ಬೆಂಗಳೂರು, (ಮಾ. 24): ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯ ಸಚಿವ ಡಾ.ಸುಧಾಕರ್ ಅವರ 'ಏಕಪತ್ನೀವ್ರತಸ್ಥ' ಹೇಳಿಕೆ ರಂಪ ರಾಮಾಯಣವಾಗಿದೆ.

ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳು ಸುಧಾಕರ್ ಅವರ ಏಕಪತ್ನಿವ್ರತಸ್ಥ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಿಎಂ ಸುಧಾಕರ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಸುಧಾಕರ್ ತಮ್ಮ ಹೇಳಿಕೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ.

ಅನೈತಿಕ ಸಂಬಂಧ ಹೇಳಿಕೆ: ಸಿಎಂ ತರಾಟೆ ಬೆನ್ನಲ್ಲೇ ಎಚ್ಚೆತ್ತ ಸುಧಾಕರ್!

ಇನ್ನು ಇದಕ್ಕೆ ಖಾರವಾಗಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕೆಪಿಸಿಸಿ, ಬೇರೊಬ್ಬರ ಹೆಂಡತಿಯರ ಬಗ್ಗೆ ಲೆಕ್ಕ ಹಾಕುವ ಮೊದಲು, ಕೊರೋನಾ ಕೇಸ್ ಅನ್ನು ಲೆಕ್ಕಹಾಕಿಕೊಳ್ಳಿ ಎನ್ನುವ ಸಲಹೆಯನ್ನು ನೀಡಿದೆ.

ಸುಧಾಕರ್ ಅವರೇ, ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತರುವ ಮೂಲಕ ನೀವು ಏಕಪತ್ನಿ ವ್ರತಸ್ಥರಲ್ಲ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದೀರಿ. ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಕಳಂಕ ತೊಳೆದುಕೊಂಡು ಬನ್ನಿ, ಅಂದಹಾಗೆ ಕಂಡವರ ಹೆಂಡಿರ ಲೆಕ್ಕ ಹಾಕುವ ಮೊದಲು ರಾಜ್ಯದಲ್ಲಿ ಏರುತ್ತಿರುವ ಕೊರೋನಾ ಕೇಸ್‌ಗಳ ಲೆಕ್ಕ ಗಮನಿಸಿ ಎಂದು ಕೆಪಿಸಿಸಿ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದೆ.

ಬಿಜೆಪಿ ಪಕ್ಷದವರೇ, ನೀವು ನಿಜವಾಗಿಯೂ ಶ್ರೀರಾಮನ ಭಕ್ತರೇ ಆಗಿದ್ದರೆ, ರಾಮನ ಆದರ್ಶ ಪಾಲಿಸಿ. ಮೊದಲು ನೀವು ವಿಧಾನಸೌಧದ ಎದುರು ಅಗ್ನಿಪರೀಕ್ಷೆ ಎದುರಿಸಿ, ತಾವೆಲ್ಲಾ ಪವಿತ್ರರು ಎಂದು ನಿರೂಪಿಸಿ. ಇಲ್ಲವಾದಲ್ಲಿ 6 ಸಿಡಿ ಕಳಂಕಿತ ಸಚಿವರ ರಾಜೀನಾಮೆ ಪಡೆಯಿರಿ ಎಂದು ಕೆಪಿಸಿಸಿ ಟ್ವೀಟ್ ಮೂಲಕ ಆಗ್ರಹಿಸಿದೆ.