Asianet Suvarna News Asianet Suvarna News

ಮಡಿಕೇರಿ ಚಲೋ ವಿರುದ್ಧ ಸೋನಿಯಾಗೆ ಕೆಪಿಸಿಸಿ ಪತ್ರ

ಪ್ರತಿಭಟನೆಗಿಂತ ಸಾರ್ವಜನಿಕ ಸಭೆ ನಡೆಸಿ, ಪ್ರತಿಭಟನೆ ಕೈಬಿಡಲು ಸಿದ್ದು ಮನವೊಲಿಸಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಸೇನ್‌ ಪತ್ರ

KPCC Letter to Sonia Gandhi Against Madikeri Chalo in Karnataka grg
Author
Bengaluru, First Published Aug 25, 2022, 1:30 AM IST

ಬೆಂಗಳೂರು(ಆ.25):  ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಭಟನೆಗಿಂತ ‘ಬೃಹತ್‌ ಸಾರ್ವಜನಿಕ ಸಭೆ’ ನಡೆಸಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಭಾಗದಲ್ಲಿ ಕೈಗೊಂಡ ನೆರೆ ಪರಿಹಾರ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಎ.ಹುಸೇನ್‌ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ಕೇಂದ್ರ ನಾಯಕರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೂ ಪತ್ರ ಬರೆದಿರುವ ಹುಸೇನ್‌ ಅವರು, ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಅವರ ಕಾರಿನ ಮೇಲೆ ಮೊಟ್ಟೆಎಸೆತ ಘಟನೆಯನ್ನು ಖಂಡಿಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ಈ ಘಟನೆಗೆ ಪ್ರತಿಯಾಗಿ ಮಡಿಕೇರಿ ಚಲೋ ಅಂತಹ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಿದ್ದುಗೆ ಹಿನ್ನಡೆ ಮಡಿಕೇರಿ ಚಲೋ ಯಾತ್ರೆ ರದ್ದು, ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ!

ಪ್ರತಿಭಟನೆ ಕೈ ಮೀರಿ ಹೋದರೆ ಮುಂಬರುವ ಚುನಾವಣೆ ಮೇಲೂ ಪರಿಣಾಮ ಬೀರಬಹುದು. ಇದರ ಬದಲಾಗಿ ಬೃಹತ್‌ ಸಾರ್ವಜನಿಕ ಸಭೆ ಆಯೋಜಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ಸರ್ಕಾರ ಮಡಿಕೇರಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಮಳೆ ಹಾನಿಗೊಳಗಾದ ಜನರಿಗೆ ಕೈಗೊಂಡ ಪರಿಹಾರ ಕಾರ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದು ಕೋರಿದ್ದಾರೆ.

ಬಿಜೆಪಿಯವರು ಮಡಿಕೇರಿಯಲ್ಲಿ ಸಾಧನಾ ಸಮಾವೇಶ ನಡೆಸಲು ಹೊರಟಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಸಾರ್ವಜನಿಕ ಸಭೆ ನಡೆಸಿ ಬಿಜೆಪಿ ಆಡಳಿತದ ವೈಫಲ್ಯಗಳನ್ನು ಮುಂದಿಟ್ಟು ಜನರಲ್ಲಿ ಅರಿವು ಮೂಡಿಸುವುದು ಸೂಕ್ತ. ಕೋವಿಡ್‌ ನಂತರ ಕೊಡಗು ಪ್ರವಾಸೋದ್ಯಮದಲ್ಲಿ ಈಗಷ್ಟೇ ಚೇತರಿಸಿಕೊಂಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ಜಿಲ್ಲೆಗಿರುವ ಖ್ಯಾತಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹುಸೇನ್‌ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
 

Follow Us:
Download App:
  • android
  • ios