ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕೂಗು ಹುಟ್ಟುಹಾಕಿರುವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಗೆ ತೆರಳಲಿದ್ದು, ಸಂಧಾನ ಮಾತುಕತೆಯ ಮತ್ತೊಂದು ಸುತ್ತು ಬೆಳಗಾವಿಯಲ್ಲಿ ನಡೆಯುವ ಸಾಧ್ಯತೆಯಿದೆ.
ಬೆಂಗಳೂರು(ಜ.17): ರಾಜ್ಯ ಕಾಂಗ್ರೆಸ್‌ನೊಳಗಿನ ಬಣ ರಾಜಕಾರಣದ ತಿಕ್ಕಾಟ ಬಗೆಹರಿಸಲು ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶುಕ್ರವಾರದಿಂದ ಎರಡು ದಿನಗಳ ಕಾಲ ಬೆಳಗಾವಿಗೆ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕೂಗು ಹುಟ್ಟುಹಾಕಿರುವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಗೆ ತೆರಳಲಿದ್ದು, ಸಂಧಾನ ಮಾತುಕತೆಯ ಮತ್ತೊಂದು ಸುತ್ತು ಬೆಳಗಾವಿಯಲ್ಲಿ ನಡೆಯುವ ಸಾಧ್ಯತೆಯಿದೆ.
ಕೆಪಿಸಿಸಿ ಅಧ್ಯಕ್ಷರು ಬದಲಾಗ್ತಾರೋ, ಇಲ್ವೋ?: ಪರಂ, ರಾಜಣ್ಣ, ಸತೀಶ್‌ರಿಂದ ಹೈಕಮಾಂಡ್‌ಗೆ ಪ್ರಶ್ನೆ
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆ ಪರಿಶೀಲನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಶುಕ್ರವಾರ ಬೆಳಗಾವಿಗೆ ಆಗಮಿಸುತ್ತಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಸಚಿವರ ಹೇಳಿಕೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷಕ್ಕೆ ಧಕ್ಕೆಯಾಗುವಂತೆ ಯಾವುದೇ ಹೇಳಿಕೆ ನೀಡದಂತೆ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರಿಗೆ, ಸಚಿವರಿಗೆ ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿದ್ದಾಗ ಸೂಚನೆ ನೀಡಿದ್ದರು. ಆದರೂ, ಸಭೆ ಮುಗಿದ ಮರುದಿನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತಂತೆ ಸತೀಶ್ ಜಾರಕಿಹೊಳಿ ಸೇರಿ ಕೆಲ ಸಚಿವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಅದಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಜ.21ರ ಬೆಳಗಾವಿ ಸಮಾವೇಶದ ಸಿದ್ಧತೆ ಪರಿಶೀಲಿಸಲು ರಣದೀಪ್ ಸಿಂಗ್ ಸುರ್ಜೇವಾಲ ಶುಕ್ರವಾರ ಮತ್ತು ಶನಿವಾರ ಬೆಳಗಾವಿಯಲ್ಲಿ ತಂಗಲಿದ್ದಾರೆ. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿ ಇನ್ನಿತರ ಸಚಿವರು, ನಾಯಕರು ಉಪಸ್ಥಿತರಿರಲಿದ್ದಾರೆ. ಈ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಎದುರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ನಡೆಯುತ್ತಿರುವ ಚರ್ಚೆ ಮತ್ತೆ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡೀಲಿ ಸಿಗಲ್ಲ: ಡಿಕೆಶಿ
ಬೆಂಗಳೂರು: ಪಕ್ಷದಲ್ಲಿ ಪ್ರಮುಖ ಹುದ್ದೆಗಳು ಅಂಗಡಿಯಲ್ಲಿ ಸಿಗುವುದಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳೇನು ಸ್ಥಾನಮಾನ ಕೊಡಿಸುವುದಿಲ್ಲ. ನಮ್ಮ ಕೆಲಸ ನೋಡಿ ಪಕ್ಷದ ನಾಯಕರು ಹುದ್ದೆ ನೀಡುತ್ತಾರೆ!
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಖಾರವಾದ ಪ್ರತಿಕ್ರಿಯೆಯಿದು.
ಈ ಬಗ್ಗೆ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಮಾಡುವ ಕೆಲಸ ಮತ್ತು ಶ್ರಮವನ್ನು ಪಕ್ಷದ ನಾಯಕರು ಗುರುತಿಸಿ ಸೂಕ್ತ ಹುದ್ದೆಗಳನ್ನು ನೀಡುತ್ತಾರೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳು ಸ್ಥಾನಮಾನ ಕೊಡಿಸುವುದಿಲ್ಲ. ಇದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಸದ್ಯಕ್ಕೆ ನಮಗೆ ಪಕ್ಷ ಸಂಘಟನೆ ಮುಖ್ಯ. ಪಕ್ಷ ಸಂಘಟಿಸಿ, ಉಳಿಸಿ, ಬೆಳೆಸುವ ಕೆಲಸವಾಗಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬುದ್ಧಿವಾದ ಹೇಳಿದ್ದಾರೆ. ಯಾರೂ ಬಹಿರಂಗ ಚರ್ಚೆ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ. ಪಕ್ಷದ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವಂತಿಲ್ಲ. ಏನೇ ಇದ್ದರೂ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳು ಅಥವಾ ನನ್ನ ಬಳಿ ಬಂದು ಚರ್ಚಿಸಲಿ. ಕಾಂಗ್ರೆಸ್ ಮಾತ್ರವಲ್ಲದೆ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪಕ್ಷಗಳಲ್ಲೂ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರದು ಎಂದು ಹೇಳಿದರು.
ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಇದರಿಂದ ವ್ಯತಿರಿಕ್ತ ಪರಿಣಾಮವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೇವಲ ಡಿ.ಕೆ.ಶಿವಕುಮಾರ್ ತಂದಿದ್ದಲ್ಲ. ಕಾರ್ಯಕರ್ತರು, ಮತದಾರರು ನಮ್ಮ ಮೇಲೆ ಅಪಾರ ವಿಶ್ವಾವಿಟ್ಟು ಅಧಿಕಾರ ನೀಡಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕು ಹಾಗೂ ಉಳಿಸಿಕೊಳ್ಳುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ವರಿಷ್ಠರ ಬ್ರೇಕ್!
ಕಾಂಗ್ರೆಸ್ ಎಂಬುದು ಕಾರ್ಯಕರ್ತರು ಮತ್ತು ಮತದಾರರ ಪಕ್ಷ. ಅದಕ್ಕೆ ತನ್ನದೇ ಆದ ಇತಿಹಾಸವಿದೆ. ಯಾರು ಇರಲಿ, ಹೋಗಲಿ ತನ್ನನ್ನು ತಾನು ಉಳಿಸಿಕೊಳ್ಳುವ ಶಕ್ತಿ ಪಕ್ಷಕ್ಕಿದೆ. ಹೀಗಾಗಿ ಮಾಧ್ಯಮಗಳೆದುರು ಮಾತನಾಡುವುದಕ್ಕಿಂತ ಪಕ್ಷ ಮುಖ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದೂ ಸೂಚ್ಯವಾಗಿ ತಿಳಿಸಿದರು. ಪಕ್ಷದ ಬಗ್ಗೆ ಯಾರಿಗಾದರೂ ಸಮಸ್ಯೆಗಳಿದ್ದರೆ, ಹೈಕಮಾಂಡ್ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಎಐಸಿಸಿ ಅಧ್ಯಕ್ಷರ ಪ್ರಶ್ನಿಸೋದು ಸರಿಯಲ್ಲ
ಪಕ್ಷ ಸಂಘಟನೆಗೆ ವೇಗ ನೀಡಲು ಪೂರ್ಣಪ್ರಮಾಣದ ಅಧ್ಯಕ್ಷರನ್ನು ನೇಮಿಸಬೇಕು ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಅದರ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು. ಆ ವಿಚಾರವನ್ನು ಅವರ ಬಳಿಯೇ ಕೇಳಬೇಕು. ಅಲ್ಲದೆ, ಎಐಸಿಸಿ ಅಧ್ಯಕ್ಷರ ನಿರ್ಧಾರವನ್ನು ಪ್ರಶ್ನೆ ಮಾಡಲಾಗುತ್ತಿದ್ದು, ಅದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
