ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವದಲ್ಲಿ ಮಾಡಲು ಸಿದ್ಧಪಡಿಸಿಕೊಂಡಿದ್ದ ಭಾಷಣದ ಟಿಪ್ಪಣಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸೋರಿಕೆಯಾದ ಪ್ರಹಸನ ನಡೆಸಿದೆ.

ಬೆಂಗಳೂರು (ಆ.02): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವದಲ್ಲಿ ಮಾಡಲು ಸಿದ್ಧಪಡಿಸಿಕೊಂಡಿದ್ದ ಭಾಷಣದ ಟಿಪ್ಪಣಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸೋರಿಕೆಯಾದ ಪ್ರಹಸನ ನಡೆಸಿದೆ. ದಾವಣಗೆರೆಯಲ್ಲಿ ಆ.3 ರಂದು ನಡೆಯಲಿರುವ ಕಾರ್ಯಕ್ರಮದ ಭಾಷಣದ ಟಿಪ್ಪಣಿ ಅಕಸ್ಮಾತ್‌ ಆಗಿ ಕೆಪಿಸಿಸಿಯ ವಿವಿಧ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಪೋಸ್ಟ್‌ ಆಗಿದೆ. ಇದರಿಂದ ಡಿ.ಕೆ. ಶಿವಕುಮಾರ್‌ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಏನು ಮಾತನಾಡಲು ಸಿದ್ಧತೆ ಮಾಡಿಕೊಂಡಿದ್ದರು ಎಂಬುದು ಬಹಿರಂಗವಾಗಿದೆ.

ಡಿ.ಕೆ. ಶಿವಕುಮಾರ್‌ ಮಾತನಾಡಬೇಕಿರುವ ಟಿಪ್ಪಣಿಯಲ್ಲಿ, ‘ಈ ಕಾರ್ಯಕ್ರಮವು ಸಿದ್ದರಾಮಯ್ಯ ಅವರು ಜೀವನ ಸಂಧ್ಯಾ ಕಾಲದಲ್ಲಿ ನಿಂತು ಹಿಂದಿನ ಅನುಭವ, ಸಾಧನೆಗಳನ್ನು ಮೆಲುಕು ಹಾಕುವ ಕ್ಷಣ. ಈ ಕಾರ್ಯಕ್ರಮ ಕಂಡು ಬಿಜೆಪಿ ಮತ್ತಿತರ ರಾಜಕೀಯ ವಿರೋಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಹೀಗಾಗಿಯೇ ಅನಗತ್ಯ ವಿವಾದಗಳನ್ನು ಸೃಷ್ಟಿಸಲು ಪ್ರಯತ್ನ ಮಾಡಿದರು. ನಮಗೆಲ್ಲಾ ಸ್ಥಾನ ಮಾನ ನೀಡಿದ್ದು ಕಾಂಗ್ರೆಸ್‌ ಪಕ್ಷ ಹೀಗಾಗಿ ಪಕ್ಷಕ್ಕಾಗಿ ಕೆಲಸ ಮಾಡೋಣ. ಪಕ್ಷ ಅಧಿಕಾರಕ್ಕೆ ತರಲಷ್ಟೇ ಕೆಲಸ ಮಾಡೋಣ, ನಾವು ಯಾವ ಸ್ಥಾನಕ್ಕೆ ಅರ್ಹರೋ ಅದನ್ನು ಪಕ್ಷ ನಿರ್ಧರಿಸಿ ನೀಡುತ್ತದೆ’ ಸೇರಿದಂತೆ ಹಲವು ವಿಚಾರಗಳನ್ನು ಈ ಭಾಷಣ ಒಳಗೊಂಡಿದೆ.

ಸಿದ್ದು ಜನ್ಮದಿನ ಖಾಸಗಿ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್‌

ರಾಹುಲ್‌ ಎದುರು ಅಶಿಸ್ತು ತೋರಿದರೆ ಕ್ರಮ: ರಾಜ್ಯ ಕಾಂಗ್ರೆಸ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆಗೆ ಆಗಮಿಸುತ್ತಿರುವ ರಾಹುಲ್‌ ಗಾಂಧಿ ಅವರೆದುರು ಯಾವುದೇ ಕಾರಣಕ್ಕೂ ಅಶಿಸ್ತು ಪ್ರಕಟವಾಗದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕಟ್ಟಪ್ಪಣೆ ಮಾಡಿದ್ದಾರೆ. ರಾಹುಲ್‌ ಗಾಂಧಿಯವರ ನೇತೃತ್ವದ ಸಭೆ ಕುರಿತು ಪೂರ್ವಭಾವಿಯಾಗಿ ಜಿಲ್ಲಾ ಮುಖಂಡರ ಜತೆ ಭಾನುವಾರ ರಾತ್ರಿ ಡಿಕೆಶಿ ಒಂದು ಗಂಟೆಗೂ ಹೆಚ್ಚಿನ ಕಾಲ ನಗರದಲ್ಲಿ ಸಭೆ ನಡೆಸಿ ಮಹತ್ವದ ಸೂಚನೆಗಳನ್ನು ನೀಡಿದರು. ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಸಭೆಯಲ್ಲಿ ರಾಷ್ಟ್ರ-ರಾಜ್ಯಮಟ್ಟದ 40 ಪದಾಧಿಕಾರಿಗಳು ಮಾತ್ರ ಪಾಲ್ಗೊಂಡು ಆಂತರಿಕ ಸಭೆ ನಡೆಸಲಿದ್ದಾರೆ. 

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಹೋರಾಟದ ಮುನ್ನೋಟ ಸೇರಿ ಇತರೆ ಚರ್ಚೆಯಾಗಲಿದೆ. ಸಭೆ ಗೌಪ್ಯವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಇದರ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಲು ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ ಸೇರಿ 10 ಪ್ರಮುಖರ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಆ. 2ರಂದು ರಾಹುಲ್‌ ಗಾಂಧಿ ಸ್ವಾಗತಕ್ಕೆ ಸಮಿತಿ ರಚನೆ ಮಾಡಬೇಕು. ಸುತ್ತಲ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಬರಬೇಕು. ಆದರೆ, ಇಲ್ಲಿ ಹೆಚ್ಚಿನ ಶಿಸ್ತು ಕಾಪಾಡಿಕೊಳ್ಳಬೇಕು. ನಿಮ್ಮಲ್ಲಿನ ಗೊಂದಲ ಹೊರಬರಬಾರದು. 

ಅಶಿಸ್ತು ತೋರಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಯಾರಾರ‍ಯರು ಯಾವ ಹೊಣೆ ಹೊರುತ್ತೀರಿ ಎಂಬುದರ ಮಾಹಿತಿಯನ್ನು ಸೋಮವಾರ ಮಧ್ಯಾಹ್ನದೊಳಗೆ ನೀಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು, ಜಿಲ್ಲೆಯಿಂದ ಸಿದ್ದರಾಮೋತ್ಸವಕ್ಕೆ ಎಷ್ಟು ವಾಹನಗಳು ತೆರಳುತ್ತಿವೆ? ಯಾರಾರ‍ಯರು ಪ್ರಮುಖರು ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷರು ಪಡೆದಿದ್ದಾರೆ. ಅಲ್ಲದೆ. ಎಐಸಿಸಿಯಿಂದ ಮುಂದಿನ ದಿನಗಳಲ್ಲಿ ಪರಿಶೀಲನೆಗೆ ಕಮಿಟಿ ಬರಲಿದೆ. ಇದಾದ ಬಳಿಕ ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಚಿತ್ರದುರ್ಗ: ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ, ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಪಿ.ಸಿ. ವಿಶ್ವನಾಥ, ಧಾರವಾಡ ಜಿಲ್ಲಾ ಉಸ್ತುವಾರಿ ಪಿ.ವಿ. ಮೋಹನ್‌, ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಪ್ರಕಾಶಗೌಡ ಪಾಟೀಲ್‌ ಸೇರಿ ಪ್ರಮುಖರಿದ್ದರು.