ಎಲ್ಲವೂ ಹೈ ಕಮಾಂಡ್‌ಗೆ ಬಿಡುವುದಾದರೆ ನಾವೆಲ್ಲಾ ಇಲ್ಲಿ ಸಭೆ ಯಾಕೆ ಕರೆಯಬೇಕಿತ್ತು, ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆಯುತ್ತಿದ್ದಾರೆ, ಕೆಲವೆಡೆ ಕಾರ್ಯಕರ್ತರನ್ನು ಬಿಟ್ಟು ಕಾರ್ಯಕ್ರಮಗಳನ್ನು ಮಾಡಲಾಗಿದೆ, ಹಾಗಾಗಿ ಎಲ್ಲರೂ ನಾವಿಲ್ಲಿ ಕುಳಿತು ಚರ್ಚೆ ಮಾಡೋಣ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲಗಳಿವೆ: ಕೊತ್ತೂರು ಮಂಜುನಾಥ್ 

ಕೋಲಾರ(ಡಿ.03): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಂಗಟ್ಟು ಶುರುವಾಗಿದೆ. ಶನಿವಾರ ಕಾಂಗ್ರೆಸ್‌ ನಾಯಕರು ರಸಾಪುರದ ರಾಮಸಂದ್ರ ಬಳಿ ಇರುವ ಕಾನ್ಫಿಡೆಂಟ್ ಅಮೂನ್ ರೆಸಾರ್ಟ್‌ನಲ್ಲಿ ಸಭೆ ಸೇರಿ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಿದರು.

ಶನಿವಾರದ ಸಭೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಬ್ಲಾಕ್ ಕಾಂಗ್ರೆಸ್ ಮುಖಂಡರು ಭಾಗಿಯಾಗಿ ಅಭ್ಯರ್ಥಿ ಆಕಾಂಕ್ಷಿಗಳ ಹೆಸರನ್ನ ಪಡೆದು ಬಳಿಕ ಹೈ ಕಮಾಂಡ್ ನಿರ್ಧಾರಕ್ಕೆ ಬಿಡಲಾಗುವುದು ಎಂದು ಸಭೆಯಲ್ಲಿ ಎಲ್ಲಾ ಕಾಂಗ್ರೇಸ್ ನಾಯಕರು ಅಭಿಪ್ರಾಯ ಸಂಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ: ಸಂಸದ ಮುನಿಸ್ವಾಮಿ ಆರೋಪ

ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಕೊತ್ತೂರು ಮಂಜುನಾಥ್, ಎಲ್ಲವೂ ಹೈ ಕಮಾಂಡ್‌ಗೆ ಬಿಡುವುದಾದರೆ ನಾವೆಲ್ಲಾ ಇಲ್ಲಿ ಸಭೆ ಯಾಕೆ ಕರೆಯಬೇಕಿತ್ತು, ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆಯುತ್ತಿದ್ದಾರೆ, ಕೆಲವೆಡೆ ಕಾರ್ಯಕರ್ತರನ್ನು ಬಿಟ್ಟು ಕಾರ್ಯಕ್ರಮಗಳನ್ನು ಮಾಡಲಾಗಿದೆ, ಹಾಗಾಗಿ ಎಲ್ಲರೂ ನಾವಿಲ್ಲಿ ಕುಳಿತು ಚರ್ಚೆ ಮಾಡೋಣ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲಗಳಿವೆ ಎಂದು ಹೇಳಿದರು.

ಕೋಲಾರ ಕಾಂಗ್ರೆಸ್‌ನಲ್ಲಿರುವ ಭಿನ್ನಮತ ಮರೆತು ಎಲ್ಲಾ ಕೈ ನಾಯಕರು ಒಗ್ಗಟ್ಟಾಗಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರು ಬದ್ದರಾಗಿರಬೇಕು ಎಂದು ಸಚಿವ ರಾಮಲಿಂಗಾರಡ್ಡಿ ಸಲಹೆ ನೀಡಿದರು.

ಟೇಕಲ್ ರೈಲ್ವೆ ಬ್ರಿಡ್ಜ್ 2024ರ ಮಾರ್ಚ್‌ಗೆ ಲೋಕಾರ್ಪಣೆ: ಎಸ್.ಮುನಿಸ್ವಾಮಿ

ಮುಳಬಾಗಲು ಮೂಲದ ಮುದ್ದು ಗಂಗಾಧರ್, ಕೋಲಾರ ಮೂಲದ ಮುನಿವೆಂಕಟಪ್ಪ, ಶಾಂತ ಕುಮಾರಿ, ಮಾಲೂರು ಮೂಲದ ಮುನಿರಾಜು, ಎಂ.ನಾರಾಯಣಸ್ವಾಮಿ ನಾವು ಸಹ ಅಭ್ಯರ್ಥಿಗಳು ಎಂದು ಸಭೆಯಲ್ಲಿ ಮನವಿ ಮಾಡಿದರು. ಇದೆಲ್ಲಾ ಮಾಹಿತಿಯನ್ನ ಹೈ ಕಮಾಂಡ್‌ಗೆ ಕಳುಹಿಸಿಕೊಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಭೆಯಲ್ಲಿ ಸಚಿವರಾದ ಭೈರತಿ ಸುರೇಶ್, ಎಂ.ಸಿ.ಸುಧಾಕರ್, ಕೆ.ಹೆಚ್ ಮುನಿಯಪ್ಪ, ಸಿ.ಎಂ.ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಇದ್ದರು.