ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡ್ತಿದೆ: ಸಲೀಂ ಅಹ್ಮದ್
* ಇಡಿ, ಐಟಿಯನ್ನು ದುರ್ಬಳಕೆ ಮಾಡಿಕೊಳ್ತಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
* ಬೇಕಂತಲೇ 2015ರಲ್ಲಿ ಕ್ಲೋಸ್ ಆಗಿದ್ದ ಕೇಸ್ ರೀ ಓಪನ್ ಮಾಡಿಸಿದ್ರು
* ಇಡೀ ದೇಶದಲ್ಲಿ ಮೋದಿ ಸರ್ಕಾರ ಭಯದ ವಾತಾವರಣ ಸೃಷ್ಟಿ ಮಾಡಿದೆ ನಾಚಿಕೆ ಆಗಬೇಕು
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜು.01): ಸುಖಾ ಸುಮ್ಮನೇ ಕಾಂಗ್ರೆಸ್ ವಿರುದ್ಧವಾಗಿ ಇಲ್ಲಸಲ್ಲದ ಆರೋಪಗಳನ್ನು ಎಲ್ಲರೂ ಮಾಡ್ತಿದ್ದಾರೆ. ಆದ್ರೆ ಈ ವೇದಿಕೆ ಮೂಲಕ ಹೇಳ್ತೀನಿ ಎಲ್ಲರೂ ರೈಟಿಂಗ್ ಅಲ್ಲಿ ಬರೆದಿಟ್ಟುಕೊಳ್ಳಿ ಯಾರು ಏನೇ ಮಾತಾಡಿದ್ರು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೆ. ಈ ಮಾತನ್ನು ಹೇಳಿದ್ದು ಬೇರೆ ಯಾರೂ ಅಲ್ಲ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು, ಚಿತ್ರದುರ್ಗದ ಖಾಸಗಿ ಕಾರ್ಯಕ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಸಲೀಂ ಅಹ್ಮದ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ರಾಜ್ಯದ ಜನ ಬಿಜೆಪಿಯ ಭ್ರಷ್ಟಾಚಾರ ಆಡಳಿತಕ್ಕೆ ಭ್ರಮನಿರಸರಾಗಿದ್ದಾರೆ. ಬಿಜೆಪಿ ಸರ್ಕಾರ ಇಡಿ, ಐಟಿ, ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ತಿದೆ. ಸೇಡಿನ ರಾಜಕೀಯವನ್ನು ಬಿಜೆಪಿ ಸರ್ಕಾರ ಮಾಡ್ತಿದೆ. ತನಿಖಾ ಸಂಸ್ಥೆಗಳನ್ನ ಬಿಜೆಪಿಯ ಮುಂಚೂಣಿ ಘಟಕಗಳಾಗಿ ಮಾಡ್ಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸುಮಾರು 5000 ಕೇಸ್ ಓಪನ್ ಮಾಡಿದ್ದಾರೆ. ಅದ್ರಲ್ಲಿ ಎಲ್ಲಾ ವಿಪಕ್ಷದ ಮುಖಂಡರ ಮೇಲೆ ಜಾಸ್ತಿ ಹಾಕಿದ್ದಾರೆ ಎಂದರು.
ಬಿಜೆಪಿ ಮುಂಚೂಣಿ ಘಟಕಗಳಾದ ಇಡಿ, ಐಟಿ: ಸಲೀಂ ಅಹ್ಮದ್
ಅಲ್ಲದೇ ರಾಹುಲ್ ಗಾಂಧಿ ಅವರನ್ನು 50 ಗಂಟೆ ವಿಚಾರಣೆ ಮಾಡಿದ್ದಾರೆ. 3 ಗಂಟೆಯಲ್ಲಿ ಮುಗಿಯುವ ತನಿಖೆಯನ್ನು 50 ಗಂಟೆ ಮಾಡಿದ್ದಾರೆ. ಅದು ಕೇವಲ ರಾಹುಲ್ ಗಾಂಧಿಯವರನ್ನು ಹೆದರಿಸುವ ತಂತ್ರ ರೂಪಿಸಿದ್ದಾರೆ. ಬ್ರಿಟಿಷರಿಗೆ ಕಾಂಗ್ರೆಸ್ ನವರು ಹೆದರಲಿಲ್ಲ ಇನ್ನು ನಿಮಗೆ ಹೆದರುತ್ತೀವಾ?. ಹೆದರಲ್ಲ, ಬಗ್ಗಲ್ಲ, ಜಗ್ಗಲ್ಲ, ನಮ್ಮ ಹೋರಾಟ ಯಾವಾಗಲೂ ನಿರಂತರ. ಸೋನಿಯಾ ಗಾಂಧಿಯವರಿಗೂ ಹೆದರಿಸುವ ತಂತ್ರ ಮಾಡ್ತಿದ್ದಾರೆ. ಇದು ನಿಜಕ್ಕೂ ಬಿಜೆಪಿ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಇನ್ನೂ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಬರುತ್ತೆ ಅಂತ ತಿಳಿದು ನಮ್ಮ ಕೆಪಿಸಿಸಿ ಅಧ್ಯಕ್ಷಾ ಡಿಕೆ ಶಿವಕುಮಾರ್ ಅವರಿಗೆ ನೋಟೀಸ್ ನೀಡಿ ಮತ್ತೊಮ್ಮೆ ವಿಚಾರಣೆಗೆ ಕರೆದಿದ್ದಾರೆ. ನೋಡಿ ಸ್ವಾಮಿ ನೀವು ಏನು ಮಾಡಿದ್ರು ಕಾಂಗ್ರೆಸ್ ಇದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ. ಜನ ಇವತ್ತು ರಾಜ್ಯದಲ್ಲಿ ಬದಲಾವಣೆ ಬಯಸ್ತಿದ್ದಾರೆ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೊಮ್ಮೆ ಬಂದೇ ಬರುತ್ತದೆ. ಈ ರೀತಿ ನಮ್ಮ ನಾಯಕರ ಮೇಲೆ ಹೆದರಿಸುವ ತಂತ್ರ ಮಾಡ್ತಿರೋ ಬಿಜೆಪು ಸರ್ಕಾರಕ್ಕೆ ನಾಚಿಕೆ ಆಗಬೇಕು. ಇದಕ್ಕೆಲ್ಲಾ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ಕೊಡುತ್ತಾರೆ. ಯಾಕಂದ್ರೆ ಈಗಾಗಲೇ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಇದೆನ್ನೆಲ್ಲಾ ಜನರ ಕಣ್ಮುಂದೆ ಕಾಣ್ತಿದೆ ಜನರೇ ಅವರಿಗೆ ಚುನಾವಣೆಯಲ್ಲಿ ತಕ್ಕ ಶಿಕ್ಷೆ ಕೊಟ್ಟೆ ಕೊಡ್ತಾರೆ.
ಇನ್ನೂ ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದಂತೆ 2015 ರಲ್ಲಿಯೇ ಡೆಕ್ಕನ್ ಹೆರಾಲ್ಡ್ ಕೇಸ್ ಕ್ಲೋಸ್ ಆಗಿತ್ತು. ಸುಬ್ರಮಣ್ಯಸ್ವಾಮಿ ಹಾಕಿದ್ದ ಕೇಸ್ ಆಗೆಯೇ ಕ್ಲೋಸ್ ಆಗಿತ್ತು. ಅದು ಯಾರ ಸ್ವತ್ತು ಅಲ್ಲ ಟ್ರಸ್ಟಿ ಸ್ವತ್ತು. ಬೇಕಂತಲೇ 2015ರಲ್ಲಿ ಕ್ಲೋಸ್ ಆಗಿದ್ದ ಕೇಸ್ ರೀ ಓಪನ್ ಮಾಡಿಸಿದ್ರು. ರಾಜ್ಯ ಮತ್ತು ಕೇಂದ್ರದಲ್ಲಿ ದ್ವೇಷದ ರಾಜಕೀಯ ಬಿಜೆಪಿ ಮಾಡ್ತಿದೆ. ನಮ್ಮ ಕಾಲದಲ್ಲಿ ನಾವು ದ್ವೇಷದ ರಾಜಕೀಯ ಯಾವತ್ತೂ ಮಾಡಿಲ್ಲ ಎಂದು ಎದೆ ತಟ್ಟಿ ಹೇಳ್ತೀವಿ. 70 ವರ್ಷ ಅಧಿಕಾರದಲ್ಲಿ ಇದ್ರು ಇಂತಹ ರಾಜಕೀಯ ಕಾಂಗ್ರೆಸ್ ಮಾಡ್ಲಿಲ್ಲ. ಇಡೀ ದೇಶದಲ್ಲಿ ಮೋದಿ ಸರ್ಕಾರ ಭಯದ ವಾತಾವರಣ ಸೃಷ್ಟಿ ಮಾಡಿದೆ ನಾಚಿಕೆ ಆಗಬೇಕು ಅವರಿಗೆ ಎಂದು ವಾಗ್ದಾಳಿ ನಡೆಸಿದರು.