ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಅಭಿಪ್ರಾಯ ಸಂಗ್ರಹಿಸಿದ ಕೆಪಿಸಿಸಿ
ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳಿರುವಾಗಲೇ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ನಡೆಯುತ್ತಿದೆ. ಕೊಡಗಿನ ಎರಡು ಕ್ಷೇತ್ರಗಳ ಟಿಕೆಟ್ ಅನ್ನು ಯಾರಿಗೆ ಕೊಡಬೇಕು, ಯಾರು ಗೆಲ್ಲುವ ಕುದುರೆ ಎನ್ನುವ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್
ಕೊಡಗು (ಡಿ.26): ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳಿರುವಾಗಲೇ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ನಡೆಯುತ್ತಿದೆ. ಸೋಮವಾರ ಮಡಿಕೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ ಮತ್ತು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ನೇತೃತ್ವದಲ್ಲಿ ಕೊಡಗಿನ ಎರಡು ಕ್ಷೇತ್ರಗಳ ಟಿಕೆಟ್ ಅನ್ನು ಯಾರಿಗೆ ಕೊಡಬೇಕು, ಯಾರು ಗೆಲ್ಲುವ ಕುದುರೆ ಎನ್ನುವ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆದ್ರೆ ಯಾರಿಗೆ ಟಿಕೆಟ್ ಭಾಗ್ಯ ಒಲಿಯುತ್ತೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆದರೆ ಯುವಕರಿಗೆ ಟಿಕೆಟ್ ಕೊಡಬೇಕು ಎನ್ನುವುದು ಪಕ್ಷದಲ್ಲಿ ನಿರ್ಧಾರ ಮಾಡಿದಂತೆ. ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದ್ದ ಕೊಡಗಿನಲ್ಲಿ ಆ ಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಈಗ ತನ್ನ ಉಕ್ಕಿನ ಕೋಟೆಯನ್ನು ಕಟ್ಟಿಕೊಂಡಿದೆ. ಈ ಉಕ್ಕಿನ ಕೋಟೆಯನ್ನು ಹೊಡೆದುರುಳಿಸಲೇಬೇಕು ಎಂದು ಕಾಂಗ್ರೆಸ್ ಭಾರೀ ಉತ್ಸಾಹ ಮತ್ತು ಹಲವು ತಂತ್ರಗಳನ್ನು ರೂಪಿಸುತ್ತಿದೆ. ಕೊನೆ ಗಳಿಗೆಯಲ್ಲಿ ಟಿಕೆಟ್ ಅನ್ನು ನೀಡಿದರೆ, ಆಗ ಶುರುವಾಗುವ ಬಂಡಾಯವನ್ನು ಶಮನ ಮಾಡುವುದರಲ್ಲಿಯೇ ಸಮಯ ಕಳೆಯುವುದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಅಖಾಡವನ್ನು ಸಿದ್ದಗೊಳಿಸಿಕೊಳ್ಳಲು ನಿರ್ಧರಿಸಿದೆ.
ಹೀಗಾಗಿಯೇ ಸೋಮವಾರ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವವರ ಕುರಿತು ಕಾಂಗ್ರೆಸ್ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರಿಂದಲೂ ಅಭಿಪ್ರಾಯ ಸಂಗ್ರಹಿಸಿದೆ. ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್ ಮತ್ತು ಕೊಡಗು ಉಸ್ತುವಾರಿ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು. ಪ್ರತ್ಯೇಕ ಎರಡು ಕೊಠಡಿಗಳಲ್ಲಿ ಕಾಂಗ್ರೆಸ್ ನಾಯಕರು ಒಬ್ಬರನೇ ಸ್ಥಳೀಯರ ನಾಯಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದರು.
ಒಂದು ಕೊಠಡಿಯಲ್ಲಿ ಎಚ್.ಸಿ. ಮಹದೇವಪ್ಪ ಇದ್ದರೆ ಮತ್ತೊಂದು ಕೊಠಡಿಯಲ್ಲಿ ಆರ್. ಧೃವನಾರಾಯಣ್ ಅವರು ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಎಂ. ಲಕ್ಷ್ಮಣ್ ಅವರು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಿದ್ದು ಎರಡು ಸ್ಥಾನಗಳಿಗೆ ಕಾಂಗ್ರೆಸ್‍ನಿಂದ 10 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಳೆದು ತೂಗಿ, ಗೆಲ್ಲುವ ಅದರಲ್ಲೂ ಯುವಕರಿಗೆ ಟಿಕೆಟ್ ಕೊಡಬೇಕು ಎನ್ನುವುದು ನಿರ್ಧಾರವಾಗಿದೆ. ಅದಕ್ಕೂ ಮುಖ್ಯವಾಗಿ ಪಕ್ಷಕ್ಕಾಗಿ ಅವರು ದುಡಿದಿರುವ ಬಗ್ಗೆ ಹೆಚ್ಚಿನ ಗಮನಹರಿಸಿ ಟಿಕೆಟ್ ನೀಡಲಾಗುವುದು ಎಂದಿದ್ದಾರೆ.
ವಿರಾಜಪೇಟೆ ಕ್ಷೇತ್ರದಿಂದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಹಾಗೆಯೇ ಅಲ್ಪಸಂಖ್ಯಾತರ ಘಟಕದ ಮುಖಂಡ ಲತೀಫ್ ಟಿಕೆಪಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಮಡಿಕೇರಿ ಕ್ಷೇತ್ರದಿಂದ ಬಿಜೆಪಿ ಮುಖಂಡ ಎ. ಮಂಜು ಅವರ ಮಗ ಮಂಥರ್ ಗೌಡ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಚಿವ ಬಿ.ಎ. ಜೀವಿಯ, ವಕೀಲ ಚಂದ್ರಮೌಳಿ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್, ಕೆಪಿಸಿಸಿ ಸದಸ್ಯೆಯಾಗಿದ್ದ ಕೆ.ಪಿ. ಚಂದ್ರಕಲಾ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲೋಕೇಶ್ ಒಕ್ಕಲಿಗರ ಸಂಘದ ಮುಖಂಡ ಹರಪಳ್ಳಿ ರವೀಂದ್ರ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಈಗಾಗಲೇ ಜೈಪುರದಲ್ಲಿ ನಡೆದಿರುವ ಎಐಸಿಸಿ ಸಭೆಯಲ್ಲಿ 50 ವರ್ಷದ ಒಳಗಿರುವ ಯುವಕರಿಗೆ ಈ ಬಾರಿ ಟಿಕೆಟ್ ಕೊಡಬೇಕೆಂದು ನಿರ್ಧಾರವಾಗಿದೆ.
ದರ್ಶನ್ ಪುಟ್ಟಣ್ಣಯ್ಯ ಮತ್ತೆ ರಾಜಕೀಯ ಪ್ರವೇಶ
ಹೀಗಾಗಿ ಎರಡು ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂದು ವಿರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ. ಇನ್ನು ಟಿಕೆಟ್ ಸಿಗದಿದ್ದರೆ ಯಾರಿಗೆ ಟಿಕೆಟ್ ದೊರೆಯುತ್ತದೆಯೋ ಅವರ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಮಡಿಕೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಂಥರ್ ಗೌಡ ಹೇಳಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಪಡೆದು, ತಮ್ಮ ಕೋಟೆಯನ್ನು ಪುನರ್ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಉಮೇದಿನಲ್ಲಿ ಕಾಂಗ್ರೆಸ್ ನಾಯಕರು ಸಿದ್ದವಾಗುತ್ತಿದ್ದಾರೆ.