ಬೆಂಗಳೂರು, (ಏ.27):  ಡಿ.ಕೆ ಶಿವಕುಮಾರ್ ಮಲಗಿರಬೇಕು ಅಂದಿದ್ದಾರೆ. ನಾನು ಎಲ್ಲಿ ಮಲಗಿದ್ದೆ ಮಲಗಿದ್ದೆ ಅನ್ನೋದನ್ನ ಸಾಬೀತುಪಡಿಸಲಿ ಎಂದು ಈಶ್ವರಪ್ಪಗೆ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.

ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೊದಲು ಅವರ ಇಲಾಖೆಯಲ್ಲಿ ಹೇಗೆ ಕೆಲಸ ಮಾಡಿಸಬೇಕು ಅನ್ನೋದನ್ನ ಈಶ್ವರಪ್ಪ ತಿಳಿದುಕೊಳ್ಳಲಿ‌. ನರೇಗಾ ಯೋಜನೆ ಬಗ್ಗೆ ಅರ್ಥ ಮಾಡಿಕೊಂಡು ದುಡಿಯುವ ಕೈಗಳಿಗೆ ಕೆಲಸ ಕೊಡಲಿ. ನನ್ನ ಕ್ಷೇತ್ರಕ್ಕೆ ನರೇಗಾ ಪ್ರಶಸ್ತಿ ಸುಮ್ಮನೆ ಬರಲಿಲ್ಲ. ಈಶ್ವರಪ್ಪ ದಾಖಲೆ ಸಮೇತ ಬರಲಿ, ನಾನೂ ಬರುತ್ತೇನೆ. ಬಹಿರಂಗ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು.

ಗ್ರಾಮೀಣಾಭಿವೃದ್ದಿ ಸಚಿವ ಎಲ್ಲಿ ಮಲಗಿದ್ದಾರೆ ಎಂದ ಡಿಕೆಶಿ, ಎದ್ದು ಬಂದ ಈಶ್ವರಪ್ಪ

ನರೇಗಾ ವಿಚಾರದ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ನನ್ನ ಲೆವೆಲ್ ಕಡಿಮೆ ಆದ್ರು ಪರವಾಗಿಲ್ಲ. ನಾನು ಚರ್ಚೆಗೆ ಬರ್ತೀನಿ ಇದನ್ನ ಈಶ್ವರಪ್ಪ ಒಪ್ಪಿಕೊಳ್ಳಲಿ. ದಿನಾಂಕ-ಸಮಯ ಅವರೇ ನಿಗದಿ ಮಾಡಲಿ ಎಂದು ಡಿಕೆ ಚಾಲೆಂಜ್ ಮಾಡಿದರು.

ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್​, ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮೀಣ ಜನರ ಸಮಸ್ಯೆಗಳ ಕಡೆಗೆ ಸಚಿವ ಈಶ್ವರಪ್ಪ ಗಮನ ಹರಿಸುತ್ತಿಲ್ಲ, ಅವರು ಅದೆಲ್ಲಿ ಮಲಗಿದ್ದಾರೋ? ಎಂದು ವಾಗ್ದಾಳಿ ನಡೆಸಿದ್ದರು. 

'ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಎಲ್ಲಿ ಮಲಗಿದ್ದಾರೆ'

ಇದಕ್ಕೆ ಉತ್ತರಿಸಿದ್ದ ಈಶ್ವರಪ್ಪ, ನಾನೇನು ಸುಮ್ಮನೆ ಕೂತಿಲ್ಲ, ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಮ್ಮ ಕೆಲಸ ಮತ್ತು ಕರ್ತವ್ಯವನ್ನು ನಾವು ಮಾಡ್ತಿದ್ದೇವೆ. ಬೇಕಿದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಸ್ವತಃ ಡಿಕೆ ಶಿವಕುಮಾರ್​​ ಅವರೇ ಬಂದು ನೋಡಲಿ. ಅವರು ಇಷ್ಟು ದಿವಸ ಎಲ್ಲಿ‌ ಮಲಗಿದ್ದರು ಅಂತಾ ಗೊತ್ತಿದೆ ಎಂದು ಹೇಳಿದ್ದರು.