ಕಾಂಗ್ರೆಸ್‌ಗೂ ಸಿದ್ದರಾಮೋತ್ಸವಕ್ಕೂ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ
* ಇದು ಪಕ್ಷದ ಹೊರಗೆ ನಡೆಯಲಿರುವ ಕಾರ್ಯಕ್ರಮ
* ಪಕ್ಷದ ಹೊರಗೆ ವ್ಯಕ್ತಿ ಪೂಜೆ ಇದ್ದೇ ಇರುತ್ತೆ: ಸತೀಶ್
* ಸಿದ್ದರಾಮೋತ್ಸವದ ಸ್ವಾಗತ ಸಮಿತಿಯಲ್ಲಿ ನಾನು ಕೂಡ ಇದ್ದೇನೆ
ಬೆಳಗಾವಿ(ಜು.05): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮೋತ್ಸವವನ್ನು ಪಕ್ಷದಿಂದ ಮಾಡುತ್ತಿಲ್ಲ. ಪಕ್ಷದ ಹೊರಗೆ ಇದನ್ನು ಮಾಡಲಾಗುತ್ತಿದೆ. ಇದು ವೈಯಕ್ತಿಕ ಕಾರ್ಯಕ್ರಮ. ಅವರ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಹಾಗಾಗಿ ಇದನ್ನು ವಿರೋಧಿಸುವ ಪ್ರಶ್ನೆಯೇ ಸೃಷ್ಟಿಯಾಗಲ್ಲ ಎಂದು ಹೇಳಿದರು.
ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ: ಸತೀಶ ಜಾರಕಿಹೊಳಿ ಹೇಳಿದ್ದಿಷ್ಟು
ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿದ್ದಾಗ ಅದೆಲ್ಲ ಆಗಬಾರದು. ಹೊರಗೆ ಇದ್ದಾಗ ಏನೂ ಮಾಡಲಾಗದು. ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪಕ್ಷಗಳಲ್ಲೂ ವ್ಯಕ್ತಿ ಪೂಜೆ ಆಗುತ್ತದೆ. ಪಕ್ಷದ ಹೊರಗೆ ಬಂದಾಗ ವ್ಯಕ್ತಿ ಪೂಜೆ ಇದ್ದೇ ಇರುತ್ತದೆ. ಅದನ್ನು ತಪ್ಪಿಸಲು ಆಗುವುದಿಲ್ಲ. ಪಕ್ಷದ ವಿಚಾರ ಬಂದಾಗ ಪಕ್ಷ ಮೊದಲು. ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ನಮ್ಮಿಬ್ಬರ ಅಭಿಪ್ರಾಯವೂ ಒಂದೇ ಎಂದು ಹೇಳಿದರು.
ಸಿದ್ದರಾಮೋತ್ಸವದ ಸ್ವಾಗತ ಸಮಿತಿಯಲ್ಲಿ ನಾನು ಕೂಡ ಇದ್ದೇನೆ. ಇದು ಅಹಿಂದ ಸಮಾವೇಶವಲ್ಲ. ಇದು ಕೇವಲ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಸೀಮಿತವಾಗಿದೆ ಅಷ್ಟೇ. ಕಾಂಗ್ರೆಸ್ ಪಕ್ಷವೇ ಅಹಿಂದ ಇದ್ದಂತೆ. ಹೀಗಾಗಿ ಪ್ರತ್ಯೇಕ ಸಭೆ ಅವಶ್ಯಕತೆ ಇಲ್ಲ. ಸಿದ್ದರಾಮೋತ್ಸವಕ್ಕೆ ಕಾರ್ಯಕರ್ತರು ಇರುತ್ತಾರೆ. ಆದರೆ, ಅದು ಪಕ್ಷದ ಬ್ಯಾನರ್ ಮೇಲೆ ನಡೆಯಲ್ಲ. ಅಭಿಮಾನಿಗಳ ಬ್ಯಾನರ್ ಮೇಲೆ ನಡೆಯುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಕೂಡ ಬರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಸಿದ್ದರಾಮೋತ್ಸವದ ಕಾರ್ಯಕ್ರಮ ರೂಪುರೇಷೆಗಳ ಸಿದ್ಧತೆಗೆ ಜು.13ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.