ಮುಂದಿನ ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಖಚಿತಪಡಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಗೊಂಡರೆ ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.
ಕೊಪ್ಪಳ (ಜು.07): ಮುಂದಿನ ಮೂರು ವರ್ಷ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಯಲಬುರ್ಗಾ ತಾಲ್ಲೂಕಿನ ಹಿರೆವಂಕಲಕುಂಟಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಮೂರು ವರ್ಷ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ಇನ್ನಷ್ಟು ಸುಧಾರಿಸಿದರೆ, ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಬಗ್ಗೆ ಯೋಚನೆ ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ಒಂದು ತಿಂಗಳು ತುಂಬಿದಿದ್ದು, ಈ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳು ಆರಂಭಗೊಂಡಿವೆ. ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇತ್ತೀಚೆಗೆ 16 ಪ್ರೌಢಶಾಲೆಗಳು, 7 ಪಿಯು ಕಾಲೇಜುಗಳು ಪ್ರಾರಂಭವಾಗಿವೆ. ಬಜೆಟ್‌ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಘೋಷಿಸಿದ್ದು, ಇದರ ಪೈಕಿ 50 ಶಾಲೆಗಳು ಕೆಕೆಆರ್‌ಡಿಬಿ ಅಡಿಯಲ್ಲಿ ನಿರ್ಮಾಣವಾಗಲಿವೆ' ಎಂದು ಹೇಳಿದರು.
ಮಧು ಬಂಗಾರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ:
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಲ್ಲಿ ನನಗೆ ಅಭಿಮಾನವಿದೆ. ಅವರು ಕೆಲಸ ಮಾಡದಿದ್ದರೆ ನಾನೇ ಅವರ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಟೀಕೆ ಮಾಡಿದರೂ ಅವರ ಕೆಲಸ ಮತ್ತು ನಿಷ್ಠೆಗೆ ನಾನು ಶ್ಲಾಘನೆ ಮಾಡುತ್ತೇನೆ. ಇನ್ನು ಕೂದಲು ಅಥವಾ ಉಡುಗೆ ಬಗ್ಗೆ ಟೀಕೆ ಮಾಡುವವರು ಅವರ ಕೆಲಸವನ್ನು ನೋಡಿ ಮಾತನಾಡಬೇಕು. 'ನಮ್ಮ ಸರ್ಕಾರ ವಿರೋಧ ಪಕ್ಷದವರಿಗೂ ಶಾಲೆಗಳು, ಸೌಲಭ್ಯಗಳನ್ನು ಕೊಡುತ್ತಿದೆ. ನಾನು ನನ್ನ ಕ್ಷೇತ್ರಕ್ಕೆ 3 ಶಾಲೆ ಕೇಳಿದ್ದರೆ, ವಿರೋಧ ಪಕ್ಷದವರಿಗೆ 2 ಶಾಲೆ ಕೊಡಲಾಗಿದೆ. ಅವರಿಗೂ ಅನ್ಯಾಯ ಆಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.
ಆರ್ಥಿಕ ಸ್ಥಿತಿ ಬಗ್ಗೆ ವಾದಕ್ಕೆ ತಿರುಗೇಟು
ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಶಿಕ್ಷಣ ಇಲಾಖೆಗೆ ಮಾತ್ರ 42 ಸಾವಿರ ಕೋಟಿ ರೂ. ಹಂಚಲಾಗಿದೆ. ಪೂರ್ವ ಸರ್ಕಾರದಿಂದ ಬಾಕಿಯಾದ ಬಿಲ್ 2 ಲಕ್ಷ ಕೋಟಿ ರೂ. ಇದೆ. ಆದರೆ ಅದನ್ನು ನಾವು ನಿರ್ವಹಿಸುತ್ತಿದ್ದೇವೆ. ಬಜೆಟ್ 4.09 ಲಕ್ಷ ಕೋಟಿ ರೂಪಾಯಿ ನೀಡಿರುವುದು, ಅಭಿವೃದ್ಧಿಗೆ ಯಾವುದೇ ತಡೆ ಇಲ್ಲ ಎಂಬುದರ ಸಾಕ್ಷಿ. ನಾನು ನನ್ನ ಕ್ಷೇತ್ರದ ಜನರೊಂದಿಗೆ ತಮಾಷೆಗಾಗಿ ಮಾಡಿದ ಮಾತನ್ನು, ಮಾಧ್ಯಮಗಳು ‘ರಾಜ್ಯದಲ್ಲಿ ಹಣದ ಕೊರತೆ’ ಎಂದು ತೋರಿಸಿದ್ದಾರೆ. ಇದು ನ್ಯಾಷನಲ್ ನ್ಯೂಸ್ ಆಗುತ್ತಿದೆ. ಆದರೆ ಜನರು ನನ್ನನ್ನು ಋಣಾತ್ಮಕವಾಗಿ ವೀಕ್ಷಿಸುತ್ತಾರೆ ಎಂದು ಖುಷಿಯಾಗುತ್ತದೆ' ಎಂದು ವಾಗ್ದಾಳಿ ನಡೆಸಿದರು.
ಬಸವರಾಜ ರಾಯರೆಡ್ಡಿ ಮಂತ್ರಿಯಾಗಬಹುದಾ?
'ನನನ್ನು ಮಂತ್ರಿ ಮಾಡಲಿದ್ದಾರೆ ಎನ್ನುವುದಕ್ಕೆ ಯಾವುದೇ ಖಚಿತತೆ ಇಲ್ಲ. ಆದರೆ ಸಿದ್ದರಾಮಯ್ಯ ಅವರು ನನ್ನನ್ನು ಎಲ್ಲ ದಿಕ್ಕಿನಲ್ಲಿ ಬೆಂಬಲಿಸಿದ್ದಾರೆ. ಅವರು 1983ರಲ್ಲಿ ಶಾಸಕನಾದರೆ, ನಾನು 1985ರಲ್ಲಿ ಶಾಸಕನಾಗಿದ್ದೇನೆ. ರಾಜಕೀಯವಾಗಿ ನಾವು ಎಂದಿಗೂ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.
