ಬೆಂಗಳೂರು (ನ.11):  ಉಪ ಚುನಾವಣೆ ಸೋಲಿನಿಂದ ದೃತಿಗೆಟ್ಟಿಲ್ಲ. ಅಧಿಕಾರದಲ್ಲಿ ಇರುವವರಿಗೆ ಇಂತಹ ಚುನಾವಣೆಯಲ್ಲಿ ಅನುಕೂಲ ಹೆಚ್ಚಿರುತ್ತದೆ. ಆದರೆ, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಗೆಲುವಿನ ಅಂತರ ಈ ಪರಿ ಇರುತ್ತದೆ ಎಂದು ಭಾವಿಸಿರಲಿಲ್ಲ. ಶಿರಾದಲ್ಲಿ ಗೆಲುವು ಖಚಿತ ಎಂದು ಕೊಂಡಿದ್ದೆವು. ಈ ವಿಚಾರದಲ್ಲಿ ಅಚ್ಚರಿಯಿದೆ. ಆದರೆ, ಜನರ ತೀರ್ಪನ್ನು ಒಪ್ಪುತ್ತೇವೆ. ಸೋಲಿನ ಹೊಣೆಯನ್ನು ಪಕ್ಷದ ಅಧ್ಯಕ್ಷನಾಗಿ ನಾನೇ ಹೊರುತ್ತೇನೆ.

ಕೆಪಿಸಿಸಿ ಅಧ್ಯಕ್ಷರಾದ ನಂತರ ಎದುರಿಸಿದ ಪ್ರಪ್ರಥಮ ಉಪ ಚುನಾವಣೆಯ ಭಾರಿ ಸೋಲಿಗೆ ಡಿ.ಕೆ. ಶಿವಕುಮಾರ್‌ ಅವರ ಪ್ರತಿಕ್ರಿಯೆಯಿದು.

ಡಿಕೆಶಿ ಹೊಸ ಸವಾಲಿಗೆ ಸಿದ್ಧತೆ : ಭವಿಷ್ಯದ ಬಗ್ಗೆ ಮಾಸ್ಟರ್ ಪ್ಲಾನ್ ...

ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜರಾಜೇಶ್ವರಿನಗರದಲ್ಲಿ ತೀವ್ರ ಪೈಪೋಟಿ ನೀಡುವ ಭರವಸೆಯಿತ್ತು. ಶಿರಾದಲ್ಲಿ ಬಿಜೆಪಿಗೆ ಅಷ್ಟೊಂದು ಮತಗಳು ಬಿದ್ದಿರುವುದು ಅಚ್ಚರಿ ಮೂಡಿಸಿದೆ. ಆದರೆ, ಸೋಲಿನಿಂದ ನಾನಾಗಲಿ ಅಥವಾ ಪಕ್ಷವಾಗಲಿ ವಿಚಲಿತವಾಗಿಲ್ಲ. ಏಕೆ ಹೀಗಾಯ್ತು ಎಂಬುದರ ಬಗ್ಗೆ ಪರಾಮರ್ಶೆ ತಿದ್ದಿಕೊಂಡು ಮುನ್ನಡೆಯುತ್ತೇವೆ’ ಎಂದರು.

‘ಉಪಚುನಾವಣೆಗಳ ಫಲಿತಾಂಶ ಶೇ.10 ರಿಂದ 15 ರಷ್ಟುಆಡಳಿತಪಕ್ಷದ ಪರ ಇರುತ್ತದೆ. ನಾವು ಅಧಿಕಾರದಲ್ಲಿದ್ದಾಗಲೂ ಇದೇ ಆಗಿದೆ. ಎರಡು ವಿಧಾನಸಭೆ ಉಪ ಚುನಾವಣೆ ಹಾಗೂ ನಾಲ್ಕು ವಿಧಾನಪರಿಷತ್‌ ಸ್ಥಾನಗಳ ಮತದಾರರ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಮೊದಲ ಚುನಾವಣೆಯೇ ಸೋತಿದ್ದೀರಿ ಎನ್ನುವ ಮಾತು ಕೇಳಿ ಬರುತ್ತಿದೆ. ನಾನು ಎಲ್ಲಾ ಮೊದಲ ಚುನಾವಣೆಗಳನ್ನೂ ಸೋತಿದ್ದೇನೆ. 1985ರಲ್ಲಿ ಮೊದಲ ಚುನಾವಣೆಯನ್ನೂ ಸೋತಿದ್ದೇನೆ. ಬಳಿಕ ಬಹುತೇಕ ಎಲ್ಲವನ್ನೂ ಗೆದ್ದಿದ್ದೇನೆ. ಸೋಲೇ ಗೆಲುವಿಗೆ ಮೆಟ್ಟಿಲು ಎಂಬುದನ್ನು ಬಲವಾಗಿ ನಂಬುತ್ತೇನೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ದಿನಗಳು ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕುಸುಮಾಗೆ ಶಾಸಕಿ ಪಟ್ಟ ಸಿಗುತ್ತದೆ'

‘ರಾಜರಾಜೇಶ್ವರಿನಗರದಲ್ಲಿ ಇಷ್ಟುಅಂತರ ನಿರೀಕ್ಷೆ ಮಾಡಿರಲಿಲ್ಲ. ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಉಂಟಾಗಿ ಕೆಲ ಸಾವಿರ ಮತಗಳ ಅಂತರದಲ್ಲಿ ಫಲಿತಾಂಶ ಬರಬಹುದು ಎಂದು ಭಾವಿಸಿದ್ದೆ. ಮುಂದಿನ ಭವಿಷ್ಯದ ಲೆಕ್ಕಾಚಾರದೊಂದಿಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೆವು. ಕುಸುಮಾ ಅವರು ಉತ್ತಮ ಹೋರಾಟ ಮಾಡಿದ್ದಾರೆ. ಮುಂದೊಂದು ದಿನ ಶಾಸಕರಾಗೇ ಆಗುತ್ತಾರೆ’ ಎಂದು ಹೇಳಿದರು.

‘ಸರ್ಕಾರ ಹೇಗೆ ಅಧಿಕಾರ ದುರುಪಯೋಗ ಮಾಡಿದೆ, ಹಣ ಹಂಚಿದೆ ಎಂಬುದನ್ನೂ ನೋಡಿದ್ದೇವೆ. ಈಗ ಆ ಚರ್ಚೆ ಬೇಡ. ನಾವು ಸೋತಿದ್ದೇವೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಜನ ಮತ ಹಾಕಿಲ್ಲ. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಸೋಲಿನ ಜವಾಬ್ದಾರಿ ನಾನು ಹೊರುತ್ತೇನೆ. ಬೇರೆಯವರ ಮೇಲೆ ಸೋಲಿನ ಹೊಣೆ ಹೊರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆರ್‌.ಆರ್‌. ನಗರದಲ್ಲಿ ಜ್ಯೋತಿಷಿಗಳ ಮಾತು ಕೇಳಿ ಅಭ್ಯರ್ಥಿ ಹಾಕದೆ ಜನರ ನಾಡಿಮಿಡಿತ ಅರಿತು ಅಭ್ಯರ್ಥಿ ಹಾಕಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟುಹೀನಾಯ ಸೋಲು ಉಂಟಾಗುತ್ತಿರಲಿಲ್ಲ’ ಎಂಬ ಸಚಿವ ಡಾ.ಕೆ. ಸುಧಾಕರ್‌ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಕುಸುಮಾ ಸುಸಂಸ್ಕೃತ ಹಾಗೂ ವಿದ್ಯಾವಂತ ಅಭ್ಯರ್ಥಿ. ಅವರು ಮುಂದೆ ಶಾಸಕರಾಗಿ ವಿಧಾನಸಭೆಗೆ ಹೋಗುತ್ತಾರೆ’ ಎಂದರು.