ಜೆಡಿಎಸ್ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ, ಅವರೇ ನಮ್ಮ ಮನೆಗೆ ಬಂದಿದ್ದರು: ಸಿಎಂ ಇಬ್ರಾಹಿಂ
ಬಿಜೆಪಿಯೊಂದಿಗಿನ ಮೈತ್ರಿಯಿಂದಾಗಿ ಈಗ ಎದುರಾಗಲಿರುವ ಲೋಕಸಭಾ ಚುನಾವಣೆಗಿಂತ ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಈಗ ಬಂದಿರುವ 19 ಸ್ಥಾನಗಳೂ ಬರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಅ.05): ಬಿಜೆಪಿಯೊಂದಿಗಿನ ಮೈತ್ರಿಯಿಂದಾಗಿ ಈಗ ಎದುರಾಗಲಿರುವ ಲೋಕಸಭಾ ಚುನಾವಣೆಗಿಂತ ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಈಗ ಬಂದಿರುವ 19 ಸ್ಥಾನಗಳೂ ಬರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತೀಕ್ಷ್ಣವಾಗಿ ಹೇಳಿದ್ದಾರೆ. ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದರೆ ಜೆಡಿಎಸ್ ಜತೆಗೆ ಹೋಗಿದ್ದಕ್ಕೆ ಇಷ್ಟೆಲ್ಲಾ ಆಯಿತು ಎಂಬ ಆರೋಪವನ್ನು ಬಿಜೆಪಿ ಮಾಡಲಿದೆ ಎಂದರು.
ಮೈತ್ರಿ ಬಗ್ಗೆ ಪಕ್ಷದ 19 ಶಾಸಕರ ಪೈಕಿ ಅನೇಕರಿಗೆ ಸಮಾಧಾನ ಇಲ್ಲ. ಹಲವರು ನನ್ನ ಜತೆ ನೋವು ತೋಡಿಕೊಂಡಿದ್ದು, ಮೈತ್ರಿ ಇಷ್ಟವಿಲ್ಲದಿರುವ ಕುರಿತು ತಿಳಿಸಿದ್ದಾರೆ. ಮೈತ್ರಿ ಮಾತುಕತೆಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೆಹಲಿಗೆ ಹೋಗಿ ಬಂದಿದ್ದಾರೆ. ಆದರೆ, ಪಕ್ಷದ ರಾಜ್ಯಾಧ್ಯಕ್ಷನಾದ ನನ್ನಲ್ಲಿ ಸಹ ಅವರು ಒಂದು ಮಾತನ್ನೂ ಹೇಳಿಲ್ಲ. ನನಗೆ ಒಂದು ಮಾತು ಹೇಳಿದ್ದರೆ, ನಾನು ಸಹ ಹೋಗಿ ಬನ್ನಿ ಎಂದು ಹೇಳುತ್ತಿದ್ದೆ. ಆದರೆ, ಅವರು ನನ್ನಿಂದಲೂ ಇದನ್ನು ಮುಚ್ಚಿಟ್ಟಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಸೇರಿಲ್ಲ ಕೇವಲ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ: ಉಲ್ಟಾ ಹೊಡೆದ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ
ಬಿಜೆಪಿ ಜತೆ ಮೈತ್ರಿಯಾದರೂ ಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲಾಗುವುದಿಲ್ಲ. ಜೆಡಿಎಸ್ ಸಿದ್ಧಾತವನ್ನು ಮೆಚ್ಚಿ ಬಿಜೆಪಿಯವರು ಬಂದಿದ್ದಾರೆಯೇ ಅಥವಾ ಬಿಜೆಪಿ ಸಿದ್ಧಾಂತವನ್ನು ಮೆಚ್ಚಿ ಜೆಡಿಎಸ್‌ನವರು ಹೋಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಕೇರಳದ ಜೆಡಿಎಸ್ ಘಟಕವು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದೆ. ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್ ಘಟಕಗಳ ಜತೆ ಮಾತನಾಡಬೇಕು. ಅವರೆಲ್ಲಾ ಒಪ್ಪಲಿಲ್ಲ ಎಂದರೆ ಪಕ್ಷದ ಚಿಹ್ನೆ ಉಳಿಯುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.
ಇದೇ ತಿಂಗಳು 16ರಂದು ಮೈತ್ರಿ ಕುರಿತಂತೆ ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ಸಭೆಯ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ತಿಳಿಸುತ್ತೇವೆ ಎಂದು ತಿಳಿಸಿದರು. ಪಕ್ಷ ಸಂಘಟನೆಗಾಗಿ ಕುಮಾರಸ್ವಾಮಿ ಮತ್ತು ನಾನು ಪ್ರವಾಸ ಕೈಗೊಂಡಿದ್ದೇವೆ. ನಮಿಬ್ಬರನ್ನು ಬಿಟ್ಟರೆ ಮೂರನೆಯವರು ಇಲ್ಲ. ಬಿಜೆಪಿಯವರು ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ಜೆಡಿಎಸ್ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡಿಸಿದ್ದರು. ಈಗಲೂ ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ವಿಶ್ವಾಸ ಇದೆ. ಮೈತ್ರಿ ವಾಪಸ್ ತೆಗೆದುಕೊಳ್ಳಬಹುದು ಎಂದರು.
ಕಾಂಗ್ರೆಸ್ ಸೇರುವ ಯೋಚನೆ ಇಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇಬ್ರಾಹಿಂ, ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಮನಸ್ಸಿನಲ್ಲಿ ಯಾವುದೇ ಯೋಚನೆ ಇಲ್ಲ. ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ನನಗೂ ಸಾಕಾಗಿದೆ. ಎಲ್ಲಿಂದ ಹಣ ತರುವುದು? ಮಹಾತ್ಮಗಾಂಧಿ ಅವರನ್ನು ನಿಲ್ಲಿಸಿದ್ದರೂ 20 ಕೋಟಿ ರು. ಬೇಕಾಗುತ್ತದೆ. ಪಕ್ಷದ ಸಿದ್ಧಾಂತಗಳನ್ನು ಜೀರ್ಣಿಸಿಕೊಂಡಿದ್ದೇನೆ. ಈಗಲೂ ವಿಷಕಂಠನಾಗಿದ್ದೇನೆ ಎಂದು ಹೇಳಿದರು.
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ: ಅರಮನೆಯಲ್ಲಿ ಯಾವ ದಿನ ಏನೇನು ಕಾರ್ಯಕ್ರಮ ಗೊತ್ತಾ?
ಪಕ್ಷ ಸೇರ್ಪಡೆಗಾಗಿ ನಾನು ಕುಮಾರಸ್ವಾಮಿ ಅವರ ಮನೆಗೆ ಹೋಗಿರಲಿಲ್ಲ. ಅವರೇ ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟ ವೇಳೆ ಒಂದು ಬಾರಿ ಮಾತ್ರ ನಾನು ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದೆ
- ಸಿ.ಎಂ.ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ