'ದೇಶ ಹಾಗೂ ರಾಜ್ಯದಲ್ಲಿ ಜನ ಬದಲಾವಣೆ ಬಯಸಿರುವುದಕ್ಕೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ'

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಹಾಗೂ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

KPCC President Dk Shivakumar Talks about Karnataka By Poll results rbj

ಬೆಂಗಳೂರು, (ಮೇ.02): ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಹಾಗೂ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ದೇಶ ಹಾಗೂ ರಾಜ್ಯದಲ್ಲಿ ಜನ ಬಿಜೆಪಿ ಸರ್ಕಾರವನ್ನು ಬದಲಾಯಿಸಬೇಕು ಎಂದು ತೀರ್ಮಾನಿಸಿರುವ ಮುನ್ಸೂಚನೆ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇಶ ಹಾಗೂ ರಾಜ್ಯದಲ್ಲಿ ದೊಡ್ಡ ಬದಲಾವಣೆಯ ಅಲೆ ಎದ್ದಿರುವುದನ್ನು ಈ ಚುನಾವಣೆ ಫಲಿತಾಂಶಗಳಲ್ಲಿ ನೋಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಕೊಟ್ಟ ತೀರ್ಪಿಗೆ ತಲೆಬಾಗಬೇಕಿದೆ. ಇಡೀ ದೇಶದಲ್ಲಿ ವಿಶೇಷವಾಗಿ ಪಶ್ಟಿಮ ಬಂಗಾಳ, ಕೇರಳ, ಅಸ್ಸಾಂ ನಲ್ಲಿ ನಾವು ಸೋತಿದ್ದರೂ ಜನರ ತೀರ್ಪು ದೇಶದಲ್ಲಿ ಬದಲಾವಣೆ ಆಗಬೇಕು ಎಂಬ ಸಂದೇಶ ಕೊಟ್ಟಿದೆ ಎಂದು ಹೇಳಿದರು.

'5 ವರ್ಷಗಳ ನಂತರ ಕೇರಳದಲ್ಲಿ ಬಿಜೆಪಿ ಖಂಡಿತ ಅಧಿಕಾರಕ್ಕೆ ಬರುತ್ತೆ' 

ಮತದಾರರು ಬಿಜೆಪಿ ವಿರುದ್ಧ ಬದಲಾವಣೆ ಬಯಸಿದ್ದಾರೆ. ಉಪಚುನಾವಣೆ ಹಾಗೂ ಪಂಚರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರ ಬದಲಾವಣೆಯಾಗಬೇಕು ಎಂಬುದನ್ನು ಬಯಸುತ್ತಿದೆ. ನಾನು ಆ ಎಲ್ಲ ಮತದಾರರಿಗೂ ಕಾಂಗ್ರೆಸ್ ವತಿಯಿಂದ ಅಭಿನಂದಿಸುತ್ತೇನೆ ಎಂದರು.

 ರಾಜ್ಯದಲ್ಲಿ ಮಸ್ಕಿ ಕ್ಷೇತ್ರ ಗೆದ್ದರೆ, ಬೆಳಗಾವಿಯಲ್ಲಿ ರೋಚಕ ಹಣಾಹಣಿ ನೋಡಿದ್ದೇವೆ. ಕಳೆದ ಚುನಾವಣೆಯಲ್ಲಿ 4 ಲಕ್ಷ ಅಂತರದಲ್ಲಿ ಸೋತಿದ್ದೆವು. ಆದರೆ ಇಂದು ಕೊಟ್ಟ ತೀರ್ಪು ಸೋಲಿನಲ್ಲಿ ಗೆಲವು ಕಾಣಿಸಿದೆ. ನಮ್ಮ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ದೊಡ್ಡ ಹೋರಾಟ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ನಮ್ಮ ಪಕ್ಷದ ನಾಯಕರು ಶಕ್ತಿಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರು ಶಾಸಕರಾಗಿದ್ದರೂ ನಾವು ಪಕ್ಷಕ್ಕಾಗಿ ಸ್ಪರ್ಧಿಸಿ ಎಂದು ಮನವಿ ಮಾಡಿಕೊಂಡಿದ್ದೆವು. ಅವರು ಪಕ್ಷದ ತೀರ್ಮಾನಕ್ಕೆ ಒಪ್ಪಿ, ಬಹಳ ಶಕ್ತಿ ತುಂಬಿದ್ದಾರೆ. ಯಾಕೆ ಸೋತಿದ್ದೇವೆ ಎಂಬ ಚರ್ಚೆ ಆಮೇಲೆ ಎಂದು ತಿಳಿಸಿದರು.

ಅಲ್ಲಿನ ರೈತರು, ವರ್ತಕರು, ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ. ರಾಜ್ಯದ ಮೂರೂ ಉಪಚುನಾವಣೆಯಲ್ಲಿ ಮತದಾರರ ಒಲವು ಬದಲಾವಣೆ ಪರ ಎಂಬುದನ್ನು ಬಿಂಬಿಸಿದೆ. ಬಸವ ಕಲ್ಯಾಣದಲ್ಲಿ 7 ರಿಂದ 8 ಸಾವಿರ ಅಂತರದ ತೀರ್ಪು ಬರುತ್ತದೆ ಎಂದು ಭಾವಿಸಿದ್ದೇವು. ಮಸ್ಕಿಯಲ್ಲಿ 25 ಸಾವಿರ ಅಂತರದ ಗೆಲುವು ನಿರೀಕ್ಷಿಸಿದ್ದೆವು. ಆ ನಿರೀಕ್ಷೆ ಮೀರಿ ಮಸ್ಕಿಯಲ್ಲಿನ ಸ್ವಾಭಿಮಾನಿ ಮತದಾರರು, ಮುಖಂಡರು ಕೊಟ್ಟ ಒಗ್ಗಟ್ಟಿನ ಪ್ರದರ್ಶನ ಮರೆಯಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ನನ್ನ ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಈ ಮೂರು ಚುನಾವಣೆಯಲ್ಲಿ ನಾಯಕರು, ಕಾರ್ಯಕರ್ತರು ತೋರಿದ ಐಕ್ಯತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮಸ್ಕಿಯಲ್ಲಿ ರೈತಾಪಿ ವರ್ಗದವರು ನೂರಾರು ದಿನ ಧರಣಿ ಕೂತಿದ್ದರು. ತಾವು ಹಿಂದೆ ಆರಿಸಿ ಕಳುಹಿಸಿದ ವ್ಯಕ್ತಿ ತಮ್ಮ ಮತ ಮಾರಿಕೊಂಡಿದ್ದಕ್ಕೆ 30 ಸಾವಿರ ಅಂತರದ ಗೆಲುವು ಕೊಟ್ಟಿದ್ದಾರೆ. ಇದು ಇಡೀ ರಾಜ್ಯದಲ್ಲೇ ಪಕ್ಷಕ್ಕೆ ಶಕ್ತಿ ತುಂಬಿದೆ. ಬೆಳಗಾವಿ ತೀರ್ಪು ಕೂಡ ಬದಲಾವಣೆ ದಿಕ್ಕು ತೋರಿದೆ. ಅವರ ನಂಬಿಕೆ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದರು.

Latest Videos
Follow Us:
Download App:
  • android
  • ios