ಬೆಂಗಳೂರು, (ಮಾ.06): ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ. ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಈ ಪ್ರಕರಣದಿಂದ ಕೆಲ ಸಚಿವರುಗಳಿಗೆ ಢವ-ಢವ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಬಿಎಸ್‌ವೈ ಸರ್ಕಾರದ ಆರು ಸಚಿವರುಗಳು ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ.

ಇದನ್ನು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದ ಮಂತ್ರಿಗಳ ರಸಮಂಜರಿ ಕಾರ್ಯಕ್ರಮ ಮುಂದುವರೆದಿದೆ.. ಇದೇನು ಸಿಡಿ ಸರ್ಕಾರನಾ? ಅಂತಾ ಕಾಂಗ್ರೆಸ್​ ಪ್ರಶ್ನೆ ಮಾಡಿದೆ.

ರಾಸಲೀಲೆ ಸಿ.ಡಿ.ರಿಲೀಸ್: ಕೋರ್ಟ್‌ಗೆ ಹೋಗಿದ್ದ 6 ಸಚಿವರಿಗೆ ಬಿಗ್ ರಿಲೀಫ್

ಇಂದು (ಶನಿವಾರ) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಹಾಗೂ ಸುಪ್ರೀಂಕೋರ್ಟ್ ವಕೀಲ ಸಂಕೇತ ಏಣಗಿ, ರಾಜ್ಯದ ಮಂತ್ರಿಗಳ ರಸಮಂಜರಿ ಕಾರ್ಯಕ್ರಮ ಮುಂದುವರೆದಿದೆ. ಸಚಿವರು ಜನರನ್ನ ರಂಜಿಸುತ್ತಿದ್ದಾರೆ. ಪ್ರತಿದಿನ ಒಂದೊಂದು ಹೊಸ ವಿಚಾರ ಬಿಡ್ತಿದ್ದಾರೆ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿನಿಂದಲೂ ಸಿಡಿ ಬಗ್ಗೆ ಮಾತನ್ನಾಡ್ತಿದ್ರು. CD, CD ಅಂತಾ ಎಲ್ಲರೂ ಮಾತನ್ನಾಡ್ತಿದ್ದರು. ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಒಂದು ವಿಚಾರ ಹೇಳಿದ್ದರು. CDಯಿಂದ ಸಿಎಂಗೆ ಮುಜುಗರ ಆಗಲಿದೆ ಎಂದಿದ್ದರು. ಈಗ CD ವಿಚಾರ ಎಲ್ಲೆಡೆ ಬಿತ್ತರಗೊಂಡಿದೆ ಎಂದು ಹೇಳಿದರು.

ಯಾರಾದ್ರೂ CD ಇಟ್ಕೊಂಡು ಬ್ಲಾಕ್ ಮೇಲ್ ಮಾಡ್ತಿದ್ರಾ? ಸಚಿವರ ವಿರುದ್ಧ ಪಿತೂರಿ ನಡೆಯುತ್ತಿತ್ತಾ? ಮಾನನಷ್ಟವಾಗಲಿದೆ ಎಂಬ ಭಯದಿಂದ ಸಂವಿಧಾನಾತ್ಮಕ ಹುದ್ದೆ ನಿಭಾಯಿಸೋದು ಕಷ್ಟಸಾಧ್ಯ. ಯಾರಾದರೂ ಸಿಡಿಗಳನ್ನ ಇಟ್ಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದಾರಾ? ಭಯದಲ್ಲಿರುವ ರಾಜಕಾರಣಿಗಳು ಕೆಲಸ ಮಾಡಲು ಸಾಧ್ಯವಿಲ್ಲ. ಇವರೇ ರಕ್ಷಣೆಗಾಗಿ ಕೋರ್ಟ್ ಮೊರೆ ಹೋಗ್ತಾರೆ ಅಂದ್ರೆ ಜನರ ರಕ್ಷಣೆ ಹೇಗೆ ಕೊಡ್ತಾರೆ ಎಂದು ಪ್ರಶ್ನಿಸಿದರು.

ರಕ್ಷಣೆ ಬೇಕಿದ್ದರೆ ಸಿಎಂ ಬಳಿ ಕೇಳಲಿ. ಅದಕ್ಕೂ ಮೊದಲು ರಾಜೀನಾಮೆ ನೀಡಲಿ. ದುಸ್ಸಾಹಸಕ್ಕೆ ಕೈಹಾಕಿರೋದನ್ನ ಅವರೇ ಒಪ್ಪಿಕೊಂಡಂತಾಗಿದೆ. ಯಾವುದೋ ಒಂದು ವಿಚಾರ ಸಂವಿಧಾನಕ್ಕೆ ಚ್ಯುತಿ ತರುವಂತಿದೆ ಎಂದು ವ್ಯಂಗ್ಯವಾಡಿದರು.

ಇದೇನು ಸಿಡಿ ಸರ್ಕಾರನಾ? ಇಲ್ಲವೇ ಸರ್ಕಾರವನ್ನ ನಡೆಸುತ್ತಿರೋದು ಸಿಡಿಗಳಾ? ಸಿಡಿ ಇಟ್ಕೊಂಡು ಸರ್ಕಾರವನ್ನ ನಡೆಸುತ್ತಿದ್ದಾರಾ? ಪೋಲಿಸರು ಸರ್ಕಾರದ ಹಿಡಿತದಲ್ಲಿದ್ದಾರೆ. ಹಾಗಾಗಿ ಇದರ ತನಿಖೆ ಪೊಲೀಸರಿಂದ ಸಾಧ್ಯವಿಲ್ಲ. ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.