ಇಂಧನ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿದ್ದಾರೆಂಬ ಕಾರಣಕ್ಕೆ ಸಚಿವ ಕೆ.ಜೆ. ಜಾರ್ಜ್ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದರು ಎಂದು ವರದಿಯಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರವು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರು ತೀವ್ರ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ತಮ್ಮನ್ನು ವಿಶ್ವಾಸಕ್ಕೆ ಪಡೆಯದೇ ವರ್ಗಾವಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಕಾರಣದಿಂದ ಸಚಿವರು ಬೇಸರಗೊಂಡಿದ್ದರು ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಇಂಧನ ಇಲಾಖೆಯ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಖ್ಯಮಂತ್ರಿ ಕಚೇರಿ ಮುಂದಾಗಿತ್ತು. ಈ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆಯ ಆಡಳಿತದಲ್ಲಿ ತೀವ್ರ ಹಸ್ತಕ್ಷೇಪ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಸಚಿವ ಕೆ.ಜೆ. ಜಾರ್ಜ್ ಅವರು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ತಮ್ಮ ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸಿದ್ದಂತೆ. ಈ ಬೆಳವಣಿಗೆಯ ನಡುವೆಯೇ ಅವರು ಸಚಿವ ಸಂಪುಟ ಸಭೆಗೆ ಗೈರಾಗಿದ್ದರು ಎಂಬ ಮಾಹಿತಿಯೂ ಹೊರಬಿದ್ದಿತ್ತು.
“ಮಂತ್ರಿಯಾಗಿ ನನ್ನ ಮಾತಿಗೆ ಬೆಲೆ ಇಲ್ಲ. ಹೀಗಿರುವಾಗ ನಾನು ಇಲ್ಲಿ ಏಕೆ ಇರಬೇಕು?” ಎಂದು ಸಚಿವ ಕೆ.ಜೆ. ಜಾರ್ಜ್ ಅವರು ಆಪ್ತರ ಮುಂದೆ ನೋವು ತೋಡಿಕೊಂಡಿದ್ದರು ಎನ್ನಲಾಗಿದೆ. ಈ ಬೆಳವಣಿಗೆಗಳ ನಂತರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರ ನೀಡಲು ಮುಂದಾಗಿದ್ದರು ಎಂಬ ಸುದ್ದಿಯೂ ಹರಡಿತ್ತು. ಆದರೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಮಧ್ಯೆ ಪ್ರವೇಶಿಸಿ ಸಂಧಾನ ನಡೆಸಿ, ಸಚಿವರನ್ನು ಮನವೊಲಿಸಿದರು ಎಂದು ವರದಿಯಾಗಿದೆ. ಕೆ ಜೆ ಜಾರ್ಜ್ ಕೂಡ ಸ್ಪಷ್ಟನೆ ನೀಡಿ ಆ ರೀತಿ ಏನಿಲ್ಲ ಎಂದಿದ್ದರು.
ಬಿಜೆಪಿ ನಾಯಕರಿಂದ ಗಂಭೀರ ಆರೋಪ
ಈ ವಿವಾದಕ್ಕೆ ಸಂಬಂಧಿಸಿ ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತೀವ್ರ ಆರೋಪಗಳನ್ನು ಮಾಡಿದ್ದಾರೆ. “ಇಡೀ ಸರ್ಕಾರವನ್ನು ನಿಯಂತ್ರಣ ಮಾಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ. ಎಲ್ಲ ಇಲಾಖೆಗಳಲ್ಲೂ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ಎಲ್ಲಾ ಸಚಿವರು ಬೇಸತ್ತು ಹೋಗಿದ್ದಾರೆ” ಎಂದು ಅವರು ಆರೋಪಿಸಿದರು.
“ಯಾವ ರೀತಿ ಫೋನ್ ಮಾಡಿ ‘ಅಪ್ಪಾ’ ಎಂಬ ಕೋಡ್ ವರ್ಡ್‌ನಲ್ಲಿ ಮಾತನಾಡುತ್ತಿದ್ದರು ಎಂಬುದೂ ಎಲ್ಲರಿಗೂ ಗೊತ್ತಿದೆ. ಯತೀಂದ್ರ ಸಿದ್ದರಾಮಯ್ಯ ಈಗ ಸೂಪರ್ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ” ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು. ಜೊತೆಗೆ, “ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಬಂದರೆ, ತಮ್ಮ ಮಗನನ್ನು ಡಿಸಿಎಂ ಮಾಡುವ ಷಡ್ಯಂತ್ರ ನಡೆಯುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.
ಸಚಿವರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ: ಈರಣ್ಣ ಕಡಾಡಿ
ಈ ವಿಷಯಕ್ಕೆ ಸಂಬಂಧಿಸಿ ದಾವಣಗೆರೆಯಲ್ಲಿ ರಾಜ್ಯಸಭಾ ಬಿಜೆಪಿ ಸದಸ್ಯ ಈರಣ್ಣ ಕಡಾಡಿ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಸಚಿವರ ಖಾತೆಗಳಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದೇ ಮಂತ್ರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ” ಎಂದು ಅವರು ಹೇಳಿದರು.
“30 ತಿಂಗಳ ಆಡಳಿತಾವಧಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ ಒಬ್ಬರೇ ಒಬ್ಬ ಸಚಿವರನ್ನೂ ಜನರು ಕಾಣಲಿಲ್ಲ. ಕಾಂಗ್ರೆಸ್‌ನಲ್ಲಿ ಒಂದು ತಂಡ ಸಿಎಂ ಸ್ಥಾನ ನೀಡಬೇಕು ಎಂದು ಬೇಡಿಕೆ ಇಡುತ್ತಿದೆ. ಮತ್ತೊಂದು ತಂಡ ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಕಾಂಗ್ರೆಸ್ ಧೂಳೀಪಟವಾಗುತ್ತದೆ ಎಂದು ಹೇಳುತ್ತಿದೆ. ಇಂತಹ ಪೂರ್ಣ ಬಹುಮತದ ಸರ್ಕಾರದಲ್ಲಿ ಮುಖ್ಯಮಂತ್ರಿ ಅತಂತ್ರ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಕಡಾಡಿ ಟೀಕಿಸಿದರು.
ಇನ್ನೂ ಮುಂದೆ ಮಾತನಾಡಿದ ಅವರು, “ತಂದೆಯನ್ನು ಸಮರ್ಥಿಸಿಕೊಳ್ಳಲು ಯತೀಂದ್ರ ಸಿದ್ದರಾಮಯ್ಯ ತುಂಬಾ ಮುಂದೆ ಇದ್ದಾರೆ. ಆದರೆ ಅವರು ತಂದೆಯ ಸಿಎಂ ಸ್ಥಾನ ಉಳಿಯುವ ಬಗ್ಗೆ ಮಾತ್ರವಲ್ಲ, ಮುಂದಿನ ಸಿಎಂ ಯಾರು ಎಂಬುದನ್ನೂ ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ. ಅವರ ಪ್ರಭಾವ ಎಷ್ಟಿದೆ ನೋಡಿ” ಎಂದು ವ್ಯಂಗ್ಯವಾಡಿದರು.


