Asianet Suvarna News Asianet Suvarna News

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಮುಖಂಡರ ಶಪಥ

ಕಳೆದ ಒಂದು ವರ್ಷದಿಂದ ಪರಸ್ಪರ ಅಷ್ಟಕ್ಕಷ್ಟೇ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಅವರು ಪರಸ್ಪರ ಒಂದಾಗಿರುವುದು ವಿಷೇಷವಾಗಿತ್ತು. 

Leaders vow to Bring Congress to Power in Karnataka grg
Author
First Published Jan 19, 2023, 8:00 PM IST

ಬಾಗಲಕೋಟೆ(ಜ.19): ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿರುವ ಕಾಂಗ್ರೆಸ್‌ ಮುಖಂಡರು, ಜನಪರ ಆಡಳಿತ, ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವ ಜೊತೆ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುವ ಶಪಥ ಮಾಡಿದರು. ಬುಧವಾರ ಬಾಗಲಕೋಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ, ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ ಸೇರಿ ಅನೇಕ ಮುಖಂಡರು ಪಕ್ಷವನ್ನು ಅಧಿಕಾರಕ್ಕೆ ತರುವ ಭಾಗವಾಗಿ ಮಾತನಾಡಿದರಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದ ಪಟ್ಟಿಯನ್ನು ಕಾರ್ಯಕರ್ತರ ಮುಂದೆ ಇಡುವ ಮೂಲಕ ಸಂಘಟನಾತ್ಮಕವಾಗಿ ಪಕ್ಷ ಮುನ್ನಡೆಸಬೇಕು ಎಂದು ಹೇಳಿದರು.

ಕಿಕ್ಕಿರಿದು ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರು:

ನವನಗರದ ಕಾಳಿದಾಸ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮ ಕಾಂಗ್ರೆಸ್‌ ಪಕ್ಷಕ್ಕೆ ಚೈತನ್ಯ ನೀಡುವಲ್ಲಿ ಯಶಸ್ವಿಯಾಯಿತು. ಮೈದಾನದಲ್ಲಿ ಹಾಕಲಾಗಿದ್ದ 10 ಸಾವಿರಕ್ಕೂ ಹೆಚ್ಚು ಕುರ್ಚಿಗಳು ಭರ್ತಿಯಾಗಿದ್ದವು. ಸುತ್ತಲೂ ಕಾಂಗ್ರೆಸ್‌ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮಾತನಾಡುವ ಸಂದರ್ಭದಲ್ಲಿ ಅಭಿಮಾನದಿಂದ ಚಪ್ಪಾಳೆ ಹೊಡೆದು, ಕೂಗಿ ಸಂಭ್ರಮಿಸಿದ ಕಾರ್ಯಕರ್ತರು ಬಿಜೆಪಿಯ ದುರಾಡಳಿತ ಹಾಗೂ ಬೆಲೆ ಏರಿಕೆ ಕುರಿತು ಮಾತನಾಡಿದಾಗಲೆಲ್ಲ ಸಿಳ್ಳೆ ಹೊಡೆದು ನಾಯಕರನ್ನು ಹುರುದುಂಬಿಸಿದರು.

ಬಿಜೆಪಿಯಲ್ಲಿ ಓಲೈಕೆ ರಾಜಕೀಯವಿಲ್ಲ, ಭಾರತೀಯರು ಅಂದ್ರೆ ಎಲ್ಲರೂ ಒಂದೇ: ಅಶ್ವತ್ಥ್‌ ನಾರಾಯಣ್‌!

ಟಿಕೆಟ್‌ ಆಕಾಂಕ್ಷಿಗಳ ಬಲ ಪ್ರದರ್ಶನ:

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ತೇರದಾಳ ಕ್ಷೇತ್ರದ ಕೈ ಟಿಕೆಟ್‌ ಆಕಾಂಕ್ಷಿಗಳಾದ ಪದ್ಮಜೀತ ನಾಡಗೌಡ ಹಾಗೂ ಸಿದ್ದಣ್ಣ ಕೊಣ್ಣೂರ ಬೆಂಬಲಿಗರು ವೇದಿಕೆಯ ಮುಂಭಾಗದಲ್ಲಿ ತಮ್ಮ ನಾಯಕರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸುವ ಬಿತ್ತಿಪತ್ರ ಹಿಡಿದು ಸಾಲುಗಟ್ಟಿನಿಂತ ದೃಶ್ಯ ಗಮನಸೆಳೆಯಿತು.

ಸಿದ್ದರಾಮಯ್ಯ ಅವರನ್ನ ಹೊಗಳಿದ ಮುನಿಯಪ್ಪ:

ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ತಮ್ಮ ಭಾಷಣದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳುವ ಮೂಲಕ ಅವರ 5 ವರ್ಷದ ಮುಖ್ಯಮಂತ್ರಿ ಆಡಳಿತದ ಸಾಧನೆಗಳನ್ನು ಹೇಳುವ ಮೂಲಕ ಗಮನಸೆಳೆದರು. ಪರಿಶಿಷ್ಟಜಾತಿ/ಪಂಗಡಗಳ ಮೀಸಲಾತಿ ವಿಷಯದಲ್ಲಿ ಬಿಜೆಪಿ ಆಡಳಿತದಲ್ಲಿ ಸದ್ಯ ನಡೆದಿರುವ ಗೊಂದಲ ಹಾಗೂ ಅನುದಾನದ ದುರ್ಬಳಕೆ ಕುರಿತು ಮಾತನಾಡುವ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅವರ ಬದ್ಧತೆ ಕುರಿತು ಮಾತನಾಡುವ ಮೂಲಕ ತಮ್ಮ ಅಸಮಾಧಾನ ಕಡಿಮೆಯಾಗಿದೆ ಎಂಬಂತೆ ಮಾತನಾಡಿದರು.

ಒಂದಾದ ಎಸ್‌.ಆರ್‌.ಪಾಟೀಲ-ಸಿದ್ದರಾಮಯ್ಯ:

ಕಳೆದ ಒಂದು ವರ್ಷದಿಂದ ಪರಸ್ಪರ ಅಷ್ಟಕ್ಕಷ್ಟೇ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಅವರು ಪರಸ್ಪರ ಒಂದಾಗಿರುವುದು ಇಂದಿನ ವಿಷೇಷವಾಗಿತ್ತು. ಎಸ್‌.ಆರ್‌.ಪಾಟೀಲ ಅವರ ಮನೆಗೆ ಉಪಹಾರಕ್ಕೆ ತೆರಳಿದ ಸಿದ್ದರಾಮಯ್ಯ, ಉಪಾಹಾರ ಸೇವಿಸಿ ಕೆಲಹೊತ್ತು ಕಳೆದರಲ್ಲದೇ, ವೇದಿಕೆಯಲ್ಲಿಯೂ ಪರಸ್ಪರ ಮಾತನಾಡುವ ಮೂಲಕ ಹಳೆಯ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದರು. ಕಳೆದ ವರ್ಷ ನಡೆದ ಪರಿಷತ್‌ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾಗಿದ್ದ ಎಸ್‌.ಆರ್‌.ಪಾಟೀಲ, ಸಿದ್ದರಾಮಯ್ಯ ಅವರ ನಡುವೆ ವೈಮನಸ್ಸು ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾಧ್ವನಿಯಲ್ಲಿಯೂ ಮೀಸಲಾತಿ ಪ್ರಸ್ತಾಪಿಸಿದ ಕಾಶಪ್ಪನವರ:

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಮೀಸಲಾತಿ ವಿಷಯದಲ್ಲಿ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಿದ್ದು, ಎಲ್ಲರಿಗೂ ಮೀಸಲಾತಿ ಕೊಡುವ ನೆಪ ಹೇಳುತ್ತಾರೆ. ಆದರೆ, ಯಾರಿಗೂ ಮೀಸಲಾತಿ ನೀಡಿಲ್ಲ. ಪಂಚಮಸಾಲಿಗಳಿಗೆ 2ಡಿ, 3ಡಿ ಮೀಸಲಾತಿ ನೀಡುವ ಮಾತನಾಡುತ್ತಾರೆ. ಆದರೆ, ಇದು ಅರ್ಥವಿಲ್ಲದ್ದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವ ನಿರಾಣಿ ಅವರು ಸರ್ಕಾರಕ್ಕೆ .200 ಕೋಟಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ನನಗೆ ಮೋದಿ ಕಂಡರೆ ಭಯವಿಲ್ಲ, ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ: ಸಿದ್ದರಾಮಯ್ಯ

ವೇದಿಕೆ, ಉಪಾಹಾರ ವಿಷಯದಲ್ಲಿ ಗೊಂದಲ:

ಪ್ರಜಾಧ್ವನಿ ಮುಖ್ಯ ವೇದಿಕೆ ನಾಯಕರಿಂದ ತುಂಬಿ ತುಳುಕುತ್ತಿತ್ತು. ವೇದಿಕೆ ಮುಂಬಾಗದಲ್ಲಿ ಮುಂಚೂಣಿ ನಾಯಕರು ಇದ್ದರೆ, ಹಿಂದೆ, ಎಡ-ಬಲದಲ್ಲಿ ಶಾಸಕರು, ಮಾಜಿ ಶಾಸಕರು ಸೇರಿ 70ಕ್ಕೂ ಹೆಚ್ಚು ನಾಯಕರು ಆಸೀನರಾಗಿದ್ದರು. ಇದರಿಂದ ವೇದಿಕೆ ಗಾಂಭೀರ್ಯ ಕಳೆದುಕೊಂಡಿತ್ತು. ಕಾರ್ಯಕರ್ತರಿಗೆ ಉಪಹಾರ ವಿತರಣೆ ಸಂದರ್ಭದಲ್ಲೂ ಗೊಂದಲ ಉಂಟಾಗಿತ್ತು.

ಮುಖಂಡರ ಕೈಯಲ್ಲಿ ಕನ್ನಡಪ್ರಭ

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕರ ಕೈಯಲ್ಲಿ ಇಂದಿನ ಕನ್ನಡಪ್ರಭ ಪತ್ರಿಕೆ ಇತ್ತಲ್ಲದೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿ ಎಲ್ಲರ ಕೈಯಲ್ಲಿಯೂ ಕನ್ನಡಪ್ರಭ ರಾರಾಜಿಸುತ್ತಿತ್ತು. ಎಲ್ಲರೂ ಪತ್ರಿಕೆಯನ್ನು ಓದುವ ಮೂಲಕ ಗಮನಸೆಳೆದರೆ, ಬಹುತೇಕ ನಾಯಕರು ಕನ್ನಡಪ್ರಭ ಪತ್ರಿಕೆಯನ್ನು ಓದಿದ ನಂತರವೇ ತಮ್ಮ ಭಾಷಣಕ್ಕೆ ಮುಂದಾದರು.

Follow Us:
Download App:
  • android
  • ios