Asianet Suvarna News Asianet Suvarna News

TP, ZP Election: ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಯಾವಾಗ? ಸುಳಿವು ಕೊಟ್ಟ ಈಶ್ವರಪ್ಪ

* ತಾಲೂಕು, ಜಿಲ್ಲಾ ಪಂಚಾಯಿತಿ ವಿಳಂಬ
* ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಯಾವಾಗ? 
* ಎಲೆಕ್ಷನ್ ನಡೆಯುವ ಬಗ್ಗೆ ಸುಳಿವು ಕೊಟ್ಟ ಈಶ್ವರಪ್ಪ

KS Eshwarappa Hints Zilla and Taluk panchayat election held In March rbj
Author
Bengaluru, First Published Dec 31, 2021, 4:35 PM IST

ಬೆಂಗಳೂರು, (ಡಿ.31): ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ (Zilla, Taluk Panchayat Election) ಈಗಾಗಲೇ ಮುಗಿದು ಹಳೆಯದಾಗಿರಬೇಕಿತ್ತು. ಆದ್ರೆ, ಕಾರಣಾಂತರಗಳಿಂ ಸರ್ಕಾರ ಇನ್ನೂ TP, ZP ಎಲೆಕ್ಷನ್ ಮಾಡಲು ಮುಂದಾಗುತ್ತಿಲ್ಲ.

ಹಾಗಾದ್ರೆ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ ಎನ್ನುವ ಕುತೂಹಲ ರಾಜಕೀಯ ಆಸಕ್ತಿಗೆ ಇರುವಂಥದ್ದೇ, ಆದ್ರೆ, ಈ ಬಗ್ಗೆ ಇನ್ನೂ ಯಾವುದೇ ಖಚಿತ ನಿರ್ಧಾರ ಆಗದಿದ್ದರೂ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಭವಿಷ್ಯ ನುಡಿದಿದ್ದಾರೆ.

ಜಿಲ್ಲಾ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಪ್ರಕಟಿಸಿದ ಚುನಾವಣಾ ಆಯೋಗ

ಹೌದು.... ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಮಾರ್ಚ್‍ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಮರು ವಿಂಗಡಣೆ ಕಾರ್ಯ ಪೂರ್ಣಗೊಂಡ ನಂತರ ವಾರ್ಡ್‍ವಾರು ಮೀಸಲಾತಿ ನಿಗದಿಯಾಗಲಿದೆ. ಇಷ್ಟೂ ಪ್ರಕ್ರಿಯೆ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದರು.

ಕ್ಷೇತ್ರ ಮರುವಿಂಗಡಣೆ ಎಲ್ಲ ಕ್ಷೇತ್ರಗಳಲ್ಲೂ ಆಗುವುದಿಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ ಮಾತ್ರ ಆಗುತ್ತದೆ. ಲಕ್ಷ್ಮಿ ನಾರಾಯಣ್ ನೇತೃತ್ವದ ಸಮಿತಿ ವರದಿ ನೀಡಿದ ಬಳಿಕ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದರು. 

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 661.24 ಕೋಟಿ ಅನುದಾನ ಡಿ.24ರಂದು ಬಿಡುಗಡೆಯಾಗಿದ್ದು, ಕೂಲಿಕಾರರ ಖಾತೆಗೆ ಹಣ ವರ್ಗಾವಣೆಯಾಗಿದೆ. ಯಾವುದೇ ಕೂಲಿ ಬಾಕಿ ಉಳಿದಿಲ್ಲ ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲಿ ಈಗಾಗಲೇ 13.14 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯಾಗಿದ್ದು, 1.40 ಕೋಟಿ ಮಾನವ ದಿನಗಳ ಹೆಚ್ಚುವರಿ ಸೃಜನೆಗೆ ಅವಕಾಶ ದೊರೆತಿದ್ದು, ಹೆಚ್ಚುವರಿಯಾಗಿ 750 ಕೋಟಿ ರೂ. ಅನುದಾನ ದೊರೆಯಲಿದೆ ಎಂದರು. ಜಲಶಕ್ತಿ ಅಭಿಯಾನದಲ್ಲಿ 8.92 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 4.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಈ ಅಭಿಯಾನದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-3ರಡಿಯಲ್ಲಿ ರಾಜ್ಯಕ್ಕೆ 5612.50ಕಿ.ಮೀ. ಉದ್ದದ ರಸ್ತೆಗಳನ್ನು ಹಂಚಿಕೆ ಮಾಡಲಾಗಿದ್ದು, ಹಂತ ಹಂತವಾಗಿ ಒಟ್ಟು 5377.63 ಕಿ.ಮೀ.ಗೆ ಅನುಮೋದನೆ ಪಡೆಯಲಾಗಿದೆ. ಒಟ್ಟು 3573.51 ಕೋಟಿ ಮೊತ್ತದ ರಸ್ತೆ ಸೇತುವೆ ಕಾಮಗಾರಿಗೆ ಅನುಮೋದನೆ ದೊರೆತಿದೆ ಎಂದು ವಿವರಿಸಿದರು.

5965 ಗ್ರಾ.ಪಂ.ಗಳ ಪೈಕಿ ಘನತ್ಯಾಜ್ಯ ನಿರ್ವಹಣೆಗೆ ಜಾಗ ಲಭ್ಯವಿರುವ 5616 ಗ್ರಾ.ಪಂ.ಗಳಲ್ಲಿ ವಿಸ್ತೃತ ಯೋಜನಾ ವರದಿಗಳನ್ನು ಅನುಮೋದನೆ ನೀಡಲಾಗಿದೆ. 3585 ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯಾಚರಣೆಯಲ್ಲಿವೆ. ಶೀಘ್ರದಲ್ಲೇ ಎಲ್ಲ ಗ್ರಾ.ಪಂ.ಗಳಿಗೂ ಕಾರ್ಯಾಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಜಲಜೀವನ್ ಮಿಷನ್ ಯೋಜನೆಯಡಿ 2024ರ ಒಳಗೆ ಎಲ್ಲ ಮನೆಗಳಿಗೂ ಕೊಳಾಯಿ ಮೂಲಕ ನೀರು ಸಂಪರ್ಕ ಕಲ್ಪಿಸುವ ಉದ್ದೇಶವಿದೆ. ರಾಜ್ಯದಲ್ಲಿ 42.66 ಲಕ್ಷ ಮನೆಗಳಿಗೆ ಈಗಾಗಲೇ ಕೊಳಾಯಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ 8196.96 ಕೋಟಿ ರೂ.ಗಳ ರಾಜ್ಯ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ರಾಜ್ಯದ 28 ಸಾವಿರ ಗ್ರಾಮಗಳಲ್ಲಿ ಈಗಾಗಲೇ 10 ಸಾವಿರ ಗ್ರಾಮಗಳಿಗೆ ಕೊಳಾಯಿ ಮೂಲಕ ನೀರು ಒದಗಿಸುವ ಕಾಮಗಾರಿ ಪ್ರಾರಂಭವಾಗಿದೆ. ಎರಡನೆ ಹಂತದಲ್ಲಿ 6 ಸಾವಿರ ಗ್ರಾಮಗಳಿಗೆ ಕೊಳಾಯಿ ಮೂಲಕ ನೀರು ಒದಗಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮೂರನೆ ಹಂತದಲ್ಲಿ ಮತ್ತೆ 6 ಸಾವಿರ ಗ್ರಾಮಗಳಿಗೆ ನೀರು ಒದಗಿಸಲಾಗುವುದು. ಕೊಳಾಯಿ ಮೂಲಕ ನೀರು ಪೂರೈಕೆಗೆ ಮೀಟರ್ ಅಳವಡಿಕೆ ಮಾಡಿ ಶುಲ್ಕ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios