ಬೆಂಗಳೂರು, [ಅ.22]: ವೀರ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ವಿಚಾರಕ್ಕೆ ಕಿಡಿ ಹೊತ್ತಿಸಿದ್ದ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮುಗಿಬಿದ್ದಿದ್ದು, ಈಗಾಗಲೇ ತಿಳಿದಿರುವ ವಿಷಯ. ಆದ್ರೆ, ಇದೀಗ ಮತ್ತೊಂದು ಟ್ವೀಟ್ ಮಾಡಿ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕೆಣಕ್ಕಿದ್ದಾರೆ.

'ಸಾವರ್ಕರ್‌ಗೆ ಆಮೇಲೆ ಕೊಡುವಿರಂತೆ, ಮೊದಲು ಸಿದ್ದಗಂಗಾ ಶ್ರೀಗೆ ಭಾರತರತ್ನ ನೀಡಿ'

ಮಹಾರಾಷ್ಟ್ರ ಚುನಾವಣೆ ಮುಗಿದಿರುವುದರಿಂದ ಬಿಜೆಪಿ ನಾಯಕರು ವಿ.ಡಿ.ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಬಿಟ್ಟು ಈಗಲಾದರೂ ರಾಜ್ಯ ಹಾಗೂ ದೇಶದಲ್ಲಿನ ಸಮಸ್ಯೆಗಳ ನಿವಾರಣೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.

ಮುಂದಿನ ಚುನಾವಣೆ ಸಂದರ್ಭದಲ್ಲಿ ವಿ.ಡಿ.ಸಾವರ್ಕರ್ ಬಗ್ಗೆ ಮಾತನಾಡೋಣ‌. ಈಗ ತುರ್ತಾಗಿ ನಿರುದ್ಯೋಗ, ಬೆಲೆ ಏರಿಕೆ, ದಿವಾಳಿಯಾಗುತ್ತಿರುವ ಬ್ಯಾಂಕ್‌ಗಳು, ರೈತರ ಕಷ್ಟಗಳು, ನೆರೆ-ಬರದ ಬಗ್ಗೆ ಚರ್ಚೆ ಮಾಡೋಣ ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಬಿಜೆಪಿ ವಿ.ಡಿ.ಸಾವರ್ಕರ್ ಗೆ ಭಾರತರತ್ನ ಕೊಡುವುದಾಗಿ ಕಾರ್ಯಸೂಚಿ ರೂಪಿಸಿತ್ತು‌‌. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್, ಟ್ವೀಟ್ ಸಮರವೂ ಜೋರಾಗಿ ನಡೆದಿತ್ತು. ಇದೀಗ ಚುನಾವಣೆ ಮುಗಿದಿದ್ದು, ಈಗಲಾದರೂ ಸಾವರ್ಕರ್ ವಿಚಾರ ಹಿಂದೆ ಸರಿಯಲಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಚುನಾವಣೆ ವೇಳೆ ಬಿಜೆಪಿ ದೇಶ-ಧರ್ಮ ಹಾಗೂ ಹಿಂದುತ್ವ ನೆನಪಾಗುತ್ತೆ ಎಂದು ಆರೋಪಗಳಿವೆ. ಇದ್ರಿಂದ ಸಿದ್ದು ಈ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.