2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡಿದರೂ ವಿವಿಧ ಕಾರಣಗಳಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿತು. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನವ ಚೈತನ್ಯ ತುಂಬಲು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಗುರುತಿಸಿದ್ದು ಪರಮ ಪಕ್ಷ ನಿಷ್ಠ ಡಿ.ಕೆ.ಶಿವಕುಮಾರ್‌ ಅವರನ್ನು.

ಬೆಂಗಳೂರು (ಮೇ.19): ಪರಮ ಪಕ್ಷ ನಿಷ್ಠ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷ ಗಾದಿ ವಹಿಸಿಕೊಂಡ ಬಳಿಕ ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷಕ್ಕೆ ನವಚೈತನ್ಯ ತುಂಬಿದವರು. ಆಡಿದ ಮಾತಿನಂತೆ ಸಿದ್ದರಾಮಯ್ಯ ಅವರೂ ಸೇರಿದಂತೆ ಪಕ್ಷದ ಎಲ್ಲ ಪ್ರಮುಖ ನಾಯಕರನ್ನೂ ಒಟ್ಟಾಗಿ ತೆಗೆದುಕೊಂಡು ಪಕ್ಷ ಸಂಘಟಿಸುವ ಕೆಲಸ ಮಾಡಿದರು. ಇದೆಲ್ಲದರ ಪರಿಣಾಮ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಕೊಟ್ಟವಚನದಂತೆ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದರು.

2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡಿದರೂ ವಿವಿಧ ಕಾರಣಗಳಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿತು. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನವ ಚೈತನ್ಯ ತುಂಬಲು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಗುರುತಿಸಿದ್ದು ಪರಮ ಪಕ್ಷ ನಿಷ್ಠ ಡಿ.ಕೆ.ಶಿವಕುಮಾರ್‌ ಅವರನ್ನು. ಐಟಿ, ಇಡಿ ಪ್ರಕರಣಗಳಲ್ಲಿ ಜೈಲು ಸೇರಿದ್ದ ಡಿ.ಕೆ.ಶಿವಕುಮಾರ್‌ ಬಿಡುಗಡೆಯಾಗಿ ಬಂದ ಬೆನ್ನಲ್ಲೇ ಮಾಚ್‌ರ್‍ 11, 2020ರಂದು ಕೆಪಿಸಿಸಿ ಅಧ್ಯಕ್ಷ ಗಾದಿಯ ಜವಾಬ್ದಾರಿ ಹೊತ್ತರು.

ಬಿಜೆಪಿ ಸೋಲಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಕಾರಣ: ಕುಮಾರ್‌ ಬಂಗಾರಪ್ಪ

ಅಧಿಕಾರ ವಹಿಸಿಕೊಂಡಾಗಿನಿಂದ ಬೆಲೆ ಏರಿಕೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ, ಆಡಳಿತ ವೈಫಲ್ಯಗಳ ವಿರುದ್ಧ ಪಕ್ಷದ ನಾಯಕರೊಂದಿಗೆ ಸೇರಿ 100 ನಾಟೌಟ್‌, ಸೈಕಲ್‌ ಜಾಥಾ, ಎತ್ತಿನ ಗಾಡಿ ಯಾತ್ರೆ, ಹೋರಾಟ ನಡೆಸುತ್ತಾ ಸಾಗಿದ ಅವರು, ಗುತ್ತಿಗೆದಾರರು ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್‌ ಕಮಿಷನ್‌ ಆರೋಪವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ತಾವು ಅಧ್ಯಕ್ಷರಾದ ಮೇಲೆ ಪಕ್ಷದ ಸೋಷಿಯಲ್‌ ಮೀಡಿಯಾ ವಿಭಾಗವನ್ನು ಬಲಗೊಳಿಸಿದ ಅವರು ‘40% ಕಮಿಷನ್‌, ಪೇ ಸಿಎಂ’ ಹೀಗೆ ವಿವಿಧ ಅಭಿಯಾನಗಳನ್ನು ರೂಪಿಸಿ ಸರ್ಕಾರದ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾದರು.

ಸರಣಿ ಯಾತ್ರೆಗಳ ಸರದಾರ: ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷನಾಗಿ ರೂಪಿಸಿದ ಕಾರ್ಯತಂತ್ರಗಳು, ನಡೆಸಿದ ಯಾತ್ರೆಗಳು ಲೆಕ್ಕವಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನರ ಕುಡಿಯುವ ನೀರಿಗಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ‘ಮೇಕೆದಾಟು ಪಾದಯಾತ್ರೆ’ ರೂಪಿಸಿ ಯಶಸ್ವಿಯಾದರು. ಕೋವಿಡ್‌ ಸಮಯದಲ್ಲಿ ಸರ್ಕಾರದ ನಿರ್ಬಂಧಗಳ ನಡುವೆಯೂ 160 ಕಿ.ಮೀ. ಯಾತ್ರೆಯನ್ನು ಯಶಸ್ವಿಗೊಳಿಸುವಲ್ಲಿ ಸಫಲರಾದರು. 

ನಂತರ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ ನಡೆದ ಭಾರತ್‌ ಜೋಡೋ ಯಾತ್ರೆ ಯಶಸ್ಸಿಗೆ ಶ್ರಮಿಸಿದರು. ರಾಜ್ಯದಲ್ಲಿ 21 ದಿನಗಳ ಕಾಲ 550 ಕಿ.ಮೀ. ನಡೆದ ಯಾತ್ರೆಯುದ್ದಕ್ಕೂ ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು. ‘ನಾ ನಾಯಕಿ’ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಿ ಮಹಿಳೆಯರನ್ನು ಕಾಂಗ್ರೆಸ್‌ ಪಕ್ಷದ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಎಲ್ಲಾ ಸಮುದಾಯ, ಧರ್ಮಗಳ ಧರ್ಮಗುರುಗಳು, ಮಠಾಧೀಶರ ವಿಶ್ವಾಸ ಪಡೆದಿದ್ದು, ಅವರ ಬೆಂಬಲ ಪಡೆದು ಪಕ್ಷವನ್ನು ಸಂಘಟಿಸಿ ಶಕ್ತಿ ತುಂಬಿದರು.

ಜೋಡೆತ್ತುಗಳ ಪ್ರಜಾಧ್ವನಿ ಯಾತ್ರೆ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಜತೆಗೂಡಿ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ನಡೆಸಿದರು. ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಡಿಕೆಶಿ ಪ್ರತ್ಯೇಕವಾಗಿ ಪ್ರಜಾಧ್ವನಿ ಯಾತ್ರೆ ನಡೆಸಿ ಹೆಚ್ಚಿನ ಸ್ಥಾನಗಳನ್ನು ಆಯಾ ಭಾಗದಲ್ಲಿ ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾದರು.

ಈ ಯಾತ್ರೆ ಮೂಲಕ ಎಲ್ಲ ವರ್ಗಗಳ ಜನರ ಸಂಕಷ್ಟಆಲಿಸಿದರು. ಅವುಗಳಿಗೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪರಿಹಾರ ನೀಡುವ ಯೋಜನೆಗಳನ್ನು ರೂಪಿಸಲು ನೆರವಾದರು. ಎಲ್ಲ ವರ್ಗದ ಜನರಿಗೂ 200 ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ರು. ಬೆಲೆ ಏರಿಕೆ ಪರಿಹಾರಧನ, ಪ್ರತಿ ಬಡಕುಟುಂಬಕ್ಕೂ ತಲೆಗೆ 10 ಕೆ.ಜಿ. ಅಕ್ಕಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಮೀನುಗಾರರು, ನೇಕಾರರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಹುದಾದ 500ಕ್ಕೂ ಹೆಚ್ಚು ಅಂಶಗಳುಳ್ಳ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿ ಅದನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಕೋವಿಡ್‌ ಸಮಯದಲ್ಲಿ ಮಾದರಿ ಕೆಲಸ: ಡಿಕೆಶಿ ಅಧ್ಯಕ್ಷರಾದ ಆರಂಭದಲ್ಲೇ ಇಡೀ ವಿಶ್ವವನ್ನೇ ಕಾಡಿದ ಕೋವಿಡ್‌ ಮಹಾಮಾರಿ ರಾಜ್ಯವನ್ನೂ ಆವರಿಸಿತು. ಈ ಸಂದರ್ಭದಲ್ಲಿ ಕೂಡ ಮನೆಯಲ್ಲಿ ಕೂರದ ಶಿವಕುಮಾರ್‌ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ತೇಜನ ನೀಡಿ ಸಂಕಷ್ಟದಲ್ಲಿದ್ದ ಜನರ ಸಹಾಯಕ್ಕೆ ನಿಂತರು. ನಗರ ಮಾತ್ರವಲ್ಲದೆ ಹಳ್ಳಿಗಳನ್ನೂ ಸುತ್ತಿ ಕೋವಿಡ್‌ನಿಂದ ಬೆಳೆಗಳಿಗೆ ಬೆಲೆ ಸಿಗದೆ ಕಂಗಾಲಾಗಿದ್ದ ರೈತರಿಗೆ ತಮ್ಮ ಪಕ್ಷದಿಂದ ನೆರವಿನ ಹಸ್ತ ಚಾಚಿದರು. ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ, ಮಾರುಕಟ್ಟೆಇಲ್ಲದೆ ಕಂಗಾಲಾಗಿದ್ದ ರೈತರು, ಕಾರ್ಮಿಕರು, ಬಡವರು, ಅಸಂಘಟಿತ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿದರು. ಸರ್ಕಾರದಿಂದ ಅವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿದರು. ವಿವಿಧೆಡೆ ರೈತರ ಜಮೀನಿಗೆ ತೆರಳಿ ಕೋಟ್ಯಂತರ ಬೆಲೆಯ ಹಣ್ಣು, ತರಕಾರಿ ಖರೀದಿಸಿ ಜನರಿಗೆ ಉಚಿತವಾಗಿ ಹಂಚುವ ಕೆಲಸ ಮಾಡಿದರು.

ಗ್ಯಾಸ್‌ ದರ ಹೆಚ್ಚಳದಿಂದ ಹಲವು ನಾಯಕರ ಸೋಲು: ಶಾಸಕ ಶಿವರಾಮ ಹೆಬ್ಬಾರ್

ವಿರೋಧ ಪಕ್ಷವಾಗಿ ಜನರ ಸೇವೆ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟು, ಸರ್ಕಾರಕ್ಕೂ ಮಾದರಿಯಾದರು. ಸರ್ಕಾರವನ್ನೂ ಎಚ್ಚರಿಸಿ ರೈತರ, ಕಾರ್ಮಿಕರ ನೆರವಿಗೆ ಬರುವಂತೆ ಮಾಡಿದರು. ಕೋವಿಡ್‌ ಸಮಯದಲ್ಲಿ ತಮ್ಮ ಊರುಗಳಿಗೆ ಮರಳಲು ಕಾರ್ಮಿಕರು ಹಣವಿಲ್ಲದೆ ಪರದಾಡುವಾಗ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ 1 ಕೋಟಿ ಚೆಕ್‌ ನೀಡಿ ಅವರಿಗೆ ಟಿಕೆಟ್‌ ಕೊಡಿಸಲು ಮುಂದಾಗಿದ್ದರಿಂದ ಎಚ್ಚೆತ್ತ ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತು. ಜನರಿಗೆ ಕೋವಿಡ್‌ ಸಮಯದಲ್ಲಿ ಕಾಂಗ್ರೆಸ್‌ನಿಂದಲೂ ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಆರೋಗ್ಯ ಸೇವೆ, ಆ್ಯಂಬುಲೆನ್ಸ್‌ ಸೇವೆ ಒದಗಿಸಿ ಜನ ಸಾಮಾನ್ಯರ ಕಷ್ಟಕ್ಕೆ ಸಹಾಯ ಮಾಡಿದರು.