Asianet Suvarna News Asianet Suvarna News

ಪರಿಹಾರ ನೀಡಿಕೆಯಲ್ಲಿ ಹಿಂದು, ಮುಸ್ಲಿಂ ತಾರತಮ್ಯದ ಬಗ್ಗೆ ಜನಜಾಗೃತಿ: ಸತೀಶ್‌

ಹತ್ಯೆ ಪ್ರಕರಣದಲ್ಲಿ ಹಿಂದೂ- ಮುಸ್ಲಿಂ ಎಂಬ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಹತ್ಯೆಯಾದರೆ 25 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದರೆ, ಬೇರೆ ಧರ್ಮದವರಿಗೆ ಒಂದು ರುಪಾಯಿಯನ್ನೂ ಕೊಟ್ಟಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

kpcc working president satish jarkiholi slams to bjp government gvd
Author
Bangalore, First Published Jul 31, 2022, 3:00 AM IST

ಗೋಕಾಕ (ಜು.31): ಹತ್ಯೆ ಪ್ರಕರಣದಲ್ಲಿ ಹಿಂದೂ- ಮುಸ್ಲಿಂ ಎಂಬ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಹತ್ಯೆಯಾದರೆ 25 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದರೆ, ಬೇರೆ ಧರ್ಮದವರಿಗೆ ಒಂದು ರುಪಾಯಿಯನ್ನೂ ಕೊಟ್ಟಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಹಾರ ವಿತರಣೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಹೋರಾಟ ಮಾಡುವುದಿಲ್ಲ. ಜನಜಾಗೃತಿ ಮೂಡಿಸಲಾಗುವುದು. 

ಇದು ಜನರ ಹೋರಾಟವಾಗಬೇಕು. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಬದಲಾಗಿ, ಚುನಾವಣೆಯಲ್ಲಿ ವೋಟ್‌ಬ್ಯಾಂಕ್‌ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಹಿಂದು, ಮುಸ್ಲಿಂ, ಎಸ್‌ಸಿ, ಎಸ್‌ಟಿ ಎನ್ನದೇ ಎಲ್ಲ ಸಮುದಾಯಗಳನ್ನು ಒಂದೇ ತಟ್ಟೆಯಲ್ಲಿ ಸಮಾನ ರೀತಿಯಾಗಿ ನೋಡಬೇಕು. ಆದರೆ ಬಿಜೆಪಿ ಮುಂಬರುವ ಚುನಾವಣೆ ತಯಾರಿಯಲ್ಲಿದೆ. ಸರ್ಕಾರವನ್ನು ಯಾವ ರೀತಿ ನಡೆಸಬೇಕು ಎನ್ನುವ ಚಿಂತನೆ ಬಿಜೆಪಿ ನಾಯಕರಿಗಿಲ್ಲ ಎಂದು ಟೀಕಿಸಿದರು.

ಇನ್ನು ಯಾಕೋ ಗಲಭೆ ಎಬ್ಬಿಸಿಲ್ಲ ಬಿಜೆಪಿಯವ್ರು, ಪ್ರವೀಣ್ ಹತ್ಯೆ ಪ್ರಕರಣ ಕುರಿತು ಜಾರಕಿಹೊಳಿ ವ್ಯಂಗ್ಯ!

ಬಿಜೆಪಿ ಸರ್ಕಾರದಲ್ಲಿ ಅವರ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ?: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಉಳಿದವರ ಕತೆಯೇನು? ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ದುರ್ದೈವ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ, ಭಜರಂಗದಳ ಸೇರಿ ಹಲವು ಸಂಘಟನೆಯ ಕಾರ್ಯಕರ್ತರ ಕೊಲೆ ಆಗಿದೆ. 

ಆಗೆಲ್ಲ ಬಿಜೆಪಿಯವರು ಅದನ್ನು ಬಳಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ್ದರು. ಈ ಬಾರಿ ಸುಮ್ಮನಿರುವುದು ನಮ್ಮ ಪುಣ್ಯ ಎಂದರು. ಹಿಂದೂಗಳು ಯಾರೇ ಮೃತಪಟ್ಟರೂ ಬಿಜೆಪಿಗರು ಅದನ್ನು ಮತಬ್ಯಾಂಕ್‌ಗೆ ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಅವರದೆ ಕಾರ್ಯಕರ್ತ ಹತ್ಯೆ ಆಗಿದ್ದಾನೆ. ಆದರೆ ಈಗೇನು ಉತ್ತರಿಸುತ್ತಾರೆ? ಹತ್ಯೆಗೆ ಇತರೆ ಕಾರಣ ಇರಬಹುದು. ಪೊಲೀಸರಿಗೆ ಮುಕ್ತ ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷದಲ್ಲಿ ಸ್ವಂತ ವಿಚಾರ ಪ್ರಸ್ತಾಪಿಸಲು ಎಲ್ಲರೂ ಸ್ವತಂತ್ರರು: ಪಕ್ಷದಲ್ಲಿ ತಮ್ಮ ವಿಚಾರ ಪ್ರಸ್ತಾಪ ಮಾಡಲು ಎಲ್ಲರೂ ಸ್ವತಂತ್ರರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತ್ರವಲ್ಲ, ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡಿ ಎಂದು ನಾವೂ ಹೇಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಪಕ್ಷದ ನಾಯಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಸಮಾಧಾನ ಹಾಗೂ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮಾಡಿ ಎಂಬ ಸೂಚನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ನಮ್ಮ ನಮ್ಮ ವಿಚಾರ ವ್ಯಕ್ತಪಡಿಸಲು ಎಲ್ಲರಿಗೂ ಅಧಿಕಾರ ಇದೆ. 

ಜಮೀರ್‌ ಅಹ್ಮದ್‌ ಕಾಂಗ್ರೆಸ್‌ನ ಬಾಹುಬಲಿ: ಸತೀಶ್‌ ಜಾರಕಿಹೊಳಿ

ಆದರೆ ಪಕ್ಷ ಅಂತ ಬಂದಾಗ ನಾವೆಲ್ಲರೂ ಒಂದೇ. ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಈಗಲೇ ಹೇಳುವುದು ಕಷ್ಟ, ಚುನಾವಣೆಯಲ್ಲಿ ನಮಗೆ ಸಂಖ್ಯಾಬಲ ಸಿಗಬೇಕು. ಆ ಮೇಲೆ ಈ ಕುರಿತು ಹೇಳುತ್ತೇವೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಳಿದರೆ ಕಾಂಗ್ರೆಸ್‌ಗೆ ಅನುಕೂಲ ಆಗಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಅವರದ್ದೇ ಸಾಮರ್ಥ್ಯ ಇದೆ. ಕೆಲವರಿಗೆ ಹೆಚ್ಚು ಇರಬಹುದು, ಕೆಲವರಿಗೆ ಕಡಿಮೆ ಇದೆ ಅಷ್ಟೆ. ಸಿದ್ದರಾಮ ಜನ್ಮದಿನದ ಅಮೃತ ಮಹೋತ್ಸವದಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುವ ಪ್ರಶ್ನೆಯೇ ಇಲ್ಲ, ಇದರಿಂದ ಪಕ್ಷಕ್ಕೆ ಶಕ್ತಿ ಬರಲಿದೆ ಮತ್ತು ಲಾಭವೂ ಆಗಲಿದೆ ಎಂದು ಹೇಳಿದರು.

Follow Us:
Download App:
  • android
  • ios