ಹೈಕಮಾಂಡ್‌ ನನಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೇನೆಂದರೆ ಬೇಡ ಅಂತ ಖಂಡಿತವಾಗಿಯೂ ಹೇಳಲಾರೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. 

ತುಮಕೂರು (ಮೇ.12): ಹೈಕಮಾಂಡ್‌ ನನಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೇನೆಂದರೆ ಬೇಡ ಅಂತ ಖಂಡಿತವಾಗಿಯೂ ಹೇಳಲಾರೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಅವರು ತುಮಕೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸಿಎಂ ಆಗಬೇಕು ಎಂದು ಜಿಲ್ಲೆಯ ಅಭಿಮಾನಿಗಳ ಅಪೇಕ್ಷೆ ಇದೆ ಎಂದ ತಕ್ಷಣ ಅದು ಸಾಧ್ಯ ಆಗುವುದಿಲ್ಲ ಎಂದರು. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟದ್ದು. ಸಿಎಲ್‌ಪಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಯಾರು ಒಳ್ಳೆ ಆಡಳಿತ ಕೊಡುತ್ತಾರೋ ಅಂತಹವರನ್ನು ಹೈಕಮಾಂಡ್‌ ಸಿಎಂ ಮಾಡಬಹುದು ಎಂದರು.

ಎಲ್ಲಾ ಕಾಲಕ್ಕೂ ಎಲ್ಲಾ ಸಮೀಕ್ಷೆಗಳು ನಿಜವಾಗುವುದಿಲ್ಲ. ಕೆಲವೊಮ್ಮೆ ನಿಜವಾಗಿದೆ, ಕೆಲವೊಮ್ಮೆ ಸುಳ್ಳಾಗಿದೆ. ಆದರೂ ಎಕ್ಸಿಟ್‌ ಪೋಲಲ್ಲಿ ಕಾಂಗ್ರೆಸ್‌ ಮುಂದಿದೆ. ಕಾಂಗ್ರೆಸ್‌ ಪರ ಅಲೆ ಇರೋದು ಸಾಬೀತಾಗಿದೆ ಎಂದರು. ನಾವು 130 ಸ್ಥಾನ ಪಡೆಯುತ್ತೇವೆ. ಅಲ್ಲದೇ ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ದರಾಗಿದ್ದೇವೆ ಎಂದು ತಿಳಿಸಿದರು. ರಾಜ್ಯದ ವಿಧಾನಸಭಾ ಚುನಾವಣೆ ಬಹಳ ಪ್ರತಿಷ್ಠಿತವಾಗಿ ಈ ಬಾರಿ ನಡೆದಿದೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ ಅಂತಾ ಹೇಳಿದ್ದೇವು. ಇಂದು ಆ ವಾತಾವರಣ ಕಂಡು ಬಂದಿದೆ. ಬಹಳ ಜನರು ಮತ ಹಾಕದವರು ಈ ಬಾರಿ ಮತದಾನ ಮಾಡಿದ್ದಾರೆ. ಹೊಸಬರು ಕೂಡ ಮತದಾನ ಮಾಡಿದ್ದಾರೆ. 

ಒಂದು ಮತವಾದರೂ ಹೆಚ್ಚು ಪಡೆದು ಗೆಲ್ಲುತ್ತೇನೆ: ಲಕ್ಷ್ಮೀ ಹೆಬ್ಬಾಳಕರ

ಶೇ.18-20% ಹೊಸಬರು ಮತದಾನ ಮಾಡಿದ್ದಾರೆ. ಚುನಾವಣೆ ಚಿತ್ರಣ ಬೇರೆಯಾಗುತ್ತೆ ಎಂಬುದು ನನ್ನ ಅಭಿಪ್ರಾಯ ಎಂದರು. ನಮ್ಮ ಜಿಲ್ಲೆಯಲ್ಲಿ ಚೆನ್ನಾಗಿ ಮತದಾನ ಆಗಿದೆ. ಜಿಲ್ಲೆಯಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿದೆ. ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಮೂರು ಸಮೀಕ್ಷೇಗಳು ಬಿಟ್ಟರೇ ಉಳಿದ ಸಮೀಕ್ಷೆಗಳು ಕಾಂಗ್ರೆಸ್‌ ಮುಂದೆ ಇದೆ ಅಂತಾ ಹೇಳಿವೆ. ಕಾಂಗ್ರೆಸ್‌ ಪಕ್ಷ ಸರ್ಕಾರ ಮಾಡುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಐದು ಗ್ಯಾರಂಟಿ ನೀಡಿರುವ ಭರವಸೆ ಮೇಲೆ ಮತದಾರರು ಮತದಾನ ಮಾಡಿರಬಹುದು ಎಂದರು.

ನಾವು ಸರ್ಕಾರ ಮಾಡಿದ ಮೇಲೆ ಐದು ಗ್ಯಾರಂಟಿಗಳನ್ನು ಪ್ರಥಮ ಕ್ಯಾಬಿನೆಟ್‌ನಲ್ಲಿಯೇ ತೀರ್ಮಾನ ಮಾಡುವುದಾಗಿ ತಿಳಿಸಿದರು. ಈ ಚುನಾವಣೆ ಹೊಸ ರೀತಿಯಲ್ಲಿ ವಿಭಿನ್ನವಾಗಿ ಆಗಿದೆ. ಜನರು ಪ್ರಜಾಪ್ರಭುತ್ವದಲ್ಲಿ ಭಾಗಿಯಾಗೋದು ಒಳ್ಳೆಯ ಬೆಳವಣಿಗೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಶಾಸಕ ಡಾ.ಜಿ ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು. ಇವಿಎಮ್‌ ಮೇಲೆ ಮೊದಲಿಂದಲೂ ಆಕ್ಷೇಪ ಇದೆ. ಅದನ್ನು ಬ್ಯಾನ್‌ ಮಾಡಿ ಅಂತಾಲೂ ಹೇಳಿದ್ದೆವು. ಫಲಿತಾಂಶ ಬಂದ ಮೇಲೆ ಏನಾಗುತ್ತೋ ನೋಡೊಣ ಎಂದರು. ಬಜರಂಗ ಒಂದು ಸಂಘಟನೆ. 

ಇದಕ್ಕೂ ಬಜರಂಗಿಗೆ ಏನು ಸಂಬಂಧವಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕದಿಂದ ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ ಎಂದರು. ಇದೇ ವೇಳೆ ಜಿಲ್ಲೆಯ ರಾಜ್ಯದ ಮತದಾರರಿಗೆ ,ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದವರಿಗೆ ಪರಮೇಶ್ವರ್‌ ಅಭಿನಂದನೆ ಸಲ್ಲಿಸಿದರು. ಕಾಂಗ್ರೆಸ್‌ ಮುಖಂಡ ಕೆಎನ್‌ ರಾಜಣ್ಣ ಮಾತನಾಡಿ, ಯಾರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲವೋ ಅಂತವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗದ ಹಾಗೆ ಕಾಯ್ದೆ ತರಬೇಕು. ಆಗ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುತ್ತಾರೆ ಎಂದರು.

130 ಸ್ಥಾನ ಖಚಿತ: ಸಿದ್ದರಾಮಯ್ಯ ಕೂಡ ವರುಣಾದಲ್ಲಿ ಯಾವುದೇ ತೊಂದರೆ ಇಲ್ಲದೇ ಗೆಲ್ಲುತ್ತಾರೆ. ನಾನು ಕೂಡ ಕೊರಟಗೆರೆಯಲ್ಲಿ ಹಿಂದಿಗಿಂತ ಹೆಚ್ಚಿನ ಬಹುಮತದಲ್ಲಿ ಗೆಲ್ಲುತ್ತೇನೆ. 2013 ರಲ್ಲಿ ನಾನು 120 ಸೀಟು ಬರುವ ಮುನ್ಸೂಚನೆ ಕೊಟ್ಟಿದ್ದೆ. ಆದರೆ 122 ಸ್ಥಾನ ಬಂದಿತ್ತು. ಈಗ ನಾನು 130 ಸ್ಥಾನ ಎಂದು ಹೇಳಿದ್ದೇನೆ. ನನ್ನ ಲೆಕ್ಕಾಚಾರ ಸರಿ ಆಗಬಹುದು ಎಂದರು.

ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್ ಮೂಡ್‍ಗೆ ಜಾರಿದ ಸತೀಶ್‌ ಜಾರಕಿಹೊಳಿ

ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟದ್ದು. ಆದರೆ ಸಿಎಂ ಸ್ಥಾನ ನೀಡಿದರೆ ಖಂಡಿತವಾಗಿ ತಿರಸ್ಕರಿಸಲಾರೆ. ಯಾಕೆಂದರೆ ತುಮಕೂರು ಜಿಲ್ಲೆಯ ಜನತೆಗೆ ನಾನು ಸಿಎಂ ಆಗಬೇಕೆಂಬ ಅಪೇಕ್ಷೆ ಇದೆ
-ಡಾ. ಜಿ ಪರಮೇಶ್ವರ್‌, ಶಾಸಕ