ವರದಿ : ಉಗಮ ಶ್ರೀನಿವಾಸ್‌

ತುಮಕೂರು (ಅ.07):  ಒಂದು ಕಡೆ ಶಿರಾ ಉಪಚುನಾವಣೆಯಲ್ಲಿ ಮೂರು ಪಕ್ಷಗಳ ಪೈಕಿ ಯಾವುದಾದರೊಂದು ಪಕ್ಷ ಅಹಿಂದ ವರ್ಗದವರಿಗೆ ಟಿಕೆಟ್‌ ನೀಡಬೇಕೆಂಬ ಕೂಗು ಕೇಳಿ ಬರುತ್ತಿದ್ದರೆ ಮತ್ತೊಂದು ಕಡೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಅಹಿಂದ ವರ್ಗಕ್ಕೆ ಸೇರಿದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶೇ.60ರಷ್ಟುಅಹಿಂದ ವರ್ಗಗಳ ಮತದಾರರಿದ್ದರೂ ಶಿರಾ ಕ್ಷೇತ್ರದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂಬುದು ಹಿಂದುಳಿದ ವರ್ಗದವರ ಅಳಲಾಗಿದೆ. ಹೀಗಾಗಿ ಈ ಬಾರಿಯಾದರೂ ಅಹಿಂದ ವರ್ಗದವರಿಗೆ ಟಿಕೆಟ್‌ ನೀಡಬೇಕೆಂಬ ಹಕ್ಕೊತ್ತಾಯವನ್ನು ಬಿಜೆಪಿ, ಜೆಡಿಎಸ್‌ನವರು ಮಾಡಿದ್ದಾರೆ. ಸದ್ಯದ ಮಟ್ಟಿಗೆ ಈ ಬಾರಿ ಮೂರೂ ಪ್ರಮುಖ ಪಕ್ಷಗಳು ಅಹಿಂದ ವರ್ಗದವರಿಗೆ ಮಣೆ ಹಾಕುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ.

RR ನಗರ ಉಪಕದನ: ಕೊರೋನಾ ಭೀತಿ, 68 ಮತಗಟ್ಟೆ ಸ್ಥಳಾಂತರ .

ಪರಿಶಿಷ್ಟಜಾತಿಯಲ್ಲಿ ಎಡಗೈ ಸಮುದಾಯದವರು ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಹಾಗೆಯೇ ಗೊಲ್ಲ ಸಮುದಾಯದವರು ಕೂಡ ಶಿರಾ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಈ ಬಾರಿ ಬಿಜೆಪಿಯಿಂದ ನಮಗೆ ಟಿಕೆಟ್‌ ನೀಡಬೇಕೆಂದು ಗೊಲ್ಲ ಸಮುದಾಯದವರು ಹಾಗೂ ಕುರುಬ ಸಮಾಜದ ಪಟ್ಟು ಹಿಡಿದಿದ್ದರು. ಆದರೆ ಅದು ನೆರವೇರುವ ಹಾಗೆ ಕಾಣುತ್ತಿಲ್ಲ.

ಇಷ್ಟಾದರೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ನಾಯಕ ಸಮುದಾಯದ ಸಾ. ಲಿಂಗಯ್ಯ ಆಯ್ಕೆಯಾಗಿದ್ದರು. ಅಂದು ನಡೆದ ಚುನಾವಣೆಯಲ್ಲಿ ಶೇ.54.90ರಂತೆ 32270 ಮತಗಳನ್ನು ಪಡೆದು ಜಯಶಾಲಿಯಾದರು. ಅವರ ಪ್ರತಿಸ್ಪರ್ಧಿಯಾಗಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಪಿ. ಮೂಡ್ಲೇಗೌಡ ಅವರು ಪರಾಭವಗೊಂಡರು. ಆ ಚುನಾವಣೆಯಲ್ಲಿ ಮೂಡ್ಲೇಗೌಡ ಅವರು ಶೇ.38.74ರಂತೆ 22775 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.

ಹಾಗೆಯೇ 1989ರಲ್ಲಿ ಕಾಂಗ್ರೆಸ್‌ನಿಂದ ಕುರುಬ ಸಮುದಾಯದ ಎಸ್‌.ಕೆ. ದಾಸಪ್ಪ ಅವರು ಶಾಸಕರಾಗಿ ಆಯ್ಕೆಯಾದರು. ಅಂದು ನಡೆದ ಚುನಾವಣೆಯಲ್ಲಿ ಎಸ್‌.ಕೆ.ದಾಸಪ್ಪ ಅವರು ಶೇ.39.31ರಂತೆ 29699 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಜನತಾದಳದಿಂದ ಸ್ಪರ್ಧಿಸಿದ್ದ ಬಿ. ಸತ್ಯನಾರಾಯಣ ಅವರು ಶೇ.29.31ರಂತೆ 22146 ಮತಗಳನ್ನು ಪಡೆದು ಪರಾಭವಗೊಂಡರು. ಈ ಎರಡು ಬಾರಿ ಹಿಂದುಳಿದ ವರ್ಗದವರು ಬಿಟ್ಟರೆ ಇಲ್ಲಿಯವರೆಗೆ ಶಿರಾದಲ್ಲಿ ಮತ್ಯಾರು ಗೆದ್ದಿಲ್ಲ.

ಈಗಾಗಲೇ ಬಿಜೆಪಿಯಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯಗಳು ಕೇಳಿ ಬಂದಿವೆ. ಅಲ್ಲದೇ ಪ್ರತಿಭಟನೆ ಕೂಡ ನಡೆದಿದೆ. ಈಗಾಗಲೇ ಜೆಡಿಎಸ್‌ ಮತ್ತು ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಇನ್ನು ಉಳಿದಿರುವುದು ಬಿಜೆಪಿ ಮಾತ್ರ. ಆದರೆ ಈ ಬಾರಿಯೂ ಅಹಿಂದ ವರ್ಗದವರಿಗೆ ಟಿಕೆಟ್‌ ಸಿಗುವುದು ಅನುಮಾನ ಎನ್ನಲಾಗಿದೆ.