ಪಾದಯಾತ್ರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಪಾಲ್ಗೊಳ್ಳಿ, ಮನೆ ಮನೆಗೆ ಹೋಗಿ ಆಹ್ವಾನಿಸಿ: ಮುಖಂಡರಿಗೆ : ಡಿ.ಕೆ.ಶಿವಕುಮಾರ್‌ ಸೂಚನೆ

ಮಂಡ್ಯ(ಸೆ.18): ರಾಜ್ಯದಲ್ಲಿ ಭ್ರಷ್ಟ ಹಾಗೂ ದುರಾಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಕರ್ನಾಟಕ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿಗೆ ಗುರಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದೂರಿದರು.
ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರಕ್ಕೆ ಆಗಮಿಸಲಿರುವ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜುಡೋ ಯಾತ್ರೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್‌ ಎಂದಿದ್ದರು. ಈಗ ನಾವೇನು ಆರೋಪ ಮಾಡುತ್ತಿಲ್ಲ. ಗುತ್ತಿಗೆದಾರರೇ 40 ಪರ್ಸೆಂಟ್‌ ಸರ್ಕಾರ ಎನ್ನುತ್ತಿದ್ದಾರೆ. ಯಾವ ಕಚೇರಿಗೆ ಹೋದರೂ ಲಂಚ, ಹಣ, ಹಣ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ಮತ್ತೆ ಸಿದ್ದು, ಡಿಕೆಶಿ ಒಳಬೇಗುದಿ ಬಹಿರಂಗ: ಅಕ್ಕಪಕ್ಕ ಅರ್ಧಗಂಟೆ ಕೂತಿದ್ದರೂ ಮಾತಿಲ್ಲ..!

ಭಾರತ್‌ ಜೋಡೋ ಯಾತ್ರೆ ನಿಮ್ಮ ಮನೆಗೆ ಬಂದಿರುವ ಭಾಗ್ಯ. ಜಿಲ್ಲೆಯಲ್ಲಿ 7 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆದ್ದಾಗ ಪದವೀಧರರ ಕ್ಷೇತ್ರ ಗೇಲ್ಲೋಕೆ ಆಗಿರಲಿಲ್ಲ. ಈಗ ನೀವೆಲ್ಲರೂ ಒಟ್ಟಾಗಿ ದುಡಿದಿದ್ದಕ್ಕೆ ಅದು ಸಾಧ್ಯವಾಯಿತು. ಎರಡು ಸ್ಥಾನಗಳಲ್ಲಿ ಗೆದ್ದಿರುವುದು ಮಂಡ್ಯಕ್ಕೆ ಮಾತ್ರವಲ್ಲ. ರಾಜ್ಯಕ್ಕೇ ದೊಡ್ಡ ಶಕ್ತಿ ನೀಡಿದೆ. ಅದನ್ನು ಉಳಿಸಿಕೊಳ್ಳಬೇಕಲ್ಲವೇ. ಈ ಪಾದಯಾತ್ರೆಯಿಂದ ಪಕ್ಷ ಸಂಘಟನೆಗೂ ಸಹಕಾರಿಯಾಗಲಿದೆ ಎಂದು ನುಡಿದರು.

ನಾಳೆಯಿಂದಲೇ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಸಂಘಟನೆ ಮಾಡಿ. ಜಿಲ್ಲೆಯ ಹೊಸ ಗಾಳಿ ಏಳುವ ಸೂಚನೆ ಬರುತ್ತಿದೆ. ಮಂಡ್ಯ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನರು ಬನ್ನಿ. ಕಾಸು ಕೊಟ್ಟು ಯಾರನ್ನೂ ಕರೆತರಬೇಡಿ. ವಾಹನ ಬೇಕಿದ್ದರೆ ನಾವೇ ಮಾಡಿಕೊಡುತ್ತೇವೆ. ಬದ್ಧತೆ, ನಾಯಕತ್ವ ಇರೋರನ್ನ ಕರೆತನ್ನಿ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಆನ್‌ಲೈನ್‌ ನೋಂದಣಿ ಆರಂಭವಾಗಿದೆ. ಈ ಕೂಡಲೇ ನೋಂದಣಿ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.