Asianet Suvarna News Asianet Suvarna News

ದರ್ಶನ್‌ ಪುಟ್ಟಣ್ಣಯ್ಯ ಮತ್ತೆ ರಾಜಕೀಯ ಪ್ರವೇಶ

ಮಾಜಿ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯನವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಮತ್ತೆ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ವಿದೇಶದಿಂದ ವಾಪಸಾಗಿರುವ ಅವರು ಚುನಾವಣಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

Darshan Puttannaiah re-enters politics snr
Author
First Published Dec 24, 2022, 6:49 AM IST

 ಮಂಡ್ಯ:  ಮಾಜಿ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯನವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಮತ್ತೆ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ವಿದೇಶದಿಂದ ವಾಪಸಾಗಿರುವ ಅವರು ಚುನಾವಣಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ ಎನ್ನುವುದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಚುನಾವಣಾ ಅಖಾಡ ಪ್ರವೇಶಿಸುವುದನ್ನು ಖಚಿತಪಡಿಸಿದ್ದಾರೆ. ತಂದೆಯಂತೆಯೇ ರೈತರ ಜೊತೆ ಇರುವುದಾಗಿ ಭರವಸೆ ನೀಡಿರುವುದು ರೈತಸಂಘದೊಳಗೆ ಹೊಸ ಸಂಚಲನ ಸೃಷ್ಟಿಸಿದೆ.

ರಾಜಕೀಯಕ್ಕೆ (Politics) ಮತ್ತೆ ಪ್ರವೇಶ ಮಾಡಿರುವ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ರೈತ (Farmers)  ಮುಖಂಡರು ಸೇಬಿನ ಹಾರ ಹಾಕಿ ಸ್ವಾಗತಿಸಿದರು. ರೈತಸಂಘದ ಕಾರ್ಯಕರ್ತರು ಬೈಕ್‌ ರಾರ‍ಯಲಿ ಮೂಲಕ ಅವರನ್ನು ಅಹೋರಾತ್ರಿ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಕರೆತಂದರು.

ಕಬ್ಬು, ಭತ್ತ, ರಾಗಿ ಸೇರಿದಂತೆ ಇನ್ನಿತರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ರೈತರು 47 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ವ್ಯಕ್ತಪಡಿಸಲು ಆಗಮಿಸಿದ ವೇಳೆ ಸಾವಿರಾರು ರೈತರು ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ದರ್ಶನ್‌ ಪುಟ್ಟಣ್ಣಯ್ಯ ಪರ ಹರ್ಷೋದ್ಘಾರಗಳೊಂದಿಗೆ ಜೈಕಾರ ಮೊಳಗಿಸಿದರು.

ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿದ ದರ್ಶನ್‌ ಪುಟ್ಟಣ್ಣಯ್ಯ, ರೈತರು ಕಳೆದ ಒಂದೂವರೆ ತಿಂಗಳಿನಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ದಿದ್ದರೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿತ್ತು. ರೈತರ ಬಗ್ಗೆ ಯಾವ ರಾಜಕೀಯ ಪಕ್ಷಗಳಿಗೂ ಕಾಳಜಿ ಇಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ತಿಳಿಸಿದರು.

ರೈತರ ಬೇಡಿಕೆಗಳಿಗೆ ಸ್ಪಂದಿಸುವ, ರೈತ ಮುಖಂಡರನ್ನು ಕರೆದು ಸಮಸ್ಯೆಗಳ ಕುರಿತಂತೆ ಸಮಾಲೋಚಿಸಿ ಪರಿಹಾರ ಹುಡುಕುವ ಪ್ರಯತ್ನ ಯಾರೊಬ್ಬರಿಂದಲೂ ನಡೆದಿಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಸ್ವಲ್ಪವಾದರೂ ಮಾನ-ಮರ್ಯಾದೆ ಇದ್ದಿದ್ದರೆ ಬಂದು ನಿರ್ಣಯ ಮಾಡಬೇಕಿತ್ತು. ರೈತರ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.

ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುತ್ತಿರುವಂತಿದೆ. ರೈತರ ಶಕ್ತಿ ಪ್ರದರ್ಶನಕ್ಕಾಗಿ ನಾವೆಲ್ಲಾ ಒಟ್ಟಿಗೆ ಸೇರಿ ರೈತ ಸಂಘಕ್ಕೆ ರಾಜಕೀಯ ಶಕ್ತಿಯನ್ನು ತುಂಬಲು ನಿರ್ಧರಿಸಿದ್ದೇವೆ. ಹೊಸ ನಡೆ-ನುಡಿಯ ರಾಜಕಾರಣಕ್ಕೆ ಸಂಕಲ್ಪ ಮಾಡಿದ್ದು, ಎಲ್ಲಾ ಪಕ್ಷದವರು ಅಧಿಕಾರ ನಡೆಸಿರುವುದನ್ನು ನೋಡಿದ್ದೀರಿ, ನಾವು ಹೊಸ ಆಲೋಚನೆ ಇಟ್ಟುಕೊಂಡು ರಾಜಕೀಯಕ್ಕೆ ಧುಮುಕಿ ಏನಾದರೂ ಒಳ್ಳೆಯದನ್ನು ಮಾಡಲು ಹೊರಟಿದ್ದೇವೆ ಎಂದು ಹೇಳಿದರು.

ಎಲ್ಲರೂ ಹುಟ್ಟುತ್ತಾರೆ, ಸಾಯುತ್ತಾರೆ, ಈ ಮಧ್ಯೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ನಮಪ್ಪ ರೈತ ಮುಖಂಡ ಪುಟ್ಟಣ್ಣಯ್ಯನವರು ಹೇಳುತ್ತಿದ್ದರು. ಅದರಂತೆ ನಾವು ಒಳ್ಳೆಯದನ್ನು ಮಾಡುವುದಕ್ಕಾಗಿಯೇ ರಾಜಕೀಯಕ್ಕೆ ಧುಮುಕಿದ್ದೇವೆ. ನಮ್ಮೊಡನೆ ಎಲ್ಲರೂ ಕೈಜೋಡಿಸಿ, ರೈತ ಸಂಘವನ್ನು ಬೆಳೆಸೋಣ ಎಂದು ಕರೆ ನೀಡಿದರು.

ಪ್ರಮಾಣ ವಚನ ಸ್ವೀಕಾರ: ಮಂಡ್ಯ ಜಿಲ್ಲೆಯ ಸಮಸ್ತ ಜನರ ಆಶಯಗಳಿಗಾಗಿ ರೈತ, ದಲಿತ, ಕಾರ್ಮಿಕ, ಮಹಿಳೆ ಮತ್ತು ವಿದ್ಯಾರ್ಥಿ ಯುವಜನರ ಭರವಸೆಗಳಿಗಾಗಿ ಜಿಲ್ಲೆಯ ಸ್ವಾಭಿಮಾನವನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿ ಎತ್ತಿ ಹಿಡಿಯುವುದಕ್ಕಾಗಿ ಹೊಸ ನಡೆ-ನುಡಿಯ ರಾಜಕಾರಣಕ್ಕಾಗಿ ನಾವು ರೈತ ಸಂಘದ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂದು ಇದೇ ವೇಳೆ ರೈತ ಮುಖಂಡರು ಪ್ರಮಾಣ ಸ್ವೀಕರಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌, ಜಿಲ್ಲಾಧ್ಯಕ್ಷ ಎ.ಎಲ್‌. ಕೆಂಪೂಗೌಡ, ಮುಖಂಡರಾದ ಪ್ರಸನ್ನ, ಹರೀಶ್‌, ಮೇಲುಕೋಟೆಯಿಂದ ನನ್ನ ಸ್ಪರ್ಧೆ ಖಚಿತ: ದರ್ಶನ್‌ ಪುಟ್ಟಣ್ಣಯ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ ಎಂದು ದರ್ಶನ್‌ ಪುಟ್ಟಣ್ಣಯ್ಯ ಸ್ಪಷ್ಟಪಡಿಸಿದರು.

ಇಷ್ಟುದಿನಗಳ ಕಾಲ ಹಲವು ಜವಾಬ್ದಾರಿಗಳು ನನ್ನ ಹೆಗಲಿಗಿದ್ದವು. ಈಗ ಆ ಎಲ್ಲಾ ಜವಾಬ್ದಾರಿಗಳಿಂದ ಹೊರಬಂದಿದ್ದೇನೆ. ಸಕ್ರಿಯವಾಗಿ ರೈತಸಂಘದ ಕಾರ್ಯಕರ್ತರ ಜೊತೆಗಿದ್ದು ಸಂಘಟನೆಗೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತೇನೆ. ಚುನಾವಣೆಯಲ್ಲಿ ಸೋಲು-ಗೆಲುವು ನನಗೆ ಮುಖ್ಯವಲ್ಲ. ರೈತರ ಪ್ರೀತಿ-ವಿಶ್ವಾಸ ಮುಖ್ಯ. ಅವರ ಮೇಲೆ ವಿಶ್ವಾಸವಿಟ್ಟು ಚುನಾವಣಾ ಅಖಾಡ ಪ್ರವೇಶಿಸುತ್ತಿದ್ದೇನೆ.

ಮೇಲುಕೋಟೆಯಿಂದ ನಾನು ಸೇರಿದಂತೆ ಎಸ್‌.ಸಿ.ಮಧುಚಂದನ್‌ ಮಂಡ್ಯೆ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದೇವೆ. ರೈತರ ಸಮಸ್ಯೆ ಪರಿಹಾರಕ್ಕಾಗಿ ರೈತರನ್ನೇ ಅಧಿಕಾರಕ್ಕೆ ತರಬೇಕು ಎಂದು ಸಲಹೆ ನೀಡಿದರು.

Follow Us:
Download App:
  • android
  • ios