ಬಿಜೆಪಿಯಲ್ಲಿ ಭಿನ್ನಮತ: ವರಿಷ್ಠರು ಹೇಳಿದಂತೆ ಯತ್ನಾಳ್‌ ಕೇಳುವುದು ಒಳಿತು, ಆರ್‌. ಅಶೋಕ್‌

ಪಕ್ಷದ ಕೇಂದ್ರ ನಾಯಕತ್ವ ಏನು ಹೇಳುತ್ತದೆಯೋ ಅದನ್ನು ಪಾಲಿಸುವುದು ಈ ಅಶೋಕನ ಕ್ವಾಲಿಟಿ. ಸುಮಾರು 45 ವರ್ಷ ಕಾಲ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನನಗೆ ಅನುಭವವಿದೆ. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ಪಕ್ಷ ಸದೃಢವಾಗಬೇಕು ಎಂಬುದು ನನ್ನ ನಿಲುವು: ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

Leader of the Opposition R Ashok Talks Over Vijayapura BJP MLA Basanagouda Patil Yatnal  grg

ಬೆಂಗಳೂರು(ಡಿ.05): ಹಲವು ವೈಫಲ್ಯ, ಹಗರಣಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಟ ಮಾಡಿದ ಪ್ರಮುಖ ಪ್ರತಿಪಕ್ಷ ಬಿಜೆಪಿ ಈಗ ಒಡೆದ ಮನೆಯಂತಾಗಿದೆ. ಇನ್ನೇನು ಬೆಳಗಾವಿ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಸರ್ಕಾರದ ವಿರುದ್ಧ ನೇರಾನೇರ ಮುಗಿಬೀಳಬೇಕಾದ ಹಂತದಲ್ಲಿ ಬಿಜೆಪಿ ನಾಯಕರು ತಾವು ತಾವೇ ಬಡಿದಾಡಿಕೊಳ್ಳುವ ಸನ್ನಿವೇಶ ಸೃಷ್ಟಿಸಿಕೊಂಡು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೆಮ್ಮದಿಗೆ ಕಾರಣವಾಗುವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಒಂದು ವರ್ಷ ಪೂರೈಸಿರುವ ಆರ್. ಅಶೋಕ್ ಅವರು 'ಕನ್ನಡಪ್ರಭ'ದೊಂದಿಗೆ 'ಮುಖಾಮುಖಿ' ಯಾಗಿದ್ದು ಹೀಗೆ. 

• ಪ್ರತಿಪಕ್ಷದ ನಾಯಕರಾಗಿ ಒಂದು ವರ್ಷ ಪೂರೈಸಿದ್ದೀರಿ. ಜವಾಬ್ದಾರಿ ನಿಭಾಯಿಸಿದ ಬಗ್ಗೆ ಸಮಾಧಾನ ಇದೆಯೇ? 

ಕಳೆದ ಒಂದು ವರ್ಷದ ಅವಧಿಯಲ್ಲಿ ನಾನು ನನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ ತೃಪ್ತಿಯಿದೆ. ಪ್ರತಿಪಕ್ಷದ ನಾಯಕನಾಗಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಒಂದು ಸಣ್ಣ ಅವಕಾಶವನ್ನೂ ಬಿಟ್ಟಿಲ್ಲ. ಎಲ್ಲದಕ್ಕೂ ಸ್ಪಂದಿಸಿದ್ದೇನೆ. ಜನರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. 

ಸ್ವಾಮೀಜಿ ಮುಟ್ಟಿದರೆ ಹುಷಾರ್: ಸಿದ್ದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅಶೋಕ್‌!

• ಬೆಳಗಾವಿ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಪಕ್ಷ ನಾಯಕರಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಿ? 

ಕಳೆದ ಹತ್ತು ದಿನದಿಂದ ಅಧಿಕಾರಿಗಳ ಸಭೆ ಮಾಡಿದ್ದೇನೆ. ಪಕ್ಷದ ಹಿರಿಯ ಶಾಸಕರ ಸಭೆ ನಡೆಸಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಕ್ಕರೆ ಆ ಪಕ್ಷದ ಶಾಸಕರೊಂದಿಗೂ ಸಭೆ ಮಾಡುತ್ತೇನೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರದ ಹಗರಣಗಳು, ಬೆಳೆ ಪರಿಹಾರ ವಿಳಂಬಮತ್ತಿತರ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಸಜ್ಜಾಗಿದ್ದೇವೆ. 

• ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳಿಗೆ ಸಾಕಷ್ಟು ಅಸ್ತ್ರಗಳನ್ನು ಒದಗಿಸಿದ್ದರೂ ಅವುಗಳನ್ನು ಬಳಸಿಕೊಂಡು ರ್ಧಾರವನ್ನು ಕಟ್ಟಿ ಹಾಕುವಲ್ಲಿ ಏದುಸಿರು ಬಿಡುವಂತೆ ಕಾಣುತ್ತಿದೆ?

ಹಾಗೇನಿಲ್ಲ, ಈಗಾಗಲೇ ಸರ್ಕಾರವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಒಂದು ವಿಕೆಟ್ ಬಿದ್ದಿದೆ. ಸಂಬಂಧಪಟ್ಟ ಖಾತೆಯ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ನೀಡಿ ಜೈಲಿಗೆ ಹೋಗಬೇಕಾಯಿತು. ಅವರೇನೂ ಸ್ವಯಂಪ್ರೇರಣೆಯಿಂದರಾಜೀನಾಮೆ ನೀಡಲಿಲ್ಲ. ಪ್ರತಿಪಕ್ಷಗಳ ಹೋರಾಟದ ಪರಿಣಾಮ ನೀಡಿದ್ದು. ಮುಡಾ ಹಗರಣಕ್ಕೆ ಸಂಬಂಧಿಸಿ ನಾವು ನಡೆಸಿದ ಹೋರಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶ ಮಾಡುವ ಮಟ್ಟಕ್ಕೆ ತಂದು ನಿಲ್ಲಿಸಿದೆ. ಜಾರಿ ನಿರ್ದೇಶನಾಲಯ, ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇದಕ್ಕೂ ಮೊದಲು ಸಿದ್ದರಾಮಯ್ಯ ವಿರುದ್ದ ಒಂದು ಆರೋಪವೂ ಇರಲಿಲ್ಲ. ಈಗ ದೊಡ್ಡ ಕಪ್ಪು ಚುಕ್ಕೆ ಉಂಟಾಗಿದೆ. ಅವರ ಮುಖವಾಡ ಕಳಚಿ ಬಿದ್ದಿದೆ. 

ಉಪಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲೂ ಪ್ರತಿಪಕ್ಷಗಳಿಗೆ ಸೋಲುಂಟಾಗಿದೆ. ಜನ ಕಾಂಗ್ರೆಸ್ ಪರವಾಗಿ ಜನಾಭಿಪ್ರಾಯ ನೀಡಿದ್ದಾರಲ್ಲವೇ? 

ಈ ಉಪಚುನಾವಣೆ ಗೆಲುವಿನಿಂದ ಕಾಂಗ್ರೆಸ್ ಬೀಗುವುದು ಬೇಡ. ಹಿಂದೆ ನಮ್ಮ ಸರ್ಕಾರವಿದ್ದಾಗ ನಡೆದ 18 ಉಪಚುನಾವಣೆಗಳನ್ನು ಬಿಜೆಪಿ ಗೆದ್ದಿತ್ತು.

• ಅಂದರೆ, ಈ ಫಲಿತಾಂಶದಿಂದ ಪ್ರತಿಪಕ್ಷಗಳಿಗೆ ಹಿನ್ನಡೆ ಆಗಲಿಲ್ಲವೇ?

ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾವೇರಿಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದಿತ್ತು. ಚನ್ನಪಟ್ಟಣದಲ್ಲೂ ಮಿತ್ರ ಪಕ್ಷ ಜೆಡಿಎಸ್ ಗೆಲ್ಲುವ ನಿರೀಕ್ಷೆಯಿತ್ತು. ಸಂಡೂರಿನಲ್ಲೂ ಗೆಲುವಿನ ವಾತಾವರಣವಿತ್ತು. ಕಾಂಗ್ರೆಸ್ ಪಕ್ಷದ ಹಣಬಲದ ಎದುರು ನಮಗೆ ಗೆಲುವು ಸ್ವಲ್ಪದರಲ್ಲಿಯೇ ತಪ್ಪಿತು. 

ಒಂದು ಕಡೆ ಪ್ರಮುಖ ಪ್ರತಿಪಕ್ಷವಾಗಿ ಅಧಿವೇಶನ ಎದುರಿಸಲು ನಿಮ್ಮ ಬಿಜೆಪಿ ಸಜ್ಜಾಗಿದೆ. ನಿಮ್ಮ ಪಕ್ಷದಲ್ಲೇ ಗೊಂದಲ, ಭಿನ್ನಮತ ತಾರಕಕ್ಕೇರಿರುವುದು ಇರಿಸುಮುರಿಸಾಗುವುದಿಲ್ಲವೇ? 
ಪಕ್ಷದಲ್ಲಿನ ಭಿನ್ನಮತ ಚಟುವಟಿಕೆಗಳು ನನಗೂ ನೋವು ತಂದಿವೆ. ರಾಜಕೀಯ ಚಂಡಮಾರುತದ ಪರಿಣಾಮ ಮೋಡ ಕವಿದಂತಾಗಿದೆ. ಕೇಂದ್ರದ ನಾಯಕರು ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ನಾನೂ ಮಾತನಾಡಿದ್ದೇನೆ. ಈ ವಾರದಲ್ಲಿ ಎಲ್ಲವೂ ತಿಳಿಯಾಗಿ ಸುಖಾಂತ್ಯಗೊಳ್ಳಲಿದೆ. 

ಬಿಜೆಪಿ ಪಕ್ಷ ಅಧಿಕಾರದಲ್ಲಿರಲಿ ಅಥವಾ ಪ್ರತಿಪಕ ಸ್ಥಾನದಲ್ಲಿರಲಿ. ಗೊಂದಲ, ಬಿಕ್ಕಟ್ಟು ಮಾತ್ರ ನಿಶ್ಚಿತ ಎನ್ನುವಂತಾಗಿದೆ? 

ಆ ತರ ಏನೂ ಇಲ್ಲ, ಹಿಂದೆ ಯಡಿಯೂರಪ್ಪ ಅವರಿದ್ದಾಗ ದೊಡ್ಡ ನಾಯಕತ್ವ ಇತ್ತು. ಯಡಿಯೂರಪ್ಪ ಬದಲಾದ ಬಳಿಕ ಹೊಸ ನಾಯಕತ್ವ ಬರಬೇಕಾದರೆ ಸ್ವಲ್ಪ ಅಡೆತಡೆ ಎದುರಾಗುವುದು ಸಹಜ, ಇದು ಬಿಜೆಪಿ ಅಂತ ಅಲ್ಲ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಇಂಥ ಬೆಳವಣಿಗೆ ಸಾಮಾನ್ಯ. ಸ್ವಲ್ಪ ಸಮಯ ಬೇಕು ಅಷ್ಟೆ. ಎಲ್ಲವೂ ಸರಿಯಾಗಲಿದೆ. ನಾಯಕತ್ವ ಗಟ್ಟಿಯಾದಂತೆ ಈ ಭಿನ್ನಮತ ಚಟುವಟಿಕೆ ಕೂಡ ಕಾಣೆಯಾಗುತ್ತದೆ. 

ರಾಜ್ಯ ಬಿಜೆಪಿಯಲ್ಲಿ ಇಂಥ ಬಂಡಾಯ ಚಟುವಟಿಕೆಗಳು ಜೀವಂತವಾಗಿ ಇರಬೇಕು ಎಂಬ ಆಶಯ ಕೆಲ ರಾಷ್ಟ್ರೀಯ ನಾಯಕರಲ್ಲಿದೆ ಎಂಬ ಮಾತು ಆಗಾಗ ಕೇಳಿಬರುತ್ತದೆ? ನಮ್ಮ ಪಕ್ಷದಲ್ಲಿ ಯಾವುದೇ ಸ್ವಾರ್ಥವಿಲ್ಲದ ಹೈಕಮಾಂಡ್ ಇದೆ. ಮೋದಿ, ಅಮಿತ್ ಶಾ ಅವರಿಗೆ ಏನು ಸ್ವಾರ್ಥವಿದೆ?

ಸಂತೋಷ್ ಅವರಿಗೆ ಯಾವ ಸ್ವಾರ್ಥವಿದೆ? ನಮ್ಮ ಕೇಂದ್ರದ ನಾಯಕತ್ವ ಇಂಥ ಚಟುವಟಿಕೆಗಳಿಗೆ ಯಾವತ್ತೂ ಪ್ರೋತ್ಸಾಹ ಕೊಡುವುದಿಲ್ಲ. 

• ಬಂಡಾಯ ಅಥವಾ ಭಿನ್ನಮತ ಉದ್ಭವಿಸಿ ಹಲವು ತಿಂಗಳುಗಳೇ ಆದರೂ ಇದನ್ನು ಬಗೆಹರಿಸಲು ನಿಮ್ಮ ರಾಷ್ಟ್ರೀಯ ನಾಯಕರಿಗೆ ಪುರುಸೊತ್ತು ಇಲ್ಲವೇ? 

ಇಷ್ಟು ವಿಳಂಬ ಯಾಕೆ? ಪದೇ ಪದೆ ಚುನಾವಣೆಗಳು ಎದುರಾಗುವುದು ವಿಳಂಬಕ್ಕೆ ಕಾರಣ ಅಷ್ಟೇ. ರಾಷ್ಟ್ರೀಯ ನಾಯಕರು ಬ್ಯುಸಿ ಆಗಿದ್ದರು. ಬೇರೆ ಯಾವುದೇ ಕಾರಣವಿಲ್ಲ, 

• ಯತ್ನಾಳ ಅವರು ಬಂಡೇಳುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಹಲವು ಬಾರಿ ಈ ರೀತಿ ನಡೆದಿದೆ. ಆದರೂ ಅವರ ಬಾಯಿಗೆ ಬೀಗ ಹಾಕಲು ವರಿಷ್ಠರು ಹಿಂದೇಟು ಹಾಕುತ್ತಿರುವುದು ಯಾಕೆ? 

ಹಿಂದೆ ಕೂಡ ಇಂಥದ್ದೇ ಘಟನೆ ಆದಾಗ ಯತ್ನಾಳ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಈಗ ವರಿಷ್ಠರು ಯತ್ನಾಳ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸುತ್ತಿರುವುದರಿಂದ ಎಲ್ಲವೂ ಸುಖಾಂತ್ಯವಾಗಲಿದೆ ಎಂಬ ನಿರೀಕ್ಷೆಯಿದೆ. 

• ಈಗ ಯತ್ನಾಳ ಮತ್ತಿತರ ನಾಯಕರ ಗುಂಪು ಬಹಿರಂಗವಾಗಿ ನಡೆಸುತ್ತಿರುವ ಚಟುವಟಿಕೆಗಳಿಗೆ ಪಕ್ಷದ ರಾಜ್ಯ ಘಟಕದ ಕೆಲ ಹಿರಿಯ ನಾಯಕರು ತೆರೆಮರೆಯಲ್ಲಿ ಬೆಂಬಲ ನೀಡುತ್ತಿದ್ದಾರಂತೆ? 

ಪಕ್ಷದ ಹಿತಬಯಸುವ ಯಾರೂ ಇಂಥ ಯಾವುದೇ ಗುಂಪಿಗೆ ಬೆಂಬಲ ಕೊಡುವುದಿಲ್ಲ. ಪಕ್ಷದ ರಾಜ್ಯ ಅಥವಾ ಕೇಂದ್ರದ ನಾಯಕರು ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ಯಾವತ್ತೂ ಬೆಂಬಲ ನೀಡಿಲ್ಲ. ನೀಡುವುದೂ ಇಲ್ಲ.

• ಹಾಗಿದ್ದರೆ ಯತ್ನಾಳ ಅವರ ಗುಂಪು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಬಹಿರಂಗ ಟೀಕಿಸುವುದು, ಪ್ರತ್ಯೇಕ ವಕ್ಫ್‌ ಹೋರಾಟ ನಡೆಸುತ್ತಿರುವುದು ತಪ್ಪು ಎಂದು ಹಿರಿಯರು ಖಂಡಿಸುತ್ತಿಲ್ಲವಲ್ಲ? ಅವರ ಬಾಯಿ ಬಗ್ಗೆ ಭಯ ಇದೆಯೇ? 

ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ತಪ್ಪು ಎಂದು ವರಿಷ್ಠರು ಹೇಳಿದ್ದಾರೆ. ಹೀಗಾಗಿ, ಇದಕ್ಕೆ ತೆರೆ ಎಳೆಯಬೇಕು ಎಂಬ ಉದ್ದೇಶದಿಂದಲೇ ಅವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಯತ್ನಾಳ ಕೂಡ ಪಕ್ಷದ ಸಂಘಟನೆಗೆ ಹಲವು ವರ್ಷಗಳ ಕಾಲ ಶ್ರಮಿಸಿದ್ದಾರೆ. 

• ನೀವು ಯತ್ನಾಳ ಅವರಿಗೆ ಈ ಬಗ್ಗೆ ಸಲಹೆ ನೀಡುವುದಿಲ್ಲವೇ? 

ಯತ್ನಾಳ ಅವರು ಪ್ರಸಕ್ತ ವಿಚಾರದ ಬಗ್ಗೆ ಪಕ್ಷದ ಕೇಂದ್ರ ನಾಯಕರು ಏನು ಹೇಳುತ್ತಾರೋ ಅದನ್ನು ಪಾಲಿಸುವುದು ಒಳ್ಳೆಯದು. ನಾನು ಕಳೆದ ವಾರ ಬೆಳಗಾವಿ ಅಧಿವೇಶನ ಕುರಿತು ಮಾತನಾಡಿದ್ದೆ. 

'ಕಾಂಗ್ರೆಸ್ ಸರ್ಕಾರ, ಗುರುವಾರದ ಸರ್ಕಾರ' ಸಚಿವರ ಸಾಧನೆಯೇ ಶೂನ್ಯ; ಆರ್. ಅಶೋಕ

• ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ಯತ್ನಾಳ ಮತ್ತು ಜಾರಕಿಹೊಳಿ ಅವರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರಿಗೆ ನಿಮ್ಮ ಪೂರ್ಣ ಬೆಂಬಲ ಇದೆಯೇ? 

ನೋಡಿ, ಪಕ್ಷದ ಕೇಂದ್ರ ನಾಯಕತ್ತ ಏನು ಹೇಳುತ್ತದೆಯೋ ಅದನ್ನು ಪಾಲಿಸುವುದು ಈ ಅಶೋಕನ ಕ್ವಾಲಿಟಿ. ಸುಮಾರು 45 ವರ್ಷ ಕಾಲ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ನನಗೆ ಅನುಭವವಿದೆ. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ಪಕ್ಷ ಸದೃಢವಾಗಬೇಕು ಎಂಬುದು ನನ್ನ ನಿಲುವು.

• ರಾಜ್ಯ ಬಿಜೆಪಿಯಲ್ಲಿ ಹಿಂದುತ್ವದ ಪ್ರತಿಪಾದನೆ ಕ್ಷೀಣಿಸಿದೆ, ವಿಜಯೇಂದ್ರ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಅತೃಪ್ತ ನಾಯಕರು ಆರೋಪಿಸುತ್ತಿದ್ದಾರೆ? 
ನನಗೇನೂ ಹಾಗೆ ಅನಿಸುತ್ತಿಲ್ಲ. ಹಿಂದುತ್ವ ಬೇರೆ, ಬಿಜೆಪಿ ಬೇರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಿಂದುತ್ವ ನಮ್ಮ ಹೃದಯ ಇದ್ದಂತೆ. ಅದನ್ನು ಬಿಟ್ಟು ಬದುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಿಂದೆ ಸರಿಯುವ ಮಾತೇ ಇಲ್ಲ.

Latest Videos
Follow Us:
Download App:
  • android
  • ios