ಬಿಜೆಪಿಯಲ್ಲಿನ ಭಿನ್ನಮತ ನಾನೇ ಶಮನಗೊಳಿಸುವೆ: ಲಕ್ಷ್ಮಣ ಸವದಿ
* ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಭುಗಿಲೆದ್ದಿರುವ ಬಂಡಾಯ
* ಬಂಡಾಯದ ಬೇಗುದಿಯಲ್ಲಿ ಬಿಜೆಪಿ ಸಿಲುಕಿರುವದನ್ನು ಗಮನಿಸಿದ ಸವದಿ
* ಪರೋಕ್ಷವಾಗಿ ತೆರೆಯ ಹಿಂದೆ ಪ್ರಚಾರ ನಡೆಸುತ್ತಿರುವವರ ವಿರುದ್ಧ ಗುಡುಗಿದ ಲಕ್ಷ್ಮಣ
ರಬಕವಿ-ಬನಹಟ್ಟಿ(ಜೂ.05): ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಭುಗಿಲೆದ್ದಿರುವ ಬಂಡಾಯದ ಬೇಗುದಿಯಲ್ಲಿ ಬಿಜೆಪಿ ಸಿಲುಕಿರುವದನ್ನು ಗಮನಿಸಿದ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ತೀಕ್ಷ್ಣವಾಗಿ ಪರಿಗಣಿಸಿ, ಬಂಡಾಯದ ಶಮನ ನಾನೇ ಮಾಡುತ್ತೇನೆ ಎಂದು ಬಹಿರಂಗ ಭಾಷಣದಲ್ಲಿ ತಿಳಿಸಿದ್ದು, ಕಾರ್ಯಕರ್ತರಲ್ಲಿ ಕುತೂಹಲ ಮೂಡಿದೆ.
ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಧುರೀಣ ಬನಹಟ್ಟಿಯ ಭೀಮಶಿ ಮಗದುಮ್ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷದ ಬೆಂಬಲದಿಂದ ಕಣಕ್ಕಿಳಿಯಲು ಸಾಧ್ಯವಾಗದೇ, ಸ್ವತಂತ್ರವಾಗಿ ಸ್ಪರ್ದಿಸಿ ಪರಾಭವಗೊಂಡ ಕಾರಣ ಶಾಸಕ ಸಿದ್ದು ಸವದಿಯವರು ಗೆಲುವು ಸಾಧಿಸಿದ್ದರು. ಆಸಂಗಿ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರೂ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸೇರಿಸಿಕೊಂಡು ಆಡಳಿತ ನಡೆಸಿದ್ದಾರೆಂಬ ಆರೋಪವನ್ನು ಹೊತ್ತ ಹರ್ಷವರ್ಧನ ಪಟವರ್ಧನ, ರಬಕವಿಯ ಬಸವರಾಜ ದಲಾಲ, ಮಹಾಲಿಂಗಪುರ ಭಾಗದಿಂದ ಮಹಾದೇವ ಮಾರಾಪುರ, ಮಹಾಲಿಂಗಪ್ಪ ಇಟ್ನಾಳ ಹೀಗೆ ಕೆಲ ಮುಖಂಡರು ಹಾಗೂ ಶಾಸಕರ ಮಧ್ಯದಲ್ಲಿನ ವಾಗ್ವಾದ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿ, ಪಕ್ಷದ ಚಟುವಟಿಕೆಗಳಲ್ಲಿ ಇತ್ತೀಚೆಗೆ ನಿಷ್ಕ್ರೀಯಗೊಂಡಿದ್ದರು.
Karnataka Politics: 'ಕಾಂಗ್ರೆಸ್ಸಿಗರು ಉಗ್ರಗಾಮಿ ಸಂತಾನ'
ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಗಮೇಶ ನಿರಾಣಿ ಪಕ್ಷದ ಪದವೀಧರ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಣೆಯಾದ ಬಳಿಕ ದಲಾಲ್ ತೋಟದಲ್ಲಿ ಸಭೆ ನಡೆಸಿದ್ದ ಹಿನ್ನೆಲೆಯಲ್ಲಿ ಯಾರನ್ನೂ ಹೆಸರಿಸದ ಶಾಸಕ ಸಿದ್ದು ಸವದಿಯವರು ಈಚೆಗೆ ರಾಮಪೂರದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಡಿದ್ದ ಭಾಷಣ ಭಾರಿ ಚರ್ಚೆಗೆ ಗ್ರಾಸವಾಗಿ, ಪಕ್ಷದ ಮುಖಂಡರನ್ನು ಬಿಟ್ಟು ಪ್ರಚಾರ ನಡೆಸುತ್ತಿರುವದು ಸಲ್ಲದು ಎಂದು ಪರೋಕ್ಷವಾಗಿ ತೆರೆಯ ಹಿಂದೆ ಪ್ರಚಾರ ನಡೆಸುತ್ತಿರುವವರ ವಿರುದ್ಧ ಗುಡುಗಿದ್ದರು.
ಇವೆಲ್ಲವನ್ನೂ ಗಮನಿಸಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಬಂಡಾಯ ಶಮನಗೊಳಿಸುವುದಾಗಿ ಹೇಳಿರುವುದು, ಲಕ್ಷ್ಮಣ ಸವದಿಯವರ ಮಧ್ಯಸ್ಥಿಕೆಯಲ್ಲಿ ಭಿನ್ನಮತ ಯಾವ ರೀತಿ ಶಮನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.