ಕಾಂಗ್ರೆಸ್‌ನ 200 ಯುನಿಟ್‌ ಉಚಿತ ವಿದ್ಯುತ್‌ ಭರವಸೆ ಬೋಗಸ್‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಕುರಿತು ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. 

ಬೆಂಗಳೂರು (ಮಾ.08): ಕಾಂಗ್ರೆಸ್‌ನ 200 ಯುನಿಟ್‌ ಉಚಿತ ವಿದ್ಯುತ್‌ ಭರವಸೆ ಬೋಗಸ್‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಕುರಿತು ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೇ, ಗೃಹ ಜ್ಯೋತಿ ಜಾರಿಗೊಳಿಸುವುದು ಹಾಗೂ 10 ಕೆ.ಜಿ. ಅಕ್ಕಿ ನೀಡುವುದು ನಿಶ್ಚಿತ. ಈ ಗ್ಯಾರಂಟಿ ಯೋಜನೆಗಳನ್ನು ನಾವು ಜಾರಿ ಮಾಡದಿದ್ದರೆ ನಾನು, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್‌ ಅವರು ರಾಜಕಾರಣದಲ್ಲೇ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೊರಬದ ಸರದಾರನಾರು: ಬಂಗಾರಪ್ಪ ಕ್ಷೇತ್ರ ಸೊರಬ ಕ್ಷೇತ್ರದಲ್ಲಿ ಮತ್ತೆ ಮಕ್ಕಳ ಕದನ?

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯನ್ನು ಮುಖ್ಯಮಂತ್ರಿಗಳು ಬೋಗಸ್‌ ಯೋಜನೆ ಎಂದು ಕರೆದಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮಾಧ್ಯಮ ವೇದಿಕೆಯಾದರೂ ಸರಿ, ಬಹಿರಂಗ ವೇದಿಕೆಯಾದರೂ ಸರಿ. ಮುಖ್ಯಮಂತ್ರಿಗಳು ಚರ್ಚೆಗೆ ಬರಲಿ ಎಂದು ಹೇಳಿದರು.

ನಾನು ನಾಲ್ಕೂವರೆ ವರ್ಷಗಳ ಕಾಲ ಇಂಧನ ಸಚಿವನಾಗಿದ್ದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಪ್ರಮಾಣವನ್ನು ನನ್ನ ಅವಧಿಯಲ್ಲಿ 10 ಸಾವಿರ ಮೆಗಾವ್ಯಾಟ್‌ನಿಂದ 20 ಸಾವಿರ ಮೆಗಾವ್ಯಾಟ್‌ಗೆ ಏರಿಸಲಾಗಿತ್ತು. ನಮ್ಮ ಸರ್ಕಾರದ ಸಾಧನೆ ಫಲವಾಗಿ ರಾಜ್ಯ ಸರ್ಕಾರ ಹೆಚ್ಚುವರಿ ವಿದ್ಯುತ್‌ ಮಾರಾಟದಿಂದ 3 ಸಾವಿರಕ್ಕೂ ಹೆಚ್ಚು ಕೋಟಿ ರು. ಆದಾಯ ಪಡೆಯುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಈ ಅಂಶ ಉಲ್ಲೇಖವಾಗಿದೆ. ಇನ್ನು ಬಿಜೆಪಿ 2018ರ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ನೀಡುವ ವಿದ್ಯುತ್‌ ಅನ್ನು 7 ಗಂಟೆಯಿಂದ 10 ಗಂಟೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿತ್ತು. ಇದರಿಂದ 6 ಸಾವಿರ ಕೋಟಿ ರು. ವೆಚ್ಚ ತಗಲುತ್ತದೆ. ಅವರು ಯಾವ ಲೆಕ್ಕದಲ್ಲಿ ಈ ಭರವಸೆ ನೀಡಿದ್ದರು ಎಂದು ಪ್ರಶ್ನಿಸಿದರು.

ಮನೆಯಲ್ಲಿ ಸಿಕ್ಕಿದ್ದು ನಮ್ಮದೇ ಹಣ, ದಾಖಲೆ ಇದೆ: ಮಾಡಾಳು ವಿರೂಪಾಕ್ಷಪ್ಪ

ಖಾಸಗೀಕರಣ ಬಿಜೆಪಿ ಹುನ್ನಾರ: ಇನ್ನು ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ರಾಜ್ಯ ಕಾಂಗ್ರೆಸ್‌ ಎಸ್ಕಾಂಗಳ ಖಾಸಗೀಕರಣಕ್ಕೆ ಹುನ್ನಾರ ನಡೆಸಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಕೇಂದ್ರ ಇಂಧನ ಸಚಿವರು ವಿದ್ಯುತ್‌ ಇಲಾಖೆಯನ್ನು ಖಾಸಗೀಕರಣ ಮಾಡುವುದಾಗಿ ಚರ್ಚೆ ಮಾಡಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಇನ್ನು 120 ತಾಲೂಕುಗಳಲ್ಲಿ ಸೋಲಾರ್‌ ಪಾರ್ಕ್ ಮಾಡಿ ವಿದ್ಯುತ್‌ ವರ್ಗಾವಣೆ ನಷ್ಟವನ್ನು ತಗ್ಗಿಸಿದ್ದೇವೆ. ಆ ಮೂಲಕ ದೇಶಕ್ಕೆ ಮಾದರಿಯಾಗಿದ್ದೇವೆ. ವಿದ್ಯುತ್‌ ಖಾಸಗೀಕರಣ ಬಿಜೆಪಿಯ ಹುನ್ನಾರವೇ ಹೊರತು ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.