ಲೋಕಸಭೆ ಚುನಾವಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಅಂತರದ ಗೆಲವು: ಶಾಸಕ ಸಿ.ಸಿ. ಪಾಟೀಲ
ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ, ಹಾವೇರಿ ಹಾಗೂ ಬಾಗಲಕೋಟೆ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಲ್ಲಿ ಜಯ ಗಳಿಸಲಿದ್ದಾರೆ: ಶಾಸಕ ಸಿ.ಸಿ. ಪಾಟೀಲ
ನರಗುಂದ(ಮಾ.17): ಲೋಕಸಭೆ ಚುನಾವಣೆಗೆ ಬಿಜೆಪಿಯು ರಾಜ್ಯದ 20 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸಿದ್ದು. ಬಾಗಲಕೋಟೆ ಕ್ಷೇತ್ರದಿಂದ ಸಂಸದ ಪಿ.ಸಿ. ಗದ್ದಿಗೌಡ್ರ, ಹಾವೇರಿ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಲಭಿಸಿದೆ, ಈ ಎರಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ಶಾಸಕ ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪಟ್ಟಣದ ಎಪಿಎಂಸಿಯಲ್ಲಿ ಆರ್.ಐ.ಡಿ.ಎಫ್-29ರ ಯೋಜನೆಯಡಿ ₹ 3 ಕೋಟಿ ವೆಚ್ಚದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ಡಾಂಬರ ರಸ್ತೆ, ಕಾಂಕ್ರೀಟ್ ಚರಂಡಿ ನಿರ್ಮಾಣ ಹಾಗೂ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ವಿದ್ಯುತ್ತೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಬದಲಾವಣೆ ಪರ್ವ: ಸಚಿವ ಎಚ್.ಕೆ.ಪಾಟೀಲ್
ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ, ಹಾವೇರಿ ಹಾಗೂ ಬಾಗಲಕೋಟೆ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಲ್ಲಿ ಜಯ ಗಳಿಸಲಿದ್ದಾರೆ. ಮಾ. 18ರಂದು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬೊಮ್ಮಾಯಿ ಅವರ ಜತೆ ಪ್ರವಾಸ ಕೈಗೊಳ್ಳಲಾಗುವುದು. ಬಾಗಲಕೋಟೆ ಕ್ಷೇತ್ರದಲ್ಲಿ ಪಿ.ಸಿ. ಗದ್ದಿಗೌಡ್ರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ 20-25 ಸ್ಥಾನ ಗೆಲ್ಲುತ್ತದೆ. ಬೆ.ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಸ್ಪರ್ಧೆಯಿಂದ ಕಾಂಗ್ರೆಸ್‌ನ ಡಿ.ಕೆ. ಸಹೋದರರಿಗೆ ನಡುಕ ಹುಟ್ಟಿದೆ ಎಂದರು.
ಆರೋಪ:
ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಸೋತರೂ ಅಧಿಕಾರ ಚಲಾಯಿಸುತ್ತಿದ್ದಾರೆ. ಅವರು ಗುತ್ತಿಗೆದಾರರಿಂದ ಹಣ ಪಡೆದುಕೊಂಡಿದ್ದಾರೆ ಎಂದು ಅವರ ಪಕ್ಷದ ಡಾ.ಸಂಗಮೇಶ ಕೊಳ್ಳಿ ಆರೋಪಿಸಿದ್ದಾರೆ. ಇದು ನಿಜವೆಂದು ತೋರುತ್ತಿದೆ. ಚುನಾಯಿತರಾಗದಿದ್ದರೂ ಅವರು ಇತಂಹ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯಬಾರದು. ಗುತ್ತಿಗೆದಾರರಿಂದ ಮಾಜಿ ಶಾಸಕ ಬಿ.ಆರ್. ಯಾವಗಲ್ಲ್ ಅವರು ಕಮೀಷನ್ ಹಣ ಪಡೆದಿಲ್ಲ ಎಂದು ಗುತ್ತಿಗೆದಾರರು ಸುದ್ದಿಗೋಷ್ಠಿಯಲ್ಲಿ ಹೇಳಬೇಕೆಂದು ಯಾವಗಲ್ಲ್ ಅವರು ಗುತ್ತಿಗೆದಾರರನ್ನು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದರು.
ಜನಸಾಮಾನ್ಯರ ಹಿತಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ: ಸಚಿವ ಎಚ್.ಕೆ.ಪಾಟೀಲ್
ಶೇ.9ರಷ್ಟು ಕಮಿಷನ್:
ಮತಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಬಾಕಿ ಉಳಿದ ಕಾಮಗಾರಿಗಳ ಮೊತ್ತಕ್ಕೆ ಮುಖ್ಯಮಂತ್ರಿಗಳು ಶೇ.10 ಎಲ್ಓಸಿ ಹಣ ಬಿಡುಗಡೆಗೆ ಸಹಿ ಹಾಕಿರುವುದು ತಿಳಿದುಬಂದಿದೆ. ಆದರೆ ಆ ಕಾಮಗಾರಿಗಳಿಗೆ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ರಾಜಕಾರಣಿಗಳು ಶೇ. 9 ರಷ್ಟು ಕಮಿಷನ್ ಹಣದ ಬೇಡಿಕೆ ಇಟ್ಟಿರುವುದು ಕೇಳಿಬಂದಿದೆ.ಇದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ರಾಜಕಾರಣ ಎಷ್ಟೋಂದು ಭ್ರಷ್ಟಾಚಾರಕ್ಕೆ ಇಳಿದಿದೆ ಎಂಬುದು ತಿಳಿದು ಬರುತ್ತದೆ. ಶೇ. 10ರಷ್ಟು ಎಲ್ಓಸಿ ಪಡೆದ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಆದರೆ ಅದರಲ್ಲಿ ಶೇ. 9ರಷ್ಟು ಕಮೀಷನ್ ಕೇಳುವ ಅಧಿಕಾರಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಮುತವಾಡ, ಶಂಕರಗೌಡ ಯಲ್ಲಪ್ಪಗೌಡ್ರ, ಎನ್.ವಿ.ಮೇಟಿ, ಮಲ್ಲಪ್ಪ ಬೋವಿ, ಬಿ.ಬಿ. ಐನಾಪೂರ, ಮಲ್ಲಪ್ಪ ಮೇಟಿ, ಅಜ್ಜಪ್ಪ ಹುಡೇದ, ಪ್ರಕಾಶಗೌಡ ತಿರಕನಗೌಡ್ರ, ಪ್ರಕಾಶ ಪಟ್ಟಣಶೆಟ್ಟಿ, ಬಿ .ಎಸ್ .ಪಾಟೀಲ, ಎಸ್.ಎಸ್. ಪಾಟೀಲ, ಜಿ.ಟಿ. ಗುಡಿಸಾಗರ, ಬಿ.ಕೆ. ಗುಜಮಾಗಡಿ, ರಮೇಶ ಕರಕನಗೌಡ್ರ, ಜೆ.ವಿ. ಕಂಠಿ, ಮಹೇಶ ಹಟ್ಟಿ, ಅಶೋಕ ಮಾದಿನೂರ, ಗುತ್ತಿಗೆದಾರ ಎಚ್ ಮೂರ್ತಿ ಹಾಗೂ ಎಪಿಎಂಸಿ ವರ್ತಕರು, ಅಧಿಕಾರಿಗಳಾದ ರಾಘವೇಂದ್ರ ಸಜ್ಜನ, ವಿ .ಎನ್.ಹೊಸಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.