ಕುಮಾರಸ್ವಾಮಿ ಪಟ್ಟು, ರೇವಣ್ಣ ಸಿಟ್ಟು, ದೇವೇಗೌಡರ ಇಕ್ಕಟ್ಟು: ಗೌಡರ ಕುಟುಂಬ ತಿಕ್ಕಾಟ.!
ಹಾಸನ ಟಿಕೆಟ್ ವಿಚಾರ ದಿನೇ ದಿನೇ ಇನ್ನಷ್ಟು ಕಗ್ಗಂಟಾಗುತ್ತಿದ್ದು, ಜೆಡಿಎಸ್ ಪಾಳಯದಲ್ಲಿ ತಳಮಳ ಸೃಷ್ಟಿ ಮಾಡಿದೆ. ಎಲ್ಲರ ಚಿತ್ತ ಹಾಸನದ ಜೆಡಿಎಸ್ ಟಿಕೆಟ್‌ನತ್ತ ನೆಟ್ಟಿದೆ.
ವರದಿ- ಸುರೇಶ್, ಎ.ಎಲ್. ರಾಜಕೀಯ ವರದಿಗಾರರು, ಏಷ್ಯಾನೆಟೆ ಸುವರ್ಣ ನ್ಯೂಸ್
ಹಾಸನ ಟಿಕೆಟ್ ವಿಚಾರ ದಿನೇ ದಿನೇ ಇನ್ನಷ್ಟು ಕಗ್ಗಂಟಾಗುತ್ತಿದ್ದು ಜೆಡಿಎಸ್ ಪಾಳಯದಲ್ಲಿ ತಳಮಳ ಸೃಷ್ಟಿ ಮಾಡಿದೆ. ಮತ್ಯಾವ ಕ್ಷೇತ್ರ ದ ಬಗ್ಗೆ ಯೂ ಇಲ್ಲದ ಕುತೂಹಲ ಹಾಸನ ಕ್ಷೇತ್ರದ ವಿಚಾರದಲ್ಲಿ ಮೂಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಉಂಟು ಮಾಡಿದೆ. ಕೇವಲ ಜೆಡಿಎಸ್ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲದೇ ಇತರೇ ಪಕ್ಷಗಳ ಕಾರ್ಯಕರ್ತರು ಕೂಡಾ ಹಾಸನ ಕ್ಷೇತ್ರದ ಕಡೆ ತಿರುಗಿ ನೋಡುವಂತಾಗಿದೆ.
ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್ ಅಂತಾ ಕುಮಾರಸ್ವಾಮಿ ಪಟ್ಟು ಹಿಡಿದಿರುವುದರ ಹಿಂದೆ ಹಲವು ಲೆಕ್ಕಾಚಾರಗಳಿವೆ. ಹೇಳಿಕೇಳಿ ಜೆಡಿಎಸ್ ಅಂದ್ರೆ ಅದು ಕುಟುಂಬ ರಾಜಕಾರಣಕ್ಕೆ ಸೀಮಿತವಾದ ಪಕ್ಷ ಎಂಬ ಟೀಕೆ ಮೊದಲಿನಿಂದಲೂ ಇದೆ. ಈ ಚುನಾವಣೆಯಲ್ಲಾದರೂ ಆ ಹಣೆ ಪಟ್ಟಿಯಿಂದ ಹೊರಗೆ ಬರಬೇಕು ಅನ್ನೋದು ಕುಮಾರಸ್ವಾಮಿ ಮನದ ಇಂಗಿತ. ಹಾಸನದಲ್ಲಿ ಸ್ವರೂಪ್ ಪರ ಅಲೆ ಇದೆ. ಸ್ವರೂಪ್ ತಂದೆ ಪ್ರಕಾಶ್ ತೀರಿಕೊಂಡ ಸಂಧರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡರೆ , ಮಾತು ಉಳಿಸಿಕೊಂಡ ಸಮಾಧಾನ ಕೂಡಾ ಇರುತ್ತದೆ. ಒಕ್ಕಲಿಗ ಒಳಪಂಗಡದ ಮತಗಳೇ ನಿರ್ಣಾಯಕ ವಾಗಿರುವ ಹಿನ್ನಲೆಯಲ್ಲಿ ಸ್ವರೂಪ್ ಗೆಲುವು ಸುಲಭವಾಗುವ ಸಾದ್ಯತೆ ಕೂಡಾ ಇದೆ. ಈ ಎಲ್ಲ ಹಿನ್ನಲೆಯಲ್ಲಿ ಮೊದಲಿನಿಂದಲೂ ಕುಮಾರಸ್ವಾಮಿ ಸ್ವರೂಪ್ ಪರ ನಿಂತಿದ್ದಾರೆ.
ಸೆಮಿ ಫೈನಲ್ ಹಂತ ತಲುಪಿದ ಹಾಸನ ಟಿಕೆಟ್ ದಂಗಲ್, ನಾಳೆ 2ನೇ ಪಟ್ಟಿ ಬಿಡುಗಡೆ
ಅತ್ತ ರೇವಣ್ಣ ಕುಟುಂಬದ ಲೆಕ್ಕಾಚಾರವೇ ಬೇರೆ: ರಾಜಕೀಯ ಎದುರಾಳಿ ಪ್ರೀತಂ ಗೌಡ ಸವಾಲಿಗೆ ಉತ್ತರ ಕೊಡುವುದೇ ರೇವಣ್ಣ ಕುಟುಂಬ ದ ಹಠ. ಹಾಸನದಲ್ಲಿ ತಮ್ಮ ಕುಟುಂಬದ ಪ್ರಾಬಲ್ಯವನ್ನು ಉಳಿಸಿಕೊಳ್ಳಬೇಕು. ಮಹಿಳಾ ಮತಗಳ ಕ್ರೋಢಿಕರಣ ಆಗಬೇಕು. ಭವಾನಿಗೆ ಟಿಕೆಟ್ ಸಿಕ್ಕಿದರೆ, ಆ ಮೂಲಕ ಅಕ್ಕಪಕ್ಕದ ಕೆಲವು ಕ್ಷೇತ್ರ ಗಳಲ್ಲಿಯಾದ್ರೂ ಜೆಡಿಎಸ್ ಮೇಲೆ ಮತ್ತಷ್ಟು ಪ್ರಾಬಲ್ಯ ಸಾಧಿಸಬಹುದು ಎಂಬುದು ಒಂದು ಲೆಕ್ಕಾಚಾರ.
ದೇವೇಗೌಡರಿಗೆ ಮನಸಿನಲ್ಲಿಯೇ ಕೊರಗಾಟ: ಇದೆಲ್ಲವನ್ನು ನೋಡುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ಮನಸಿನಲ್ಲಿಯೇ ಕೊರಗಾಟ ಶುರುವಾಗಿದೆ. ಕುಟುಂಬದ ಸದಸ್ಯರ ನಡುವಿನ ಈ ಹಗ್ಗ ಜಗ್ಗಾಟ ಸಹಜವಾಗಿಯೇ ಈ ಇಳಿವಯಸ್ಸಿನಲ್ಲಿ ಗೌಡರನ್ನು ಚಿಂತೆಗೀಡು ಮಾಡಿದೆ. ಅದೇ ಕಾರಣಕ್ಕಾಗಿಯೇ ಕುಮಾರಸ್ವಾಮಿ ಒಂದೆರಡು ಸಲ ಭಾವುಕರಾಗಿ ಮಾತನಾಡಿದ್ದೂ ಇದೆ. ಪದೇ ಪದೇ ಈ ವೇಳೆ ವಿಚಾರದಲ್ಲಿ ದೇವೇಗೌಡರ ಹೆಸರನ್ನು ಮದ್ಯೆ ತರಬೇಡಿ, ನನಗೆ ದೇವೇಗೌಡರ ಆರೋಗ್ಯ ಮುಖ್ಯ. ಎಂದು ಕಣ್ಣೀರು ಹಾಕಿದ್ದಾರೆ.
ಪಟ್ಟು ಬಿಡದ ಭವಾನಿ ರೇವಣ್ಣ: ಈ ವಿಚಾರಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಸಲುವಾಗಿಯೇ ಗೌಡರ ಮನೆಯಲ್ಲಿ ಕರೆದಿದ್ದ ಸಭೆಯಲ್ಲಿ ಕೂಡಾ ಒಂದು ಒಮ್ಮತ ದ ನಿರ್ಧಾರಕ್ಕೆ ಬರಲು ಆಗಿಲ್ಲ. ತಮ್ಮ ಪಟ್ಟು ಸಡಿಲಿಸದ ಭವಾನಿ ಹಾಸನದ ಟಿಕೆಟ್ ಬೇಕೇ ಬೇಕು ಎಂದು ಕುಳಿತಿದ್ದಾರೆ. ಎಂಎಲ್‌ಸಿ ಮಾಡುವುದಾಗಿ ದೇವೇಗೌಡರು ಹೇಳಿದರೂ ಒಪ್ಪಲು ರೇವಣ್ಣ ತಯಾರಿಲ್ಲ. ಇಲ್ಲಿಯ ತನಕ ಪಟ್ಟು ಸಡಿಲಿಸದ ಕುಮಾರಸ್ವಾಮಿ ಇದೀಗ ಸ್ವಲ್ಪ ಸಾಪ್ಟ್ ಆದಂತಿದೆ. ಸಾಮಾನ್ಯ ಕಾರ್ಯಕರ್ತ ನಿಗೆ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಎರಡು ದಿನಗಳಿಂದ ಆ ವಿಚಾರ ಪ್ರಸ್ತಾಪ ಮಾಡ್ತಿಲ್ಲ. ದೇವೇಗೌಡರ ಮೇಲೆ ಇನ್ನಷ್ಟು ಒತ್ತಡ ಹಾಕೋದು ಬೇಡ ಎಂಬುದು ಕುಮಾರಸ್ವಾಮಿ ಉದ್ದೇಶವಾಗಿದೆ.
ಹಾಸನ ಟಿಕೆಟ್ ಗೊಂದಲಕ್ಕೆ ಕಣ್ಣೀರು ಹಾಕಿದ ದೊಡ್ಡಗೌಡ್ರು: ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ ಎಂದ್ರು
ಎರಡನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ರಿವೀಲ್?: ಇವೆಲ್ಲದರ ನಡುವೆ ಎರಡನೇ ಪಟ್ಟಿ ಬಿಡುಗಡೆ ಸಮಯ ಹತ್ತಿರವಾದರೂ ಹಾಸನ ಕ್ಷೇತ್ರದ ಅಭ್ಯರ್ಥಿ ಯಾರು ಅನ್ನೋ ಸಸ್ಪೆನ್ಸ್ ಇನ್ನೂ ಮುಂದುವರೆದಿದೆ. ಎರಡನೆಯ ಪಟ್ಟಿಯಲ್ಲಿ ಕೂಡಾ ಹಾಸನದ ಅಭ್ಯರ್ಥಿ ಹೆಸರು ರಿವೀಲ್ ಆಗೋದು ಡೌಟ್..