40 ಪರ್ಸೆಂಟ್‌ ಅಲ್ಲ, 100ಕ್ಕೆ ನೂರು ಭ್ರಷ್ಟ ಸರ್ಕಾರ: ಈಶ್ವರ ಖಂಡ್ರೆ

ಇದು 40 ಪರ್ಸೆಂಟ್‌ ಸರ್ಕಾರ ಅಲ್ಲ, ನೂರಕ್ಕೆ ನೂರರಷ್ಟು ಭ್ರಷ್ಟಾಚಾರದ ಸರ್ಕಾರ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

kpcc working president eshwar khandre slams to bjp at yadgir gvd

ಯಾದಗಿರಿ (ಆ.10): ಇದು 40 ಪರ್ಸೆಂಟ್‌ ಸರ್ಕಾರ ಅಲ್ಲ, ನೂರಕ್ಕೆ ನೂರರಷ್ಟು ಭ್ರಷ್ಟಾಚಾರದ ಸರ್ಕಾರ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯಾದಗಿರಿಗೆ ಆಗಮಿಸಿದ್ದ ಅವರು, ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ರಾಜ್ಯ ಸರ್ಕಾರದ ಆಡಳಿತ ಬರೀ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ತುಂಬಿದೆ. ನೇಮಕಾತಿ ಸೇರಿದಂತೆ ಅನೇಕ ಕಾರ್ಯಗಳಿಗೆ ಲಂಚದ ಹಾವಳಿ ಹೆಚ್ಚಾಗಿದೆ. ಪ್ರತಿಯೊಂದರಲ್ಲೂ ಲಂಚವನ್ನೇ ಕೇಳುವ ಪರಿಪಾಠ ಇಲ್ಲಿದೆ. 

ಒಡೆದು ಆಳುವ ನೀತಿ ಇಲ್ಲಿದ್ದು, ಧರ್ಮಗಳ ಮಧ್ಯೆ ದ್ವೇಷ ಬಿತ್ತಿ ಇಲ್ಲಿ ಪರಸ್ಪರ ಗಲಭೆಗಳಿಗೆ ಈ ಸರ್ಕಾರ ಪ್ರಚೋದಿಸುತ್ತಿದೆ. ಪ್ರಶ್ನಿಸಿದವರ ಮೇಲೆ ಇಡಿ ಹಾಗೂ ಸಿಬಿಐ ಬಿಟ್ಟು ದಾಳಿ ಮಾಡಿಸುತ್ತಿದೆ ಎಂದು ಟೀಕಿಸಿದರು. ಅತಿವೃಷ್ಟಿ, ಕುಂಭಕರ್ಣ ನಿದ್ರೆಯಲ್ಲಿ ಸರ್ಕಾರ: ರಾಜ್ಯದಲ್ಲಿ ಅತಿವೃಷ್ಟಿಇದ್ದರೂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡ ಖಂಡ್ರೆ, ಕಲ್ಯಾಣ ಕರ್ನಾಟಕ ಭಾಗವನ್ನು ಅತಿವೃಷ್ಟಿಭಾಗವೆಂದು ಸರ್ಕಾರ ಘೋಷಿಸುತ್ತಿಲ್ಲ. 

ಯಾದಗಿರಿ: ಪಿಎಸ್‌ಐ ಅಕ್ರಮ ದೂರು ನಿರ್ಲಕ್ಷಿಸಿದ್ದವರಿಗೆ ಕಂಟಕ?

ರಾಜ್ಯ ಸರ್ಕಾರ ಪದೆ ಪದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುತ್ತಿದೆ ಎಂದ ಈಶ್ವರ ಖಂಡ್ರೆ, ಬಡವರ ಮೇಲೆ ಕೇಂದ್ರ ಸರ್ಕಾರ ತೆರಿಗೆ ಹಾಕಿ ಶ್ರೀಮಂತರಿಗೆ ಬೆಂಬಲ ನೀಡುತ್ತಿದೆ. ಲೋಕಸಭೆಯಲ್ಲಿ ಚರ್ಚೆಗೆ ಬಂದರೆ ಬಣ್ಣ ಬಯಲಾಗುತ್ತದೆ ಎಂದು ಸದಸ್ಯರನ್ನು ಸಸ್ಪೆಂಡ್‌ ಮಾಡಿ ಹೊರಹಾಕಲಾಗುತ್ತಿದೆ. ಜನವಿರೋಧಿ ಮಸೂದೆಗಳಿಗೆ ಅಂಕಿತ ಹಾಕಲಾಗುತ್ತದೆ, ಹಣಕಾಸು ಸಚಿವರ ಹೇಳಿಕೆಗಳು ಹಾಸ್ಯಾಸ್ಪದ ಎನ್ನಿಸುತ್ತವೆ ಎಂದು ಬೆಲೆಯೇರಿಕೆ ಹಾಗೂ ಆರ್ಥಿಕ ಹಿಂಜರಿತದ ಬಗ್ಗೆ ಕೇಂದ್ರ ಸರ್ಕಾರದ ನಿಲುವು-ಹೇಳಿಕೆಗಳನ್ನು ಟೀಕಿಸಿದ ಖಂಡ್ರೆ, ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ, ಜನರ ಅನ್ನದ ಮೇಲೆ ಜಿಎಸ್‌ಟಿ ಹಾಕುತ್ತಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ: ಇನ್ನು ಏಳೆಂಟು ತಿಂಗಳಲ್ಲಿ ಚುನಾವಣೆ ಬರುತ್ತದೆ. ದುರಾಡಳಿತದ ಸರ್ಕಾರದ ವಿರುದ್ಧ ಜನ ತುದಿಗಾಲ ಮೇಲೆ ನಿಂತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೀತಿಯಿಂದಾಗಿ ಜನರು ಮೌನಕ್ರಾಂತಿಯ ಮೂಲಕವೇ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಈಶ್ವರ ಖಂಡ್ರೆ ಹೇಳಿದರು.

ಸಿಎಂ ಬದಲಾವಣೆ ಎಂಬ ಕಾಂಗ್ರೆಸ್‌ ಟ್ವೀಟ್‌ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಕ್ರಮವಾಗಿ ಹಿಂಬಾಗಿಲಿನಿಂದ ಮೂಲಕ ಬಂದ ಸರ್ಕಾರವಿದು. ಅಸಂವಿಧಾನಾತ್ಮಕವಾಗಿ ಅಪರೇಷನ್‌ ಕಮಲ ಮಾಡಿ ಅ​ಧಿಕಾರಕ್ಕೆ ಬಂದಿದೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಬೀಳಿಸಿ ಅ​ಧಿಕಾರ ಮಾಡುತ್ತಿದ್ದಾರೆ. ಕಾನೂನುಬಾಹಿರವಾದ ಈ ಸರ್ಕಾರದಲ್ಲಿ ಯಾವಾಗಲು ಮೋಡ ಕವಿದಿದ್ದೇ ಇರುತ್ತದೆ. ಹೀಗಾಗಿ, ಸಿಎಂ ಬದಲಾವಣೆ ವಿಚಾರ ಆ ಪಕ್ಷದ ಹೈಕಮಾಂಡಿಗೆ ಬಿಟ್ಟಿದ್ದಾದರೂ, ಬಿಜೆಪಿಯ ಸೋಲು ಕರ್ನಾಟಕದಿಂದ ಆರಂಭವಾಗಲಿದೆ. ಇದು ಇಡೀ ದೇಶಾದ್ಯಂತ ಆರಂಭವಾಗುತ್ತದೆ ಎಂದರು.

ನಿತೀಶ ಕುಮಾರ್‌ಗೆ ಜ್ಞಾನೋದಯ: ಬಿಹಾರದಲ್ಲಿ ಮೈತ್ರಿ ಸರ್ಕಾರ ಪತನ ವಿಚಾರವಾಗಿ ಮಾತನಾಡಿದ ಈಶ್ವರ ಖಂಡ್ರೆ, ನಿತೀಶಕುಮಾರ್‌ ಅವರಿಗೆ ಈಗ ಜ್ಞಾನೋದಯವಾಗಿದೆ. ಬಿಜೆಪಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂಬುದನ್ನು ಅವರು ಅನುಭವಿಸಿದಂತಿದೆ. ಬಿಜೆಪಿಯವರಿಗೆ ಬೆಂಬಲ ನೀಡಿದವರಿಗೆ ಬಿಜೆಪಿಯೇ ಬೆನ್ನಿಗೆ ಚೂರಿ ಹಾಕುತ್ತಿದೆ ಅನ್ನೋದು ಅವರಿಗೆ ಮನದಟ್ಟಾಗಿರಬಹುದು. ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ಕೂಡ ಬಿಜೆಪಿ ಸಹವಾಸ ಬಿಟ್ಟು ಕಾಂಗ್ರೆಸ್‌, ಎನ್‌ಸಿಪಿ ಜೊತೆ ಬಂದಿದ್ದರು. ಹೀಗೆ ಬಿಟ್ಟರೆ ಜೆಡಿಯು ಪಕ್ಷವನ್ನೂ ಮುಗಿಸುತ್ತಾರೆ ಎನ್ನುವುದು ಗೊತ್ತಾಗಿದ್ದರಿಂದ ನಿತೀಶ್‌ ಕುಮಾರ್‌ ಮೈತ್ರಿಯಿಂದ ಹಿಂದೆ ಸರಿದಿದ್ದಾರೆ. 

ಯಾದಗಿರಿಗೂ ಅಂಟಿದ ಪಿಎಸ್ಐ ಅಕ್ರಮ ನಂಟು: ಸಿದ್ದುಗೌಡ ಅರೆಸ್ಟ್

ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಕಿಸಾನ್‌ ಘಟಕದ ಅಧ್ಯಕ್ಷ ಮಾಣಿಕರೆಡ್ಡಿ ಕುರಕುಂದಾ, ಯಾದಗಿರಿ ನಗರ ಕಾಂಗ್ರೆಸ್‌ ಅಧ್ಯಕ್ಷ ಸುದರ್ಶನ ನಾಯಕ್‌, ಸುರೇಶ ಜೈನ್‌, ಯುವ ಮುಖಂಡ ಬಸುಗೌಡ ಬಿಳ್ಹಾರ್‌, ವಕ್ಫ್ಬೋರ್ಡ್‌ನ ಜಹೀರ್‌, ಸಂಜಯಕುಮಾರ್‌ ಕಾವಲಿ ಮುಂತಾದವರಿದ್ದರು.

Latest Videos
Follow Us:
Download App:
  • android
  • ios