ಬೆಂಗಳೂರು:  ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ವಿರುದ್ಧ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ತುಂಬಾ ಪ್ರಯಾಸದ ನಂತರ ತಮ್ಮ ಕನಸಿನ ಬಜೆಟ್ ಮಂಡಿಸಿದ್ದಾರೆ. ಬಲ್ಲವರು ಇದನ್ನು ಗಜಪ್ರಸವ ಎಂದು ಹೇಳುತ್ತಾರೆ, ಎಂದು ಪೂಜಾರಿ ಈ ಸಂದರ್ಭದಲ್ಲಿ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯರಂತಹ ಒಬ್ಬ ಮುತ್ಸದ್ದಿ ಬಜೆಟ್ ಬೇಡ, ಪೂರಕ ಬಜೆಟ್ ಮಂಡಿಸಿ ಎಂದು ಹೇಳಿದ್ದರು. ಆದರೂ ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಬಜೆಟ್ ಯಾಕೆ ಬೇಡ ಎಂದು ಹೇಳಿದ್ದರು ಎಂದು ಈಗ ಅರ್ಥ ಆಗಿದೆ, ಎಂದು ಶ್ರೀನಿವಾಸ್ ಪೂಜಾರಿ ಮಾರ್ಮಿಕವಾಗಿ ಟೀಕಿಸಿದ್ದಾರೆ.

ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಬಜೆಟ್ ತಂದು ನಿಲ್ಲಿಸಿದ್ದಾರೆ. ಮೂರ್ನಾಲ್ಕು ಜಿಲ್ಲೆಗೆ ಪೂರಕ ಯೋಜನೆ ಜಾರಿ ಮಾಡಿದ್ದರೆ ಸಾಕಿತ್ತು. ಬಜೆಟ್ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ಆಗಿರಬೇಕು, ಇಲ್ಲವಾದರೆ ಏನಾಗುತ್ತೆ ಅನ್ನೋದಕ್ಕೆ ಈ ಬಜೆಟ್ ಸಾಕ್ಷಿ, ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಕ್ಕೆ ಅನ್ಯಾಯವಾಗಿದೆ ಎಂದು ಅನೇಕ ಶಾಸಕರು ಹೇಳಿದ್ದಾರೆ. ತಾಯಿಯಂತೆ ಇಡೀ ರಾಜ್ಯವನ್ನು ಮಮತೆಯಿಂದ ನೋಡದೆ ಕರಾವಳಿ, ಮಲೆನಾಡು ಭಾಗಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ. ಪರಿಣಾಮವಾಗಿ, ಬಜೆಟ್ ನಿಂದ ಪ್ರತ್ಯೇಕತೆ ಕೂಗು ಎದ್ದಿದೆ. ಪ್ರತ್ಯೇಕ ರಾಜ್ಯದ ಕೂಗು ಬರಲು ಸಿಎಂ ಕುಮಾರಸ್ವಾಮಿ ಕಾರಣ ಹಾಗೂ ಅದಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಕಾರಣ, ಎಂದು ಶ್ರೀನಿವಾಸ್ ಪೂಜಾರಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.