ಬೆಂಗಳೂರು(ಅ.07): ಮಾಜಿ ಸಿಎಂ, ಜೆಡಿಎಸ್‌ ನಾಯಕ ಹೆಚ್.ಡಿ. ಕುಮಾರಸ್ವಾಮಿ ಏನು ಬೇಕಾದರೂ ಹೇಳಲಿ, ಬಿಜೆಪಿಯವರು ಕೂಡ ಏನು ಬೇಕಾದರೂ ಹೇಳಲಿ, ಬಿಜೆಪಿ ಹಾಗೂ ಜೆಡಿಎಸ್ ಚಟುವಟಿಕೆ ನಮಗೆ ಬೇಕಾಗಿಲ್ಲ ಸಿದ್ದರಾಮಯ್ಯ ನಮ್ಮ ಸಿಎಲ್‌ಪಿ ಲೀಡರ್ ಆಗಿದ್ದಾರೆ. ಅವರು ಯಾಕೆ ರಾಜೇಶ್ ಗೌಡರನ್ನು ಬಿಜೆಪಿ ಕಳುಹಿಸಿ ಕೊಡ್ತಾರೆ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಜೇಶ್ ಗೌಡ ಏನು ನಮ್ಮ ಪಕ್ಷದ ಸದಸ್ಯ ಅಲ್ಲ. ಅವರ ತಂದೆ ನಮ್ಮ ಪಕ್ಷದಲ್ಲಿ ಎಂಪಿ ಆಗಿದ್ದರು. ಇವಾಗ ರಾಜೇಶ್ ಗೌಡ ಬಿಜೆಪಿಗೆ ಹೋಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಯಾಕೆ ರಾಜೇಶ್ ಗೌಡರನ್ನು ಬಿಜೆಪಿ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

2 ಬಾರಿ ಅಹಿಂದ ವರ್ಗಕ್ಕೆ ಮಣೆ ಹಾಕಿದ ಶಿರಾ : ಈ ಬಾರಿ ವಿಜಯ ಯಾರಿಗೆ?

ಶಿರಾದ ಅಭ್ಯರ್ಥಿ ಅತ್ಯಂತ ತಿಳುವಳಿಕಸ್ಥರಾಗಿದ್ದಾರೆ. ಅತ್ಯಂತ ಹಿರಿಯ ವ್ಯಕ್ತಿ, ನಾವೆಲ್ಲರೂ ಒಗ್ಗಟ್ಟಿನಿಂದ ಅವರನ್ನು ಕಣಕ್ಕೆ ಇಳಿಸಿದ್ದೇವೆ. ಶಿರಾ ಜನರು ದಡ್ಡರೇನು ಅಲ್ಲ, ಬಹಳ ಪ್ರಜ್ಞಾವಂತರು, ಬುದ್ದಿವಂತರಿದ್ದಾರೆ. ಶಿರಾ ಜನತೆ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡುತ್ತಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. 

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.