ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಗಳು ಆಗುತ್ತಿದ್ದು, ಸರಕಾರ ಉರುಳಿಸಲು ಕಿಂಗ್‌ಪಿನ್‌ಗಳು ಯತ್ನಿಸುತ್ತಿದ್ದಾರೆಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಯೂ ಪ್ರತ್ಯಾರೋಪ ಮಾಡಿದ್ದು, ಕಿಂಗ್‌ಪಿನ್ ರಾಜಕೀಯವೇ ಜೋರಾಗಿದೆ.
ಬೆಂಗಳೂರು (ಸೆ.16): ‘ರಿಯಲ್ ಎಸ್ಟೇಟ್ ದಂಧೆ, ಮಟ್ಕಾ, ಲಾಟರಿ ದಂಧೆ ಮಾಡುವವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಮುಂದಾಗಿ ದ್ದಾರೆಂದು ಗಂಭೀರಾವಾಗಿ ಆರೋಪ ಮಾಡುವ ಬದಲು ಅಂಥವರನ್ನು ಮಟ್ಟ ಹಾಕಿ, ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಬಿಜೆಪಿ ಮುಖಂಡರು ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಷತ್ ಸದಸ್ಯರಾದ ರವಿಕುಮಾರ್, ಆಯನೂರು ಮಂಜುನಾಥ್, ಅಶ್ವತ್ಥ್ ನಾರಾಯಣ, ವಿಧಾನಸಭಾ ಸದಸ್ಯ ಎಂ.ಪಿ. ರೇಣುಕಾಚಾರ್ಯ, ‘ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಿಂಗ್ ಪಿನ್ಗಳು, ಮಾಫಿಯಾದವರು ಹಣ ಸಂಗ್ರಹಿಸುತ್ತಿದ್ದಾರೆ, ಬಿಜೆಪಿಯವರು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ’ ಎಂಬ ಮುಖ್ಯಮಂತ್ರಿಗಳ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ಕುಮಾರಸ್ವಾಮಿ ಹತಾಶರಾಗಿ ಮಾತನಾಡಿದ್ದಾರೆ. ಇಂತಹ ದಂಧೆಯಲ್ಲಿ ಇರುವವರನ್ನು ತಡೆಯಬೇಡಿ ಎಂದು ಯಾರಾದರೂ ಮನವಿ ಮಾಡಿದ್ದಾರೆಯೇ, ಸರ್ಕಾರದ ಹಿಡಿತ ಅವರ ಕೈ ತಪ್ಪಿದೆ. ಗುಪ್ತದಳ ಅವರ ಹತ್ತಿರವಿದೆ. ಅಂತಹವರ ಮಾಹಿತಿ ಪಡೆದು ಕಿಂಗ್‌ಪಿನ್, ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದರು.
ರವಿಕುಮಾರ್ ಮಾತನಾಡಿ, ‘ಮಾಸ್ಟರ್ ಪಿನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ಐಟಿ ಇಲಾಖೆ ಬಿಜೆಪಿ ಮೋರ್ಚಾ ಎಂದು ಟೀಕಿಸುತ್ತಿದ್ದವರು ಈಗ ಅಲ್ಲಿಗೆಹೋಗಿ ಬಿಜೆಪಿ ಮುಖಂಡರ ವಿರುದ್ಧ ದೂರು ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ. ರೇವಣ್ಣ ಅವರ ಮಗ ಪ್ರಜ್ವಲ್ ಅವರೇ ಸೂಟ್‌ಕೇಸ್ ಪಾರ್ಟಿ ಎಂದು ಹೇಳುತ್ತಾರೆ. ಅವರ ವಿರುದ್ಧ ಯಾವ ಐಟಿ ಇಲಾಖೆಗೆ,ಎಸಿಬಿಗೆ ದೂರು ಕೊಡುತ್ತಿರಾ’ ಎಂದು ತಿರುಗೇಟು ನೀಡಿದರು. ‘ಕೇವಲ ವರ್ಗಾವಣೆ ಮಾಡುವುದೇ ಸರ್ಕಾರದ ಕೆಲಸವೇ ರೇವಣ್ಣ ಕೇವಲ ಟ್ರಾನ್ಸ್‌ಫರ್ ಮಾಡಲು ಸರ್ಕಾರ ನಡೆಸುತ್ತಿದ್ದಾರೆ. ಎಲ್ಲ ಇಲಾಖೆಗಳನ್ನು ಅವರೇ ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಜೆಡಿಎಸ್ ಶಾಸಕರೇ ರೇವಣ್ಣ ಎಲ್ಲ ಟ್ರಾನ್ಸ್‌ಫರ್ ಮಾಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದಲ್ಲಿ ಕುಮಾರಸ್ವಾಮಿ, ಪರಮೇಶ್ವರ್, ಮತ್ತು ಎಚ್.ಡಿ. ರೇವಣ್ಣ ಮಾತ್ರ ಖುಷಿಯಾಗಿದ್ದಾರೆ, ಉಳಿದ ಯಾವ ಶಾಸಕರು ಖುಷಿಯಾಗಿಲ್ಲ’ ಎಂದು ವ್ಯಂಗ್ಯವಾಡಿದರು.
ಕಡಲೆಕಾಯಿ, ಬಾಳೆ ಹಣ್ಣು ತಿನ್ನೋಕಲ್ಲ: ‘ಈ ಸರ್ಕಾರ ಬಿದ್ದರೆ ಅದಕ್ಕೆ ಬಿಜೆಪಿ ಕಾರಣವಲ್ಲ, ನಿಮ್ಮ ಒಳಜಗಳವೇ ಕಾರಣವಾಗುತ್ತದೆ. ಸರ್ಕಾರ ರಚಿಸುವ
ಮುಂಚೆ ಗೊಂದಲ, ಸಮನ್ವಯ ಸಮಿತಿಯಲ್ಲೂ ಗೊಂದಲ, ಸಮನ್ವಯ ಸಮಿತಿ ಸಭೆ ಮಾಡುವುದೇ ದೊಡ್ಡ ಸಾಧನೆಯಾಗಿದೆ. ಸರ್ಕಾರ ಬಿದ್ದು ಹೋದರೆ ಬಿಜೆಪಿ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಬಿಜೆಪಿಯ 104 ಶಾಸಕರು ಇರುವುದು ಕಡಲೆಕಾಯಿ ತಿನ್ನಲು ಅಲ್ಲ, ಬಾಳೆ ಹಣ್ಣು ತಿನ್ನುತ್ತಾ ಕೂರಲ್ಲ, ನಾವು ಆಕ್ಟಿವಿಟಿ ಮಾಡುತ್ತೇವೆ, ನಮಗೂ ದೇವರ ಆಶೀರ್ವಾದ ಇದೆ’ ಎಂದು ರವಿಕುಮಾರ್ ಹೇಳಿದರು. ರಾಜ್ಯದ ಆರೂವರೆ ಕೋಟಿ ಜನ ಎಚ್.ಡಿ. ಕುಮಾರಸ್ವಾಮಿ ಅವರ ಅಡಿಯಾಳಲ್ಲ. ರೇವಣ್ಣ, ಕುಮಾರಸ್ವಾಮಿ ಆಟ ಬಹಳ ದಿನ ನಡೆಯುವುದಿಲ್ಲ. ನೀವು ಏನು ಮಾಡುತ್ತೀರೆಂದು ನಾವು ಗಮನಿಸುತ್ತಿದ್ದೇವೆ ಎಂದರು.
ಲಾಟರಿ ದಂಧೆ ಹಿಂದೆ ದಿನೇಶ್ ಗುಂಡೂರಾವ್:
ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ‘ದಂಧೆಕೋರರ ರಕ್ಷಣೆ ಮಾಡುವವರು ಯಾರು ಎಂಬುದು ಗೊತ್ತಿದೆ. ಕಮಿಷನ್ ಹೊಡೆಯುವವರು, ಮಾಫಿಯಾದವರು ಎಲ್ಲರೂ ಮುಖ್ಯಮಂತ್ರಿಗಳ ಜೊತೆ ಇದ್ದಾರೆ.ಗೋವಾದಲ್ಲಿ ಜೂಜು ಅಡ್ಡೆ ನಡೆಸುವವರು ಇವರ ಜೊತೆಗಿದ್ದಾರೆ. ರೌಡಿಗಳ, ಮಾಫಿಯಾಗಳ ಪಕ್ಷ ಜೆಡಿಎಸ್ ಆಗಿದೆ.
ಗಾಂಧಿನಗರದ ಲಾಟರಿ ದಂಧೆ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಕೈಕೆಳಗೆ ನಡೆಯುತ್ತಿದೆ’ ಎಂದು ಆರೋಪಿಸಿದರು. ‘ನಮ್ಮಲ್ಲಿ ಕಿಂಗ್ ಇದ್ದಾರೆ, ಜೆಡಿಎಸ್‌ನಲ್ಲಿ ಪಿನ್ ಗಳು ಇದ್ದಾರೆ. ಅವರು ಬೆಳಗಾವಿ, ಕನಕಪುರ, ತುಮಕೂರು, ಹಾಸನದಲ್ಲಿ ಇರಬಹುದು ಹುಡುಕಿ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಛೇಡಿಸಿದ ಅವರು, ‘ಇಂತಹ ಹೇಡಿ ಮುಖ್ಯಮಂತ್ರಿಯನ್ನು ತಾವು ನೋಡಿಯೇ ಇಲ್ಲ’ ಎಂದು ಕುಟುಕಿದರು
