Asianet Suvarna News Asianet Suvarna News

ಕಾಂಗ್ರೆಸ್‌ಗೆ ಬಿಜೆಪಿ ಶಾಸಕರ ಸೇರ್ಪಡೆ, ಜ.26ರವರೆಗೆ ಕಾದುನೋಡಿ: ಲಕ್ಷ್ಮಣ ಸವದಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ನಾವು ಈಗಾಗಲೇ ಬ್ಲೂ ಪ್ರಿಂಟ್‌ ಸಿದ್ಧಮಾಡಿಕೊಂಡಿದ್ದೇವೆ. ಆ ನಿಟ್ಟಿನಲ್ಲಿಯೇ ನಾವು ಕಾರ್ಯನಿರ್ವಹಿಸುತ್ತೇವೆ ಎಂದು  ಸ್ಪಷ್ಟಪಡಿಸಿದ ಲಕ್ಷ್ಮಣ ಸವದಿ 

Laxman Savadi Says BJP MLA's Will Join Congress grg
Author
First Published Nov 21, 2023, 4:00 AM IST

ಬಾಗಲಕೋಟೆ(ನ.21):  ನಾನು ಮತ್ತೆ ಬಿಜೆಪಿಗೆ ಮರಳುವ ಯಾವುದೇ ಸಂದರ್ಭ, ಸಮಯ, ಆಲೋಚನೆ ಕೂಡ ಇಲ್ಲ. ಆದರೆ, ಬಹಳಷ್ಟು ಜನ ಬಿಜೆಪಿಗರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಕಾಂಗ್ರೆಸ್‌ ಸೇರಲು ಸಿದ್ಧರಾಗಿದ್ದಾರೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಅವರನ್ನು ಕಾಂಗ್ರೆಸ್‌ಗೆ ಕರೆತಂದ ಮೇಲೆ ಅವರ ಸ್ಥಾನಮಾನದ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ. ಲೋಕಸಭೆಯಲ್ಲಿ ಗೆಲ್ಲಬೇಕಾದರೆ ರಾಜಕೀಯದಲ್ಲಿ ಕೆಲವೊಂದು ಧ್ರುವೀಕರಣ ಮಾಡಬೇಕಾಗುತ್ತದೆ. ಈಗ ಅದನ್ನು ನಾವು ಮಾಡುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಇದು ಆಪರೇಷನ್ ಹಸ್ತ ಅಲ್ಲ. ಯಾರು ಬಿಜೆಪಿಯಲ್ಲಿ ಇದ್ದುಕೊಂಡು ಬೇಸತ್ತಿದ್ದೇವೆ ಎಂದು ಹೇಳುತ್ತಿದ್ದಾರೋ ಅಂಥವರನ್ನು ಗೌರವದಿಂದ ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಬಿಜೆಪಿಗರು ಸತ್ಯಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರು ತರ ಆಡ್ತಾರೆ: ಲಕ್ಷ್ಮಣ್ ಸವದಿ

ಬಿಜೆಪಿ ಮುಖಂಡರಾದ ವಿ.ಸೋಮಣ್ಣ, ಹೆಬ್ಬಾರ್ ಸೇರಿ ಯಾರಾದರೂ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇದೆಯೇ, ಅವರನ್ನು ಕರೆತರುವ ಪ್ರಯತ್ನ ನಡಿದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ಇದಕ್ಕಾಗಿ ನೀವು ಜನವರಿ 26ರವರೆಗೆ ಕಾಯಬೇಕು. ಅದರ ಬಗ್ಗೆ ಈಗಲೇ ಸುಳಿವು ನೀಡಲು ಸಾಧ್ಯವಿಲ್ಲ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ನಾವು ಈಗಾಗಲೇ ಬ್ಲೂ ಪ್ರಿಂಟ್‌ ಸಿದ್ಧಮಾಡಿಕೊಂಡಿದ್ದೇವೆ. ಆ ನಿಟ್ಟಿನಲ್ಲಿಯೇ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಲಕ್ಷ್ಮಣ ಸವದಿ ಇದೇ ವೇಳೆ ಸ್ಪಷ್ಟಪಡಿಸಿದರು.

ಎಂಟೆತ್ತು ಬಂದರೂ ನೇಗಿಲು ಎಳೆಯಲು ಸಾಧ್ಯವಿಲ್ಲ!:

ವಿಜಯೇಂದ್ರ ಮತ್ತು ಆರ್.ಅಶೋಕ್ ಜೋಡೆತ್ತುಗಳಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರಾ ಎಂಬ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಸವದಿ, ಬರೀ ಜೋಡೆತ್ತಲ್ಲ, ಉತ್ತರ ಕರ್ನಾಟಕದಲ್ಲಿ ನಾಲ್ಕು ಎತ್ತು ಹೊಡೆಯುವ ಪದ್ಧತಿ ಇದೆ. ಅದನ್ನು ಮಾಡಿದರೂ ಬಿಜೆಪಿಯವರಿಗೆ ಏನೂ ಮಾಡಲಾಗುವುದಿಲ್ಲ. ಉತ್ತರ ಕರ್ನಾಟಕದ ಈ ನೆಲ ಗಟ್ಟಿಯಾಗಿದೆ, ಬಿರುಸಾಗಿದೆ. ಈಗಿನ ಸ್ಥಿತಿಯಲ್ಲಿ ಬಿಜೆಪಿಯವರ ನೇಗಿಲು ನೋಡಿದರೆ, ಎರಡಲ್ಲ, ನಾಲ್ಕಲ್ಲ, ಎಂಟು ಎತ್ತು ಹೂಡಿದರೂ ಜಗ್ಗುವ ಪರಿಸ್ಥಿತಿ ಇಲ್ಲ ಎಂದರು.

ಬಿಜೆಪಿಗರೆಲ್ಲಾ ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದವರಂತೆ ಮಾತನಾಡುತ್ತಿದ್ದಾರೆ. 20 ವರ್ಷ ನಾನು ಬಿಜೆಪಿಯಲ್ಲಿದ್ದೆ. ಅವರ ಕಥೆ ಏನು ಎಂಬುದನ್ನು ನಾನು ನೋಡಿದ್ದೇನೆ ಎಂದು ತಿರುಗೇಟು ನೀಡಿದರು.

ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಂಭಾಷಣೆಯ ವಿವಾದದ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಂಭಾಷಣೆ ವಿಷಯದಲ್ಲಿ ಬಿಜೆಪಿಗರು ಮಾತನಾಡಿದ್ದನ್ನು ನೋಡಿ ನನಗೆ ನಗು ಬರುತ್ತಿದೆ. ಈ ವಿಷಯ ಬೇರೆಯವರಿಗೆ ಬೇರೆ ರೀತಿ ಅರ್ಥ ಆಗಬಹುದು. ಆದರೆ ನನಗೆ ಅರ್ಥವಾಗುವ ರೀತಿಯೇ ಬೇರೆ. ಯಾರು ಏನೇನೋ ಮಾತನಾಡುತ್ತಾರೋ ಮಾತನಾಡಲಿ. ಆದರೆ, ಅವರು ಒಂದು ಬೆರಳು ಮುಂದೆ ಮಾಡಿದರೆ, ನಾಲ್ಕು ಬೆರಳು ಅವರ ಕಡೆಗೆ ಇರುತ್ತವೆ ಎಂಬ ಅರಿವು ಅವರಿಗೆ ಇರಬೇಕು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ತಾಂಡವ, ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ

ಬಿಜೆಪಿ ಮುಖಂಡ ಕುಮಾರ ಯಳ್ಳಿಗುತ್ತಿ ಮನೆಗೆ ಭೇಟಿ ನೀಡಿದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸವದಿ, ಇದು ನಮ್ಮ ಸಂಬಂಧಿಗಳ ಮನೆ. ಹೀಗಾಗಿ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಸಂಬಂಧ ಮತ್ತು ಸ್ನೇಹಕ್ಕೆ ಪಕ್ಷ ಅಡ್ಡಿ ಬರಲ್ಲ. ನಾವು ರಾಜಕೀಯ ಚರ್ಚೆ ಮತ್ತು ಉದ್ದೇಶಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮತ್ತು ಮುಖಂಡ ಅಶೋಕ ಲಿಂಬಾವಳಿ ಕೂಡ ಸವದಿ ಅವರನ್ನು ಭೇಟಿ ಮಾಡಿದರು.

ಮೈಸೂರಿಗೆ ಸೀಮಿತವಾದ ನಾಯಕ:

ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಲಿಂಗಾಯತ ಮತಗಳು ಬಿಜೆಪಿಗೆ ಹೋಗುತ್ತವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ ಅವರು, ಈ ಬಗ್ಗೆ ನಾವೂ ಬಹಳಷ್ಟು ಚರ್ಚೆ ಮಾಡುವುದಿದೆ. ಲಿಂಗಾಯತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಉತ್ತರ ಕರ್ನಾಟಕದಲ್ಲಿ. ಅದರಲ್ಲೂ ಕಿತ್ತೂರ ಕರ್ನಾಟಕ, ಹೈದ್ರಾಬಾದ ಕರ್ನಾಟಕ ಪ್ರಾಂತದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ. ವಿಜಯೇಂದ್ರ ಬೆಂಗಳೂರು, ಶಿವಮೊಗ್ಗ, ಮೈಸೂರಿಗೆ ಸೀಮಿತವಾಗಿದ್ದು, ಅವರ ಆಯ್ಕೆ ಬಗ್ಗೆ ಬಿಜೆಪಿಯಲ್ಲಿಯೇ ಬಹಳಷ್ಟು ಮಂದಿಗೆ ಸಹಮತ ಇಲ್ಲ. ಅನೇಕ ಹಿರಿಯ ಮುಖಂಡರು ಇವರ ಕೆಳಗೆ ನಾವು ಹೇಗೆ ಕೆಲಸ ಮಾಡುವುದು ಎಂಬ ಪ್ರಶ್ನೆ ಎತ್ತಿದ್ದಾರೆ. ಈ ರೀತಿ ಅಸಮಾಧಾನಗೊಂಡ ಮುಖಂಡರ ದೊಡ್ಡ ಪಟ್ಟಿಯೇ ಇದೆ. ಸಧ್ಯ ಅವರ ಹೆಸರು ಹೇಳುವುದು ಬೇಡ, ನಾವು ಒಮ್ಮೆ ಆ ಪಕ್ಷ ಬಿಟ್ಟು ಬಂದ ಮೇಲೆ ಅಲ್ಲಿನ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವುದು ಅಸಂಬದ್ಧ ಆಗುತ್ತದೆ. ಆದರೆ, ವಿಜಯೇಂದ್ರ ಬರಲಿ, ಬೇರೆ ಇನ್ನಾರೋ ಬರಲಿ, ಬಿಜೆಪಿ ಈಗಿನ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಸವದಿ ತಿಳಿಸಿದರು.

Follow Us:
Download App:
  • android
  • ios