ಜ್ಯೋತಿಷಿಯೊಬ್ಬರ ಸಲಹೆ ಮೆರೆಗೆ `ಪವರ್ ಫುಲ್' ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಇಷ್ಟು ದಿನ ಐಟಿ, ಸಿಬಿಐ, ಇಡಿ ಸಂಸ್ಥೆಗಳ ತನಿಖೆಯಿಂದ ಬೇಸತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ದೇವರ ಮೊರೆ ಹೋಗಿದ್ದಾರೆ.
ನವದೆಹಲಿ, (ಡಿ.16): ದೇವರು, ದೇವಸ್ಥಾನ, ಹರಿಕೆ, ವಿಶೇಷ ಹೋಮ, ಹವನ, ಪೂಜೆ ರಾಜಕಾರಣಿಗಳಿಗೆ ಹೊಸದಲ್ಲ. ರಾಜಕಾರಣಿಗಳು ಸಮಯಕ್ಕೆ ತಕ್ಕಂತೆ ದೇವರ ಮೊರೆಹೋಗ್ತಾರೆ ಬಿಡಿ ಅನ್ನೋ ಮಂದಿ ಕೂಡ ಇದ್ದಾರೆ. ಆದ್ರೆ ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವಲ್ಪ ವಿಭಿನ್ನವಾಗಿ ನಿಲ್ತಾರೆ.
ಒಮ್ಮೆ ಆ ದೇವಸ್ಥಾನ, ಗುರುಮಠಕ್ಕೆ ಹೋಗಿ ಬಂದು ಇಷ್ಟವಾಗಿ ಬಿಟ್ರೆ ಸಾಕು ಅದು ಎಷ್ಟೇ ಸಾವಿರ ಕಿಲೋಮಿಟರ್‌ಗಳು ಇರಲಿ, ವರ್ಷ, ಎರಡು ವರ್ಷಗಳಿಗೆ ಒಮ್ಮೆ ಡಿಕೆ ಶಿವಕುಮಾರ್ ಅವರು ಹೋಗಿ ಬಂದು ಹರಿಕೆ ತೀರಿಸ್ತಾರೆ.
ದೆಹಲಿಯಲ್ಲಿ ರಾಜಕಾರಣದ ಚಟುವಟಿಕೆಗಳು ಇಲ್ಲ. ರಾಹುಲ್ ಗಾಂಧಿಯವರು ಭೇಟಿಯೂ ಇಲ್ಲ. ಹೈಕಮಾಂಡ್ ನಾಯಕರ ಜೊತೆ ಮಾತುಕತೆಯೂ ಇಲ್ಲ ಇಂಥ ಹೊತ್ತಲ್ಲಿ ಡಿ.ಕೆ.ಶಿವಕುಮಾರ್ ಅವರು ಡೆಲ್ಲಿಗೆ ದಿಢೀರ್ ಭೇಟಿ ಯಾಕಪ್ಪ ಅಂದುಕೊಂಡವರಿಗೆ ಸಿಕ್ಕಿದ್ದು `ಇದು ಅವರ ಪಸರ್ನಲ್ ಟ್ರಿಪ್' ಅನ್ನೋ ಉತ್ತರ. ಪುತ್ರಿಯ ವಿವಾಹ ಕಾರ್ಯ ನಿಮಿತ್ತ ಬಂದಿರಬಹುದು ಅನ್ನೋ ಮಾತುಗಳು ಕೂಡ ಕೇಳಿ ಬಂದವು.
ದೀಪಾವಳಿ ಹಬ್ಬದಂದು ವಿಶೇಷ ಸ್ಥಳಕ್ಕೆ ಡಿಕೆ ಶಿವಕುಮಾರ್ ಭೇಟಿ
ದೆಹಲಿಗೆ ಹಿಂತಿರುಗಿದ ಬಳಿಕ ಈ ಭಾರಿಯ ಭೇಟಿಯ ವಿಶೇಷ ಏನು ಸಾರ್ ? ಅನ್ನೋ ಮಾಧ್ಯಮಗಳ ಪ್ರಶ್ನೆಗೆ ನೇರವಾಗಿ ಉತ್ತರ ಕೊಟ್ಟೇ ಬಿಟ್ರು ಡಿ.ಕೆ.ಶಿವಕುಮಾರ್ ಅವರು, ಅಸ್ಸಾಂನ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ವಿ ಈಗ ಬಂದ್ವಿ ಅಂದ್ರು. ಅಸ್ಸಾಂನ ಆ ದೇವಾಲಯ ಯಾವುದು ಅಂದಾಗ ಗೊತ್ತಾಗಿದ್ದು ಗುವಾಹಟಿಯ ಕಾಮಾಕ್ಯಾ ದೇವಸ್ಥಾನ ಅಂತ.
ಪುರಾತನ ಶಕ್ತಿಪೀಠ
ದೇಶದ 51 ಶಕ್ತಿಪೀಠಗಳಲ್ಲಿ ಗುವಾಹಟಿ ಕಾಮಾಕ್ಯಾ ಶಕ್ತಿಪೀಠವೂ ಒಂದು. ಇದು ಬಹಳ ಹಳೇ ಶಕ್ತಿಪೀಠವಾಗಿದ್ದು ಕಾಮಾಕ್ಷಿ
ದೇವಿಯು ಇಲ್ಲಿ ನೆಲಸಿದ್ದಾಳೆ. `ಪವರ್ ಫುಲ್' ಶಕ್ತಿ ದೇವತೆ ಎನ್ನಿಸಿಕೊಂಡಿರುವ ಕಾಮಾಕ್ಷಿ ಮಾತೆಯನ್ನು ಪೂಜಿಸುವ ಭಕ್ತಾಧಿಗಳ ಸಂಖ್ಯೆ ಅಗಣಿತ ಎನ್ನಬಹುದು. ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ.
ಹರಿಕೆ ತೀರಿಸಲು ಕುಟುಂಬ ಸಮೇತ ಭೇಟಿ
ಹರಿಕೆ, ಭಕ್ತಿಯ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರದ್ದು ಯಾವಾಗಲೂ ಮೇಲಗೈ. ಅದರಲ್ಲೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಳಿಕವಂತೂ ಅದೆಷ್ಟು ದೇವಾಲಯ, ಮಠಗಳಿಗೆ ಭೇಟಿ ಕೊಟ್ಟಿದ್ದಾರೋ ಲೆಕ್ಕ ಇಲ್ಲ. ಅದರಂತೆ ಯಾವುದೋ ಹರಿಕೆ ಇತ್ತಂತೆ. ಹಾಗಾಗಿ ಗುವಾಹಟಿಯ ಕಾಮಾಕ್ಯಕ್ಕೆ ಭೇಟಿ ನೀಡಿ, ಕಾಮಾಕ್ಷಿಯ ದೇವಿಯ ಸನ್ನದಿಯಲ್ಲಿ ಕುಟುಂಬ ಸಮೇತ ಕೂತು, ಭಕ್ತಿಯಿಂದ ಹರಿಕೆ ತೀರಿಸಿ ಬಂದಿದ್ದಾರೆ. ಸಾಮಾನ್ಯಕ್ಕೆ ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ಡಿ.ಕೆ. ಶಿವಕುಮಾರ್ ಅವರು ಇಲ್ಲಿಗೆ ಭೇಟಿ ನೀಡಿ, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ ಅಂತಾರೆ ಅವರ ಕುಟುಂಬ ಬಲ್ಲವರು.