Mandya: ಡಿ.ಕೆ.ಶಿವಕುಮಾರ್-ನಿಖಿಲ್ ಕುಮಾರಸ್ವಾಮಿ ಪರಸ್ಪರ ಮುಖಾಮುಖಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರಸ್ಪರ ಮುಖಾಮುಖಿಯಾದ ಅಪರೂಪದ ಘಟನೆ ಮಂಡ್ಯದಲ್ಲಿ ನಡೆಯಿತು.
ಮಂಡ್ಯ (ಸೆ.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರಸ್ಪರ ಮುಖಾಮುಖಿಯಾದ ಅಪರೂಪದ ಘಟನೆ ಮಂಡ್ಯದಲ್ಲಿ ನಡೆಯಿತು. ನಿನ್ನೆಯಷ್ಟೇ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಪತ್ನಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಬಂದೀಗೌಡ ಬಡಾವಣೆಯಲ್ಲಿರುವ ನಿವಾಸಕ್ಕೆ ಬಂದಿದ್ದರು. ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ಅವರೂ ನಿವಾಸದ ಬಳಿ ಆಗಮಿಸಿದರು. ಈ ವೇಳೆಗೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರೊಂದಿಗೆ ವಾಪಸಾಗುತ್ತಿದ್ದರು.
ಈ ವೇಳೆ ಉಭಯ ನಾಯಕರು ಪರಸ್ಪರ ಕೈ ಕುಲುಕಿ ಕೆಲಕಾಲ ಉಭಯ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ನಿಖಿಲ್ ಎದೆ ಮತ್ತು ಭುಜಕ್ಕೆ ಡಿ.ಕೆ.ಶಿವಕುಮಾರು ಪ್ರೀತಿಯ ಗುದ್ದು ನೀಡಿ ಮಾತನಾಡಿದರು. ಬಳಿಕ ಚಲುವರಾಯಸ್ವಾಮಿ ಸೇರಿದಂತೆ ಕೆಲ ಕಾಂಗ್ರೆಸ್ಸಿಗರ ಕೈ ಕುಲುಕಿ ನಿಖಿಲ್ ಮಾತನಾಡಿಸಿದರು. 2019ರ ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ನಿಖಿಲ್‌ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಮುಖಾಮುಖಿಯಾಗಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋಲನುಭವಿಸಿದ್ದರು. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಂತೆ ಪ್ರಚಾರದಲ್ಲಿ ತೊಡಗಿದರೂ ನಿಖಿಲ್ ಅವರನ್ನು ಗೆಲ್ಲಿಸಲಾಗಿರಲಿಲ್ಲ.
ಮತ್ತೆ ಸಿದ್ದು, ಡಿಕೆಶಿ ಒಳಬೇಗುದಿ ಬಹಿರಂಗ: ಅಕ್ಕಪಕ್ಕ ಅರ್ಧಗಂಟೆ ಕೂತಿದ್ದರೂ ಮಾತಿಲ್ಲ..!
ಮೇಕೆದಾಟು ಬಳಿಕ ಕೃಷ್ಣೆಗಾಗಿ ಕೈ ಪಾದಯಾತ್ರೆ: ಮೇಕೆದಾಟು ಪಾದಯಾತ್ರೆ ಬಳಿಕ ಮತ್ತೊಂದು ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಗುಟ್ಟನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಬಿಟ್ಟುಕೊಟ್ಟರು. ನಗರದ ಸುಮರವಿ ಕಲ್ಯಾಣಮಂಟಪದಲ್ಲಿ ನಡೆದ ಭಾರತ್ ಜುಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಹುಲ್ ಅಣತಿಯಂತೆ ಮೇಕೆದಾಟು ಪಾದಯಾತ್ರೆ ನಡೆಸಲಾಯಿತು. ಕೃಷ್ಣಾ ನೀರಾವರಿ ಯೋಜನೆ ಬಗ್ಗೆ ಪಾದಯಾತ್ರೆ ನಡೆಸುವಂತೆ ಆ ಭಾಗದ ನಾಯಕರಿಗೆ ಹೇಳಿದ್ದೆ. ಇನ್ನೂ ಅದರ ತಯಾರಿ ಆರಂಭವಾಗಿಲ್ಲ.
ಅವರೇನಾದರೂ ಮಾಡದಿದ್ದ ಪಕ್ಷದಲ್ಲಿ ಭಾರತ್ ಜೋಡೋ ಯಾತ್ರೆ ಮುಗಿದ ಬಳಿಕ ನಾನೇ ಅದರ ನೇತೃತ್ವ ತೆಗೆದುಕೊಳ್ಳುತ್ತೇನೆ ಎಂದರು. ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್, ಅದ್ಯಾರೋ ಸ್ಮೃತಿ ಇರಾನಿಯಂತೆ. ಆಯಮ್ಮ ಮಾತನಾಡುವಾಗ ಜನವೇ ಇರಲಿಲ್ಲ. ಎಲ್ಲಾ ಬರೀ ಖಾಲಿ ಖಾಲಿ ಕುರ್ಚಿಗಳೇ ಇದ್ದವಂತೆ. ಮುಂದೆ ಮಾತ್ರ ಒಂದು ಐನೂರು ಜನ ಇದ್ದುದನ್ನು ಎಲ್ಲಾ ಟೀವಿಗಳಲ್ಲೂ ತೋರಿಸುತ್ತಿದ್ದರು ಎಂದು ಕುಹಕವಾಡಿದರು.
ಮೋದಿ ಪ್ರಧಾನಿ ಆದ ಮೇಲೆ ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು: ಸಿದ್ದರಾಮಯ್ಯ ಕಿಡಿ
ಕೃಷ್ಣಾ ಯಾತ್ರೆ ಚಿತ್ರಣ ನಂತರ ಹೇಳ್ತೀನಿ: ಕೃಷ್ಣಾ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ, ಈಗ ನಮ್ಮ ಮುಂದೆ ಇರುವುದು ಭಾರತ್ ಜೋಡೋ ಯಾತ್ರೆ. ಅದು ಮುಗಿದ ನಂತರ ಕೃಷ್ಣಾ ಪಾದಯಾತ್ರೆಯ ಚಿತ್ರಣವನ್ನು ಹೇಳುತ್ತೇನೆ ಎಂದಷ್ಟೇ ಹೇಳಿ ಜಾರಿಕೊಂಡರು. ಭಾರತ್ ಜೋಡೋ ಯಾತ್ರೆಗೆ ಯಾವ ಕಾರ್ಯಕರ್ತನೂ ಹೂವಿನ ಹಾರ ತರಬೇಡಿ. ಯಾರಿಗೂ ಹೂವಿನ ಹಾರ ಹಾಕಬೇಡಿ. ಹಾವಿನ ಹಾರ ಹಾಕಿಸಿಕೊಳ್ಳಲು ಪೊಲೀಸ್ ಹಾಗೂ ಸೆಕ್ಯೂರಿಟಿ ಬಿಡುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಜನ ಸಂಘಟನೆಯಲ್ಲಿ ಇರಲಿ ಎಂದರು.