ನನ್ನನ್ನು ಜೈಲಿಗೆ ಹಾಕಿದ್ದು ರಾಜಕೀಯ ಪ್ರೇರಿತ, ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ, ಮೂಡಿ​ಗೆ​ರೆ​ಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿ

ಮೂಡಿಗೆರೆ(ನ.30):  ‘ನನ್ನ ಮೇಲೆ ಯಾವ ರೌಡಿ ಶೀಟರ್‌ ಕೇಸ್‌ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಿಹಾರ್‌ ಜೈಲಿಗೆ ಹೋದವರು ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಬಡ್ತಿ ಪಡೆದಿದ್ದಾರೆ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಜೈಲಿಗೆ ಹೋಗಿ ಬಂದವರಲ್ಲಿ ಯಡಿಯೂರಪ್ಪ ಇದ್ದಾರೆ, ಅಮಿತಾ ಶಾ ಇದ್ದಾರೆ, ಹಾಗೆಯೇ ನಾನು ಸಹ ಇದ್ದೇನೆ. ನನ್ನನ್ನು ಜೈಲಿಗೆ ಹಾಕಿದ್ದು ರಾಜಕೀಯ ಪ್ರೇರಿತ. ನನ್ನಲ್ಲಿ ಭ್ರಷ್ಟಾಚಾರ ಇತ್ತಾ? ಎಂದು ಪ್ರಶ್ನಿಸಿದರು.

ಬಳಿಕ, ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಜನರಿಗೆ ತೊಂದರೆ ಕೊಡುವ, ಭಾವನೆ ಕೆರಳಿಸುವ, ಭ್ರಷ್ಟಾಚಾ​ರ ನಡೆಸುವ ಹಾಗೂ ಪರ್ಸಂಟೇಜ್‌ ಕೇಳುವ ಕೆಲಸ ಬಿಟ್ಟರೆ ಆ ಪಕ್ಷದಲ್ಲಿ ಬೇರೇನೂ ಇಲ್ಲ. ಬಿಜೆಪಿ ಸರಕಾರ 3 ಬಾರಿ ನಡೆಸಿದ ಆಡಳಿತದಲ್ಲಿ ಜನರ ಬದುಕನ್ನು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಗೊಬ್ಬರ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದರು.

CHIKKAMAGALURU : ಡಿಕೆಶಿಯನ್ನ ಬರಮಾಡಿಕೊಳ್ಳಲು ಕೈ ಬಣದ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ

ಕಾಂಗ್ರೆಸ್‌ ಜಾತಿ ಮೇಲಿಲ್ಲ, ನೀತಿ ಮೇಲೆ ನಿಂತಿದೆ. ಇಂದಿರಾಗಾಂಧಿ, ರಾಜೀವ್‌ಗಾಂಧಿ, ನೆಹರು, ಲಾಲ್‌ ಬಹದ್ದೂರ್‌ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಬಡವರಿಗೆ ನಿವೇಶನ, ಜಮೀನು, ಬಗರ್‌ ಹುಕಂ ಸಾಗುವಳಿ ಸಕ್ರಮ, ಸಾಲಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ನೀಡಿದ್ದಾರೆ ಎಂದರು. ಇದಕ್ಕೂ ಮೊದಲು ಸಮಾವೇಶಕ್ಕೆ ಆಗಮಿಸಿದ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.