ಜಾರಿ ನಿರ್ದೇಶನಾಲಯವು (ಇಡಿ) ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದಾರೆ. ನನಗೆ ನನ್ನದೇ ಆದ ಜವಾಬ್ದಾರಿಗಳಿರುವುದರಿಂದ ವಿಚಾರಣೆಗೆ ಹಾಜರಾಗುವ ಬಗ್ಗೆ ವಕೀಲರು ಹಾಗೂ ಹೈಕಮಾಂಡ್‌ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಬೆಂಗಳೂರು (ಸೆ.17): ಜಾರಿ ನಿರ್ದೇಶನಾಲಯವು (ಇಡಿ) ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದಾರೆ. ನನಗೆ ನನ್ನದೇ ಆದ ಜವಾಬ್ದಾರಿಗಳಿರುವುದರಿಂದ ವಿಚಾರಣೆಗೆ ಹಾಜರಾಗುವ ಬಗ್ಗೆ ವಕೀಲರು ಹಾಗೂ ಹೈಕಮಾಂಡ್‌ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದೇ ವೇಳೆ, ನಾನು ತನಿಖೆಗೆ ಎಲ್ಲ ಸಹಕಾರ ನೀಡುತ್ತೇನೆ. ನಾನು ಕಾನೂನು ಬಾಹಿರವಾಗಿ ಯಾವುದೇ ಅಪರಾಧ ಮಾಡಿಲ್ಲ. ಹೀಗಾಗಿ ಯಾವುದಕ್ಕೂ ಹೆದರುವುದಿಲ್ಲ. ಕಾನೂನು ಅಡಿ ಹೋರಾಟ ಮಾಡುತ್ತೇನೆ. 

ಆದರೆ, ನಮ್ಮ ಕಾರ್ಯಕರ್ತರು ವಿಚಲಿತರಾಗಿದ್ದಾರೆ ಎಂದು ಹೇಳಿದರು. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ದಿನನಿತ್ಯ ನನಗೆ ಹಾಗೂ ನನ್ನ ಸ್ನೇಹಿತರನ್ನು ವಿಚಾರಣೆಗೆ ಕರೆಯುತ್ತಿದ್ದಾರೆ. ನನ್ನ ಜತೆ ವ್ಯವಹಾರ ಮಾಡಿದವರಿಗೆಲ್ಲಾ ಕಿರುಕುಳ ನೀಡುತ್ತಿದ್ದಾರೆ. ಗುರುವಾರವೂ ಕೆಲವರನ್ನು ಕರೆದು ವಿಚಾರಣೆ ಮಾಡಿದ್ದಾರೆ. ಸೋಮವಾರ ನನಗೆ ಬರುವಂತೆ ಸಮನ್ಸ್‌ ನೀಡಿದ್ದಾರೆ. ಜಾರಿ ನಿರ್ದೇಶನಾಲಯದವರು ಏನೆಂದು ಎಫ್‌ಐಆರ್‌ ದಾಖಲಿಸಿದ್ದಾರೆ ಎಂಬುದು ನನಗೂ ಗೊತ್ತಿಲ್ಲ ಎಂದು ಹೇಳಿದರು.

ಅ.2ರಂದು ಬದನವಾಳು ಗ್ರಾಮದಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಗಾಂಧಿ ಜಯಂತಿ: ಡಿಕೆಶಿ

ಹೈಕಮಾಂಡ್‌ ಜತೆ ಚರ್ಚೆ: ‘ಈಗ ನಾನು ಬರೀ ಡಿ.ಕೆ. ಶಿವಕುಮಾರ್‌ ಅಲ್ಲ. ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ. ಹೀಗಾಗಿ ಹೈಕಮಾಂಡ್‌ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕಳೆದ ಒಂದು ವಾರದಿಂದ ನಾನು ಭಾರತ ಐಕ್ಯತಾ ಯಾತ್ರೆಯ ಸಿದ್ಧತೆಗಾಗಿ ಜಿಲ್ಲೆಗಳ ಪ್ರವಾಸದಲ್ಲಿದ್ದೇನೆ. ಪಕ್ಷದ ಸಭೆ ಕಾರಣ ಇಂದು ಬೆಂಗಳೂರಿಗೆ ಬಂದಿದ್ದೇನೆ. ಮತ್ತೆ ಶನಿವಾರ ಮಂಡ್ಯ, ಮೈಸೂರು ಪ್ರವಾಸ ಮಾಡಬೇಕಿದೆ. ಇಂತಹ ಸಮಯದಲ್ಲಿ ನನಗೆ ವಿಚಾರಣೆಗೆ ಕರೆದು ಕಿರುಕುಳ ನೀಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಪ್ರಕರಣ ಮಾತ್ರ ಸಿಬಿಐಗೆ: ‘ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಸಿಬಿಐ ಅವರು ಎಫ್‌ಐಆರ್‌ ಹಾಕಿದ್ದರು. ಇದೇ ಪ್ರಕರಣವನ್ನು ಇಡಿ ಕೂಡ ವಿಚಾರಣೆ ಮಾಡುತ್ತಿದೆ. ಒಂದು ಪ್ರಕರಣವನ್ನು ಇಬ್ಬಿಬ್ಬರು ವಿಚಾರಣೆ ಮಾಡುತ್ತಿದ್ದಾರೆ. ಹಿಂದಿನ ಯಡಿಯೂರಪ್ಪ ಸರ್ಕಾರ ಕೇವಲ ನನ್ನ ವಿರುದ್ಧದ ಪ್ರಕರಣವನ್ನು ಮಾತ್ರ ಸಿಬಿಐಗೆ ವಹಿಸಿದೆ. ಅಡ್ವೊಕೇಟ್‌ ಜನರಲ್ ಅವರು ಈ ಪ್ರಕರಣ ಸಿಬಿಐಗೆ ವಹಿಸುವುದು ಸೂಕ್ತವಲ್ಲ ಎಂದು ಹೇಳಿದ್ದರೂ ಸಿಬಿಐಗೆ ನೀಡಿದ್ದಾರೆ. ಈ ಪ್ರಕರಣದ ವಿಚಾರವಾಗಿ ನಾನು ಹೈಕೋರ್ಚ್‌ ಮೆಟ್ಟಿಲೇರಿದ್ದೇನೆ’ ಎಂದು ಹೇಳಿದರು.

ಇಡಿ ನೋಟಿಸ್‌ ಅಲ್ಲ, ಬಿಜೆಪಿ ಬೆದರಿಕೆ ಪತ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ನೀಡಿರುವುದು ಇ.ಡಿ.ನೋಟಿಸ್‌ ಅಲ್ಲ, ಬಿಜೆಪಿ ಬೆದರಿಕೆ ಪತ್ರ. ಬಿಜೆಪಿ ಬೆದರಿಕೆ ಪತ್ರಕ್ಕೆ ಕಾಂಗ್ರೆಸ್‌ ಆಗಲಿ, ಡಿ.ಕೆ.ಶಿವಕುಮಾರ್‌ ಆಗಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಸ್ಪಷ್ಟಪಡಿಸಿದರು. ನೆರೆ ಸಂತ್ರಸ್ತರಿಗೆ ನಗರದಲ್ಲಿ ದಿನಸಿ ಕಿಟ್‌ ವಿತರಿಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಮೇಲೆ ಆಗಾಗ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಶಿವಕುಮಾರ್‌ ಅವರನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಏನು ಮಾಡುತ್ತಾರೋ ಗೊತ್ತಿಲ್ಲ. ಅದರೆ, ಅವರು ಏನೇ ಮಾಡಿದರು ಅದನ್ನು ಎದುರಿಸಲು ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷ ತಯಾರಿದೆ ಎಂದರು.

Chamarajanagar: ಭಾರತ್‌ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್‌

ಲಂಚ ಕೊಡಬೇಕು: ಕಳೆದ 75 ವರ್ಷಗಳಿಂದ ರಾಮನಗರ ಅಭಿವೃದ್ಧಿಪಡಿಸಿಲ್ಲ ಎಂಬ ಸಚಿವ ಅಶ್ವತ್ಥ ನಾರಾಯಣ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ 75 ವರ್ಷಗಳಿಂದ ಬಿಜೆಪಿಯವರ ಕೊಳಕು ಹಾಗೂ ಭ್ರಷ್ಟರಾಜಕೀಯ ಇರಲಿಲ್ಲ. ನಾಡಕಚೇರಿ ಹಾಗೂ ತಹಶಿಲ್ದಾರ್‌ ಕಚೇರಿ ಹಾಗೂ ಪೊಲೀಸ್‌ ಠಾಣೆಯಲ್ಲಿ ಕೆಲಸ ಆಗಬೇಕಾದರೆ ಹಣ ಕೊಡಬೇಕು. ಯಾರಾದರೂ ಉದ್ಯೋಗ ಪಡೆಯಬೇಕಾದರೂ ಹಣ ಕೊಡಬೇಕು ಅಂತ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ಬಿಜೆಪಿ ಪಕ್ಷದಿಂದ ಸಾಕಷ್ಟುಭ್ರಷ್ಟಾಚಾರ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸಬೇಕು ಎಂಬ ಉದ್ದೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯಅವಧಿಯಿಂದ ತನಿಖೆ ಮಾಡ್ತೇವೆ ಎಂದು ಹೇಳುತ್ತಿದ್ದಾರೆ. ಬರಿ ಭಾಷಣದಲ್ಲಿ ತಾಕತ್ತು ಪ್ರದರ್ಶನ ಆಗೋದು ಬೇಡ. ಅವರ ತಾಕತ್ತನ್ನು ಅವರು ಪ್ರದರ್ಶನ ಮಾಡಲಿ ಎಂದು ಸವಾಲು ಹಾಕಿದರು.