Karnataka Congress: ಕಾಂಗ್ರೆಸ್ ಸದಸ್ಯತ್ವದಲ್ಲಿ ಹಿನ್ನಡೆ ಮೋಟಮ್ಮ, ಪುತ್ರಿಗೆ ಡಿಕೆಶಿ ಕ್ಲಾಸ್
* ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ಮೇಲೂ ಡಿಕೆಶಿ ಗರಂ
* ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ
* ಮೋಟಮ್ಮಗೆ ಮುಜುಗರ
ಬಾಳೆಹೊನ್ನೂರು(ಮಾ.18): ಕಾಂಗ್ರೆಸ್ ಹಮ್ಮಿಕೊಂಡಿರುವ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಭಾರೀ ಹಿನ್ನೆಡೆ ಉಂಟಾಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ(Congress Digital Membership Registration) ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವೆ ಮೋಟಮ್ಮ(Motamma), ಅವರ ಪುತ್ರಿ ನಯನಾ, ಕಾಂಗ್ರೆಸ್(Congress) ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಸೇರಿದಂತೆ ಶಾಸಕರು, ಸ್ಥಳೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಂಡೀಷನ್ಸ್ ಫಾಲೋ ಮಾಡಿದ್ರೆ ಮಾತ್ರ ಕಾಂಗ್ರೆಸ್ ಸದಸ್ಯತ್ವ: ಏನೇನಿವೆ ನೋಡಿ
ನನಗೆ ಜವಾಬ್ದಾರಿ ಕೊಟ್ಟರೆ ಸದಸ್ಯತ್ವ ನೋಂದಣಿ ಮಾಡುತ್ತಿದ್ದೆ ಎಂದು ನಯನಾ ಮೋಟಮ್ಮ ಸಭೆಯಲ್ಲಿ ಹೇಳಿದರು. ಆಗ ನಿಮ್ಮ ತಾಯಿಯನ್ನು ಎಂಎಲ್‌ಎ(MLA) ಮಾಡಿದ್ದೇವೆ, ಎಂಎಲ್‌ಸಿ(MLC) ಮಾಡಿದ್ದೇವೆ. ಇಷ್ಟಾದರೂ ನಾನು ಹಂಗೂ ಇಲ್ಲ, ಹಿಂಗೂ ಇಲ್ಲ ಅಂತಿದ್ರೆ ಯಾರ್ ಕೇಳ್ತಾರೆ ಎಂದು ನಯನಾಗೆ ಕ್ಲಾಸ್ ತೆಗೆದುಕೊಂಡರು.
ನಿಮ್ಮ ಕಳಪೆ ಸಾಧನೆ ಕಂಡು ನನಗೆ ದುಃಖ ಆಗುತ್ತಿದೆ, ನೋವಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್‌ಗೂ ಕ್ಲಾಸ್ ತೆಗೆದುಕೊಂಡ ಡಿಕೆಶಿ, ನಿಮ್ಮ ಬಗ್ಗೆ ನಂಬಿಕೆ ಇತ್ತು. ಆದರೆ, ಕಳೆದುಕೊಂಡು ಬಿಟ್ರಿ ಎಂದು ಅಸಮಾಧಾನ ಹೊರಹಾಕಿದರು.
ಮೋಟಮ್ಮಗೆ ಮುಜುಗರ
ಸಭೆ ಬಳಿಕ ಹಿರಿಯ ನಾಯಕಿ ಮೋಟಮ್ಮ ಅವರು ಡಿಕೆಶಿ ಕಾರಿನ ಬಳಿ ಬಂದು ಸಮಜಾಯಿಷಿ ನೀಡಲು ಮುಂದಾದರು. ಈ ವೇಳೆ, ‘ನೋ.. ನೋ.. ಸಾರಿ.. ಮಾತನಾಡಬೇಡಿ’ ಎಂದ ಡಿಕೆಶಿ, ಮೊದಲು ಮೆಂಬರ್‌ಶಿಪ್ ಎಂದು ಕಾರು ಹತ್ತಿ ಹೊರಟರು. ಇದರಿಂದ ನೂರಾರು ಜನರ ಮುಂದೆ ಮೋಟಮ್ಮ ಮುಜುಗರಕ್ಕೆ ಒಳಗಾಗದರು.
ಕಾಂಗ್ರೆಸ್‌ನಿಂದ 50 ಲಕ್ಷ ಸದಸ್ಯತ್ವದ ಟಾರ್ಗೆಟ್
ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ವತಿಯಿಂದ 50 ಲಕ್ಷ ಸದಸ್ಯತ್ವ ನೋಂದಣಿಯ ಮಹತ್ವಾಕಾಂಕ್ಷೆಯೊಂದಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjwewala) ಅವರು ಭಾನುವಾರ ಚಾಲನೆ ನೀಡಿದ್ದು, ರಾಜ್ಯದ ಮೂಲೆ-ಮೂಲೆಯಲ್ಲೂ ಸದಸ್ಯತ್ವ ನೋಂದಣಿ ಯಶಸ್ವಿಗೊಳಿಸುವ ಮೂಲಕ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯ ಗತಾಯ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದ್ದರು.
ಕಾಂಗ್ರೆಸ್‌ಗೆ ಭಾರಿ ಆಘಾತ: ಬಿಜೆಪಿ ಸೇರಿದ 62 ‘ಕೈ’ ಮುಖಂಡರು
ನ.14 ರಂದು ನಗರದ ಅರಮನೆ ಮೈದಾನದಲ್ಲಿ (Palace Ground ) ನಡೆದ ಕಾರ್ಯಕ್ರಮದಲ್ಲಿ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ (KPCC) ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರು ವೇದಿಕೆಯ ಮೇಲೆ ಸದಸ್ಯತ್ವ ನೋಂದಣಿ ಅರ್ಜಿ ತುಂಬುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಈ ವೇಳೆ ಮಾತನಾಡಿದ ಸುರ್ಜೇವಾಲಾ, ದೇಶದ ಪಾಲಿಗೆ ಸಂವಿಧಾನವೇ ಧರ್ಮ. ಸಂವಿಧಾನಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಸಂವಿಧಾನ ಇಂದು ಅಪಾಯದಲ್ಲಿದ್ದು, ಅದರ ರಕ್ಷಣೆಗೆ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಸದಸ್ಯತ್ವ ನೋಂದಣಿಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, 2023ರಲ್ಲಿ ಪಕ್ಷವನ್ನು ಶತಾಯ ಗತಾಯ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ರಾಜ್ಯಾದ್ಯಂತ ಆನ್‌ಲೈನ್ (Online) ಹಾಗೂ ಆಫ್‌ಲೈನ್ (Offline) ಮೂಲಕ 50 ಲಕ್ಷ ಮಂದಿಗೆ ಕಾಂಗ್ರೆಸ್ ಸದಸ್ಯತ್ವ ಮಾಡಿಸಬೇಕು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಇನ್ನಿತರ ಮುಂಚೂಣಿ ಘಟಕಗಳಿಂದ ತಲಾ 1 ಲಕ್ಷ ಸದಸ್ಯತ್ವ ಮಾಡಿಸಬೇಕು. ಪ್ರತಿ ಮನೆ-ಮನೆಗೂ ಹೋಗಿ ಜನರ ಹೃದಯ ಗೆಲ್ಲಬೇಕು ಎಂದು ಕರೆ ನೀಡಿದರು. ಇದೇ ವೇಳೆ ನಕಲಿ ಸದಸ್ಯತ್ವ ಪತ್ತೆಯಾದರೆ ಸಂಬಂಧಪಟ್ಟಬ್ಲಾಕ್ ಅಧ್ಯಕ್ಷರನ್ನು ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.