ಉತ್ತರಕನ್ನಡ: ಹೊನ್ನಾವರದಲ್ಲಿ ನಿವೇದಿತ್ ಪರವಾಗಿ ಡಿಕೆಶಿ ಭರ್ಜರಿ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ ಭೇಟಿಯ ಬಳಿಕ ಜಿಲ್ಲೆಯಲ್ಲಿ ಮೋದಿ ಮೇನಿಯಾ ಪ್ರಾರಂಭಗೊಂಡಿದ್ದು, ಇದನ್ನು ಬದಲಾಯಿಸುವ ಉದ್ದೇಶದಿಂದ ಇಂದು ಕುಮಟಾಕ್ಕೆ ಭೇಟಿ ನೀಡಿದ ಡಿಕೆಶಿ ಅಭ್ಯರ್ಥಿ ನಿವೇದಿತ್ ಆಳ್ವಾ ಪರವಾಗಿ ಮತಯಾಚನೆ ನಡೆಸಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಮೇ.05): ಉತ್ತರಕನ್ನಡ ಜಿಲ್ಲೆಯ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ಭೇಟಿ ಬೆನ್ನಲ್ಲೇ ಇದೀಗ ಹೊನ್ನಾವರಕ್ಕೆ ಭೇಟಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕುಮಟಾ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಪ್ರಚಾರ ನಡೆಸಿದ್ದಲ್ಲದೇ, ತಮ್ಮದೇ ಪಕ್ಷದ ಮಾಜಿ ಶಾಸಕಿ ವಿರುದ್ಧ ಕಿಡಿ ಕಾರಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...
ಹೌದು, ಉತ್ತರಕನ್ನಡ ಜಿಲ್ಲೆಯ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿದ್ದಾರೆ. ಆದರೆ, ಡಿಕೆಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆದ ಸ್ಥಳದಲ್ಲೇ ಬೆಂಕಿಯ ಅವಘಡ ಕೂಡಾ ಕಾಣಿಸಿದ್ದು, ಇದರಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೊಂಚ ಆತಂಕಿತರಾಗಿದ್ದರು. ಹೆಲಿಕಾಪ್ಟರ್ ಲ್ಯಾಂಡ್ ಮಾಡುವ ವೇಳೆ ಸ್ಮೋಕ್ ಕ್ಯಾಂಡಲ್ ಉರಿಸಲಾಗಿತ್ತು. ಆದರೆ, ಹೆಲಿಕಾಪ್ಟರ್ ಗಾಳಿಯಿಂದ ಸ್ಮೋಕ್ ಕ್ಯಾಂಡಲ್‌ನ ಕಿಡಿ ಹುಲ್ಲುಗಳಿಗೆ ಏಕಾಏಕಿ ತಗಲಿ ಭಾರೀ ಬೆಂಕಿ ಕಾಣಿಸಿತ್ತು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೇ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹೊನ್ನಾವರದ ಸೈಂಟ್ ಅಂಥೋನಿ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಭಾಗವಹಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‌ನ ಮಾಜಿ ಶಾಸಕಿ ಶಾರದಾ ಶೆಟ್ಟಿಯ ವಿರುದ್ಧೇ ಹರಿಹಾಯ್ದಿದ್ದಾರೆ.
ಅಂಕೋಲಾದಲ್ಲಿ ಮೋದಿ ಸಮಾವೇಶ: ಬಸ್ ಇಲ್ಲದೆ ಸಮಸ್ಯೆ ಎದುರಿಸಿದ ಪ್ರಯಾಣಿಕರು
ಗಂಡನಿಗೆ ಟಿಕೆಟ್ ಕೊಟ್ಟಿದ್ದೇವೆ, ಹೆಂಡ್ತಿಗೆ ಎರಡು ಬಾರಿ ಟಿಕೆಟ್ ಕೊಟ್ಟಿದ್ದೇವೆ, ಶಾಸಕರೂ ಕೂಡಾ ಆಗಿದ್ದಾರೆ. ಈಗ ಬೇರೆಯವರಿಗೆ ಅಧಿಕಾರ ಹಂಚಿಕೊಳ್ಳಲಾಗಲ್ಲ ಅಂತಾ ನಿವೃತ್ತಿಯಾಗ್ತೇನೆ ಅಂತಾರೆ. ನೀವು ಪಕ್ಷಕ್ಕೆ ನಿಮ್ಮ ಸೇವೆ, ಬದ್ಧತೆ ಏನು ಅಂತಾ ಕೇಳಲು ಬಯಸ್ತೇನೆ. ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ, ಎಂತ ಝೀರೋಗಳು ಹೀರೋ ಆಗ್ತಾರೆ, ಹೀರೋಗಳು ಝೀರೋ ಆಗ್ತಾರೆ. ನಿವೇದಿತ್ ಆಳ್ವಾಗೆ ಜಾತಿ, ಧರ್ಮವಿಲ್ಲ, ನಮ್ಮದು ಕಾಂಗ್ರೆಸ್ ಪಾರ್ಟಿ ಜಾತಿ. ಉತ್ತರಕನ್ನಡ ಜಿಲ್ಲೆಯಲ್ಲಿ ಕುಮಡಾ ಸೇರಿ ಈ ಬಾರಿ 5 ಸೀಟು ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರಕಾರವಿದ್ರೂ ಮಹಿಳೆಯ ಜೀವನದಲ್ಲಿ ಏನಾದ್ರೂ ಬದಲಾವಣೆ ಆಯ್ತಾ..ರೈತರ ಆದಾಯ ಡಬಲ್ ಮಾಡ್ತೇವೆ ಅಂದ್ರು, ಏನಾದ್ರೂ ಡಬಲ್ ಆಯ್ತಾ...ಕೂಲಿ ಮಾಡುವ ಮಹಿಳೆಯರಿಗೆ ಕೂಲಿ ಡಬಲ್ ಆಯ್ತಾ? ಇಂದು ಬೆಲೆಗಳು ಗಗನಕ್ಕೇರಿದ್ದು, ಆದಾಯ ಪಾತಾಳಕ್ಕೆ ಹೋಗಿದೆ. ಜನ್‌ಧನ್ ಖಾತೆ ಮಾಡಿ ಕಪ್ಪು ಹಣ ತಂದು 15 ಲಕ್ಷ ಹಾಕ್ತೇವೆ ಅಂದ್ರು.ನಾವು ಭಾವನೆಗಳ ಮೇಲೆ ರಾಜಕಾರಣ ಮಾಡ್ತಿಲ್ಲ, ಬದುಕಿನ ಮೇಲೆ ಮಾಡ್ತಿದ್ದೇವೆ. ಬಿಜೆಪಿಯವರು ಕೊಟ್ಟ ಮಾತು ಉಳಿಸಿಲ್ಲ, ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆ ಕೂಡಾ ಈಡೇರಿಸಿಲ್ಲ. ಬಿಜೆಪಿ ಇಲ್ಲಿ ಯಾವ ಆಧಾರದಲ್ಲಿ ಗೆಲ್ಲುತ್ತದೆ...? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಪದ್ಮಶ್ರೀಪುರಸ್ಕೃತ ಸುಕ್ರಿಬೊಮ್ಮಗೌಡ, ತುಳಸೀಗೌಡರ ಕಾಲಿಗೆ ಬಿದ್ದ ಪ್ರಧಾನಿ ಮೋದಿ
ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಜಗದೀಶ್ ಶೆಟ್ಟರ್ ಸಿಎಂ ಕೂಡಾ ಆಗಿದ್ದವರು. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ, ನ್ಯಾಯ, ಸಮಾನತೆಯಿಲ್ಲ ಎಂದು ಬಿಟ್ಟು ಕಾಂಗ್ರೆಸ್ ಸೇರಿದ್ರು. ಸವದಿಯವರಿಗೆ ಇನ್ನೈದು ವರ್ಷ ಎಂಎಲ್‌ಸಿ ಇದ್ರೂ ರಾಜೀನಾಮೆ ಕೊಟ್ರು, ಪುಟ್ಟಣ್ಣ ಕೂಡಾ ಕಾಂಗ್ರೆಸ್ ಸೇರಿದ್ರು. ಬಿಜೆಪಿಯಿಂದ ಒಂದು ಡಜನ್ ಶಾಸಕರು ಕಾಂಗ್ರೆಸ್ ಬರ್ತೇನೆ ಅಂತಿದ್ರು, ನಮ್ಮಲ್ಲಿ ಜಾಗ ಇರ್ಲಿಲ್ಲ. ಉತ್ತರಕನ್ನಡ ಜಿಲ್ಲೆಯಿಂದ್ಲೂ ಒಬ್ರು ಪ್ರಯತ್ನಿಸಿದ್ರು, ಆದ್ರೆ ಹೆಸರು ಹೇಳಲು ಬಯಸಲ್ಲ. ಬಿಜೆಪಿಯ ಡ್ಯಾಂ ಒಡೆದುಹೋಗಿದ್ದು, ಕುಮಟಾದಲ್ಲಿ ನಿವೇದಿತ್ ಆಳ್ವಾ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ಯಾರು ಕೂಡಾ ಕರೆಂಟ್ ಬಿಲ್ ಕಟ್ಟೋ ಪ್ರಸಂಗವೇ ಬರಲ್ಲ. ಮಹಿಳೆಯರಿಗೆ ಬಸ್‌ನಲ್ಲಿ ಎಲ್ಲಿ ಹೋದರೂ ಉಚಿತ ಟಿಕೆಟ್ ಪ್ರಯಾಣ ವ್ಯವಸ್ಥೆ ಮಾಡಲಾಗುವುದು. ಈಗ ಬಿಜೆಪಿಯವರಿಗೆ ಧಮ್ ಇದ್ಯಾ ..? ಬಿಜೆಪಿಯವರದ್ದು ಭ್ರಷ್ಟಾಚಾರ ಮಾತ್ರ, ನಾವು ಅನ್ನಭಾಗ್ಯದ ಮೂಲಕ 10ಕೆಜಿ ಅಕ್ಕಿ ನೀಡ್ತೇವೆ. ಬಿಜೆಪಿಯವರಿಗೆ ಉದ್ಯೋಗ ಸೃಷ್ಠಿ ಮಾಡಲಾಗಿಲ್ಲ, ಆದ್ರೆ, ಕಾಂಗ್ರೆಸ್ ಕರಾವಳಿಯ ಯುವಕರಿಗೆ ಉದ್ಯೋಗ ವ್ಯವಸ್ಥೆ ಮಾಡಲಿದೆ. ಪ್ರತ್ಯೇಕ ತಾಲೂಕಿನಲ್ಲೂ ಹೆರಿಗೆ ಆಸ್ಪತ್ರೆ ಮಾಡಿ ಉಚಿತವಾಗಿ ಹೆರಿಗೆ ಮಾಡಿಸುವ ಯೋಜನೆ ಜಾರಿಗೆ ತರ್ತೇವೆ. ದಳದ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷ ಮುಂದಕ್ಕೆ ಅಧಿಕಾರಕ್ಕೆ ಬರಲ್ಲ ಎಂದು ತಿಳಿದಿರಲಿ. ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮನೆಯಲ್ಲಿರಲಿ, ನೀವೆಲ್ಲಾ ಅಧಿಕಾರದಲ್ಲಿರಿ ಎಂದು ಡಿಕೆಶಿ ಹೇಳಿದರು. ಈ ವೇಳೆ ಕುಮಟಾ- ಹೊನ್ನಾವರ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಕೂಡಾ ಜನರಲ್ಲಿ ಮತಯಾಚನೆ ನಡೆಸಿದರು.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಬಳಿಕ ಜಿಲ್ಲೆಯಲ್ಲಿ ಮೋದಿ ಮೇನಿಯಾ ಪ್ರಾರಂಭಗೊಂಡಿದ್ದು, ಇದನ್ನು ಬದಲಾಯಿಸುವ ಉದ್ದೇಶದಿಂದ ಇಂದು ಕುಮಟಾಕ್ಕೆ ಭೇಟಿ ನೀಡಿದ ಡಿಕೆಶಿ ಅಭ್ಯರ್ಥಿ ನಿವೇದಿತ್ ಆಳ್ವಾ ಪರವಾಗಿ ಮತಯಾಚನೆ ನಡೆಸಿದ್ದಾರೆ. ಡಿಕೆಶಿ ಕುಮಟಾ ಭೇಟಿ ಎಷ್ಟರ ಮಟ್ಟಿಗೆ ಅಭ್ಯರ್ಥಿ ಪರವಾಗಿ ಗೆಲುವಿಗೆ ಕಾರಣವಾಗಲಿದೆ ಎಂದು ಕಾದುನೋಡಬೇಕಷ್ಟೇ.