ಕೊಪ್ಪಳ: ಸಿದ್ದರಾಮೋತ್ಸವ ಅಂಗವಾಗಿ ಪಾದಯಾತ್ರೆ, ಕಾರ್ಯ್ರಮದಲ್ಲಿ 1 ಲಕ್ಷ ಕುರಿಗಾರರು ಭಾಗಿ
Siddaramotsava: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕೊಪ್ಪಳದಿಂದ ದಾವಣಗೆರೆಗೆ ಪಾದಯಾತ್ರೆ ಹೊರಡಲು ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಗಳ ಯುವಕರ ತಂಡವೊಂದು ಸಿದ್ದವಾಗಿದೆ
ವರದಿ- ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಜು. 27): ಸಿದ್ದರಾಮೋತ್ಸವ ಕುರಿತು ಈಗಾಗಲೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಇದರ ಮಧ್ಯೆ ಸಿದ್ದರಾಮೋತ್ಸವಕ್ಕೆ ಭಾರೀ ಬೆಂಬಲವೂ ಸಹ ವ್ಯಕ್ತವಾಗಿದೆ. ಈ ಹಿಂದೆ 1991 ರಲ್ಲಿ ಸಿದ್ದರಾಮಯ್ಯ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದರು. ಅಂದಿನಿಂದ ಸಿದ್ದರಾಮಯ್ಯ ಗೆ ಕೊಪ್ಪಳದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಅಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಹಿನ್ನಲೆಯಲ್ಲಿ ಕೊಪ್ಪಳದಿಂದ ದಾವಣಗೆರೆಗೆ ಪಾದಯಾತ್ರೆ ಹೊರಡಲು ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಗಳ ಯುವಕರ ತಂಡವೊಂದು ಸಿದ್ದವಾಗಿದೆ. 100 ಕ್ಕೂ ಹೆಚ್ಚು ಸಿದ್ದರಾಮಯ್ಯ ಅಭಿಮಾನಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದು,ನಾಳೆಯಿಂದ ಪಾದಯಾತ್ರೆಯನ್ನು ಯುವಕರು ಆರಂಭಿಸಲಿದ್ದಾರೆ. ಅಗಸ್ಟ್ 2 ರಂದು ಸಿದ್ದು ಅಭಿಮಾನಿಗಳು ದಾವಣಗೆರೆ ತಲುಪಲಿದ್ದಾರೆ.
ಪಾದಯಾತ್ರೆ ಮಧ್ಯೆ ಸಸಿ ನೆಡುವ ಕಾರ್ಯಕ್ರಮ: ನಾಳೆ ಬೆಳಿಗ್ಗೆ 11 ಗಂಟೆಗೆ ಗವಿಮಠದಲ್ಲಿ ಸಸಿನೆಟ್ಟು ಪಾದಯಾತ್ರೆ ಆರಂಭಿಸಲಿರುವ ಯುವಕರು,150 ಕಿಲೋಮೀಟರ್ ಪಾದಯಾತ್ರೆ ಯುವಕರು ಮಾಡಲಿದ್ದಾರೆ. ಪ್ರತಿದಿನ 30 ಕಿಲೋಮೀಟರ್ ಪಾದಯಾತ್ರೆ ಮಾಡಲಿರುವ ಯುವಕರು, ಪಾದಯಾತ್ರೆಯ ಮಾರ್ಗ ಮಧ್ಯೆ ಬರುವ ಪ್ರತಿಯೊಂದು ಗ್ರಾಮಗಳಲ್ಲಿ ಸಸಿ ನೆಡುವ ಕಾರ್ಯವನ್ನು ಸಿದ್ದರಾಮಯ್ಯ ಅವರ ಅಭಿಮಾನಿ ಯುವಕರು ಮಾಡಲಿದ್ದಾರೆ.
ಸಿದ್ದರಾಮೋತ್ಸವ ಸಭೆಗೆ ಗೈರಾದ ಶಾಸಕನ ವಿರುದ್ಧ ಜಮೀರ್ ಅಸಮಾಧಾನ
ಸಿದ್ದರಾಮೋತ್ಸವಕ್ಕೆ 1 ಲಕ್ಷ ಕುರಿಗಾರರು: ಇನ್ನು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನೀರಿಕ್ಷೆ ಇದೆ ಎನ್ನಲಾಗಿದೆ. ಇದರ ಮಧ್ಯೆ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ 1 ಲಕ್ಷ ಕುರಿಗಾರರು ಭಾಗಿಯಾಗಲಿದ್ದಾರೆ ಎಂದು ಕುರಿ ಮತ್ತು ಮೇಕೆ ಮಹಾಮಂಡಳದ ನಿರ್ದೇಶಕ ಪಂಡಿತರಾವ್ ಚಿದ್ರಿ ಹೇಳಿದ್ದಾರೆ.
ಅಗಸ್ಟ್ 3 ರಂದು ದಾವಣಗೆರೆಯಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಇಡೀ ರಾಜ್ಯ ಸುತ್ತಿ ಕುರಿಗಾರರಿಗೆ ಹೇಳಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕುರಿಗಾರರಿಗೆ ಬಹಳ ಯೋಜನೆಗಳನ್ನು ತಂದಿದ್ದಾರೆ. ಸತ್ತ ಕುರಿಗಳಿಗೆ ಪರಿಹಾರ ನೀಡುವ ಯೋಜನೆ ದೇಶದಲ್ಲಿ ಎಲ್ಲಿಯೂ ಇಲ್ಲ, ಜೊತೆಗೆ ಸೊಸೈಟಿಗಳಿಗೆ 5 ಲಕ್ಷ ಪರಿಹಾರ ಕೊಟ್ಟಿದ್ದು, ಮಹಾಮಂಡಳ ಕಟ್ಟಲು ಬಹಳ ಅನಕೂಲ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ದಾವಣಗೆರೆಗೆ ತೆರಳುವುದಾಗಿ ಚಿದ್ರಿ ಹೇಳಿದ್ದಾರೆ.