ಕಾಂಗ್ರೆಸ್ ಸೋಲಿಸಲು ಐಟಿ, ಇಡಿಗೆ ಬಿಜೆಪಿ ಶರಣು: ಧ್ರವನಾರಾಯಣ್
ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಸುಭದ್ರ ನೆಲೆಯಾಗಿದ್ದ ಹೊರತಾಗಿಯೂ ಬಿಜೆಪಿ ತನ್ನ ಅಪರ ರಾಜನೀತಿಯ ತಂತ್ರಗಾರಿಕೆಯಿಂದ ಗೆಲುವು ಸಾಧಿಸುತ್ತಿರುವುದು ವಿಷಾದನೀಯ: ಮಾಜಿ ಸಂಸದ ಧ್ರುವ ನಾರಾಯಣ್
ಕಾರ್ಕಳ(ಡಿ.22): ಮುಂದಿನ ಚುನಾವಣೆಯಲ್ಲಿ ಸೋಲು ಖಚಿತವೆಂದು ಮನಗಂಡಿರುವ ಬಿಜೆಪಿ, ಆ ಭೀತಿಯಲ್ಲಿ ಮತದಾರರ ಪಟ್ಟಿಕದಿಯಲು ನೋಡಿ ಸಿಕ್ಕಿಬಿದ್ದು ಮಾನ ಕಳೆದುಕೊಂಡು ಈಗ ಮತ್ತೆ ಕಾಂಗ್ರೆಸ್ ನಾಯಕರನ್ನು ಹಣಿಯಲು ಐಟಿ ಇಡಿಗೆ ಶರಣಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದ್ದಾರೆ.
ಅವರು ಬುಧವಾರ ಕಟೀಲ್ ಇಂಟರ್‌ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಮತ್ತು ಹೆಬ್ರಿ ಆಯೋಜಿಸಿದ್ದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಸುಭದ್ರ ನೆಲೆಯಾಗಿದ್ದ ಹೊರತಾಗಿಯೂ ಬಿಜೆಪಿ ತನ್ನ ಅಪರ ರಾಜನೀತಿಯ ತಂತ್ರಗಾರಿಕೆಯಿಂದ ಗೆಲುವು ಸಾಧಿಸುತ್ತಿರುವುದು ವಿಷಾದನೀಯ. ಎದುರಾಳಿಗಳ ವೈಫಲ್ಯವನ್ನು ಬಳಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಬೇಕು. ಅಭಿವೃದ್ಧಿಯ ಸೋಗಿನಲ್ಲಿ ಇಲ್ಲಿನ ಶಾಸಕ ಸಚಿವ ಸುನೀಲ್ ಕುಮಾರ್ ಹಾಗೂ ಅವರ ಅನುಯಾಯಿಗಳು ಮಾಡಿರುವ ಭ್ರಷ್ಟಾಚಾರವನ್ನು ಮನೆಮನೆಗಳಿಗೆ ತಲಪಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಬೇಕು ಎಂದರು.
ಭಜರಂಗದಳದ ಹೊಸ ತಗಾದೆ: ನ್ಯೂ ಇಯರ್ ಪಾರ್ಟಿಯಲ್ಲಿ ಮುಸ್ಲಿಮರಿಗೆ ನೋ ಎಂಟ್ರಿ!
ಎಐಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಮೈಸೂರು ವಿಭಾಗ ಉಸ್ತುವಾರಿ ರೋಜಿ ಜಾನ್ ಮಾತನಾಡಿ, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕಿಗೆ ಕಣ್ಣಿಟ್ಟಿರುವ ಬಿಜೆಪಿ, ಧರ್ಮ ಮತ್ತು ಆಮಿಷದ ಹೆಸರಲ್ಲಿ ಇದನ್ನು ಒಡೆಯಲು ನೋಡುತ್ತಿದೆ. ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ವಾಸ್ತವತೆಯನ್ನು ಜನರ ಮುಂದಿಟ್ಟು ಇದನ್ನು ಎದುರಿಸುವುದು ಇಂದಿನ ಆದ್ಯತೆಯಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಟರ್ ಕೊಡವೂರು ಪ್ರಸ್ತಾವನೆಗೈದರು. ಕ್ಷೇತ್ರ ಉಸ್ತುವಾರಿ ಮಮತಾ ಗಟ್ಟಿಬೂತ್ ಮಟ್ಟದ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ದೀಪಕ್ ಕೋಟ್ಯಾನ್, ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷ ರೋಷನ್ ಶೆಟ್ಟಿ, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಜಯಾನಂದ, ಡಿ.ಆರ್. ರಾಜು, ಕೆಪಿಸಿಸಿ ಸದಸ್ಯ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿಉಪಸ್ಥಿತರಿದ್ದರು. ಅಧ್ಯಕ್ಷ ಸದಾಶಿವ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.