ದರೆ ಕ್ಷಮೆ ಕೇಳಲೂ ಹಿಂಜರಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವೀರಶೈವ ಲಿಂಗಾಯತ ಸ್ವಾಮೀಜಿಯವರಲ್ಲಿ ಕೇಳಿಕೊಂಡಿಕೊಂಡಿದ್ದಾರೆ.
ಹುಬ್ಬಳ್ಳಿ (ಮಾ.29): ಲಿಂಗಾಯತ ವಿಷಯದಲ್ಲಿ ಏನಾದರೂ ತಪ್ಪಾಗಿದ್ದರೆ ನೇರವಾಗಿ ಹೇಳಲಿ. ತಪ್ಪು ಎಸಗಿದ್ದರೆ ಕ್ಷಮೆ ಕೇಳಲೂ ಹಿಂಜರಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವೀರಶೈವ ಲಿಂಗಾಯತ ಸ್ವಾಮೀಜಿಯವರಲ್ಲಿ ಕೇಳಿಕೊಂಡಿಕೊಂಡಿದ್ದಾರೆ. ಜೋಶಿ ಲಿಂಗಾಯತರನ್ನು ತುಳಿದಿದ್ದಾರೆ ಎಂಬ ಆರೋಪಗಳಿಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಲೋಕಸಭಾ ಸದಸ್ಯನಾದ ಮೇಲೆ ಕ್ಷೇತ್ರದಲ್ಲಿ ಎಂಟರಲ್ಲಿ ಏಳು ಜನ ಲಿಂಗಾಯತರಿಗೆ ಟಿಕೆಟ್ ಕೊಡಲಾಗಿದೆ. ದಿಂಗಾಲೇಶ್ವರ ಶ್ರೀಗಳ ವೈಯಕ್ತಿಕ ಆರೋಪಗಳಿಗೆ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದರು. ದಿಂಗಾಲೇಶ್ವರ ಶ್ರೀ ಬಗ್ಗೆ ನನಗೆ ಶ್ರದ್ಧೆ ಇದೆ. ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಬಗೆಹರಿಸುತ್ತೇವೆ. ಸ್ವಾಮೀಜಿ ಸಮಯ ಕೊಟ್ಟರೆ ಅವರ ಜತೆ ಚರ್ಚಿಸಲು ನಾನು ಸಿದ್ಧನಿದ್ದೇನೆ. ಒಂದು ವೇಳೆ ನಾನು ತಪ್ಪು ಎಸಗಿದ್ದರೆ ಅದನ್ನು ನೇರವಾಗಿ ತಿಳಿಸಲಿ ಕ್ಷಮೆ ಕೇಳುತ್ತೇನೆ ಎಂದರು.
ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್‌ನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಮೂರುಸಾವಿರಮಠದ ಆವರಣದಲ್ಲಿ ವಿವಿಧ ಮಠಾಧೀಶರೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು. ಚಿಂತನ ಮಂಥನ ಸಭೆಯಲ್ಲಿ ಬರೋಬ್ಬರಿ ವಿವಿಧ ಜಿಲ್ಲೆಗಳ 40ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ಕಳೆದ ಕೆಲ ದಿನಗಳಿಂದ ದಿಂಗಾಲೇಶ್ವರ ಶ್ರೀಗಳು ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಶುರುವಾಗಿತ್ತು. ಭಕ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಶ್ರೀಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರ ಚಿಂತನ ಮಂಥನ ಸಭೆಯನ್ನು ದಿಂಗಾಲೇಶ್ವರ ಶ್ರೀಗಳು ಕರೆದಿದ್ದರು. ಸಭೆಯಲ್ಲಿ ಸಾಮಾಜಿಕ, ರಾಜಕೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೆ ಸಭೆಯಲ್ಲಿ ಬರೀ ರಾಜಕೀಯವಾಗಿ ಮಾತ್ರ ಚರ್ಚೆ ನಡೆದಿದೆ ಎಂಬುದು ಸ್ಪಷ್ಟ.
ನಾವು 20 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ: ಸಿಎಂ ಸಿದ್ದರಾಮಯ್ಯ
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ. ಶ್ರೀಮಠದಲ್ಲಿ ನಡೆದ ಚಿಂಥನ ಮಂತನ ಸಭೆಯಲ್ಲಿ ಮಠಾಧಿಪತಿಗಳು ಸೇರಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಿಜೆಪಿ ಹೈಕಮಾಂಡ್ ಪ್ರಹ್ಲಾದ ಜೋಶಿ ಅವರನ್ನು ಮಾ. 31ರೊಳಗೆ ಬದಲಿಸಿ ಬೇರೊಬ್ಬರಿಗೆ ಟಿಕೆಟ್ ಘೋಷಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ಮತ್ತೊಮ್ಮೆ ಲಿಂಗಾಯತ ಸ್ವಾಮೀಜಿಗಳ ಸಭೆ ಕರೆದು ನಮ್ಮ ಮುಂದಿನ ನಡೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.