Asianet Suvarna News Asianet Suvarna News

ಬಿಜೆಪಿ ಮಿಷನ್‌ 150: ಬೊಮ್ಮಾಯಿ, ಕಟೀಲ್‌ ಟೀಂ ತಲಾ 50 ಕ್ಷೇತ್ರದಲ್ಲಿ ಯಾತ್ರೆ

ಆರಂಭಿಕ ಹಂತದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದ ತಂಡಗಳು ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿವೆ. ಬಳಿಕ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ 

Karnataka Tour of 50 Assembly Constituencies Each in Bommai and Kateel grg
Author
Bengaluru, First Published Aug 19, 2022, 8:02 AM IST

ಬೆಂಗಳೂರು(ಆ.19):  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪಕ್ಷದ ರಾಷ್ಟ್ರೀಯ ಘಟಕದಲ್ಲಿ ಮಹತ್ವದ ಜವಾಬ್ದಾರಿ ನೀಡಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್‌ 150’ ಅನುಷ್ಠಾನಗೊಳಿಸುವ ಸಂಬಂಧ ಭರದ ಸಿದ್ಧತೆ ಆರಂಭಿಸಿದೆ. ಪಕ್ಷ ಸಂಘಟನೆಗೆ ಪೂರಕವಾಗಿ ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದ ತಂಡಗಳು ತಲಾ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿವೆ.

ಈ ಬಗ್ಗೆ ಗುರುವಾರ ನಡೆದ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ನಡೆದ ಈ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳ ಜತೆಗೆ ರಾಜ್ಯ ವಿಭಾಗದ ಪ್ರಭಾರಿಗಳು, ಸಹ ಪ್ರಭಾರಿಗಳು, ಸಂಘಟನಾ ಕಾರ್ಯದರ್ಶಿಗಳು, ಸಹ ಸಂಘಟನಾ ಕಾರ್ಯದರ್ಶಿಗಳು ಮತ್ತು ಜಿಲ್ಲೆಯ ಅಧ್ಯಕ್ಷರು ಪಾಲ್ಗೊಂಡಿದ್ದರು. ಒಟ್ಟು ನಾಲ್ಕು ಹಂತಗಳಲ್ಲಿ ಸಭೆ ನಡೆಯಿತು.

ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಯಾಕಿನ್ನೂ ಅವಶ್ಯಕತೆ?

ಆರಂಭಿಕ ಹಂತದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದ ತಂಡಗಳು ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿವೆ. ಬಳಿಕ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ತಲುಪಿಸುವ ಪ್ರಯತ್ನ ಮಾಡಲಿದ್ದಾರೆ. ತಂಡಗಳಲ್ಲಿ ಯಾರನ್ನು ಒಳಗೊಳ್ಳಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಈ ತಂಡದಲ್ಲಿ ಒಳಗೊಳ್ಳಲಾಗುವುದೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪದಾಧಿಕಾರಿಗಳು ತಿಂಗಳಲ್ಲಿ 15 ದಿನ ಪ್ರವಾಸ:

ಇದೇ ವೇಳೆ ಪಕ್ಷದ ಪದಾಧಿಕಾರಿಗಳು ತಿಂಗಳಲ್ಲಿ 15 ದಿನ ಪ್ರವಾಸ ಕೈಗೊಳ್ಳಬೇಕು ಎಂಬ ತೀರ್ಮಾನವನ್ನೂ ಕೈಗೊಳ್ಳಲಾಯಿತು. ರಾಜ್ಯದ ಪ್ರತಿ ಬೂತ್‌ ಅನ್ನೂ ಶೇ.50ಕ್ಕಿಂತ ಹೆಚ್ಚು ಅಂದರೆ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಬೂತ್‌ಗಳನ್ನಾಗಿ ಪರಿವರ್ತಿಸಬೇಕು. ಅದಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಪ್ರವಾಸ ನಡೆಸಬೇಕು ಎಂಬ ಸೂಚನೆ ನೀಡಲಾಯಿತು ಎಂದು ತಿಳಿದು ಬಂದಿದೆ.

ವಿಧಾನಸಭೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಂಚ ಸಂಕಲ್ಪಗಳು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಂಚ ಯೋಜನೆಗಳನ್ನು ಬಳಸಿಕೊಳ್ಳಬೇಕು. ಈ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಪದಾಧಿಕಾರಿಗಳಿಗೆ ಸೂಚಿಸಲಾಯಿತು.

ಸ್ವಾತಂತ್ರ್ಯ ಹೋರಾಟಗಾರ ವೀರ್‌ ಸಾವರ್ಕರ್‌ ಅವರನ್ನು ಮತಬ್ಯಾಂಕ್‌ ರಾಜಕೀಯಕ್ಕಾಗಿ ಕಾಂಗ್ರೆಸ್‌ ಪಕ್ಷವು ಅವಹೇಳನ ಮಾಡುವುದನ್ನು ಪದಾಧಿಕಾರಿಗಳ ಸಭೆ ಖಂಡಿಸಿತು. ಅಲ್ಲದೆ, ಮೂರು ಲಕ್ಷ ರು.ಗಳಿಗಿಂತ ಕಡಿಮೆ ಸಾಲ ಪಡೆದ ರೈತರಿಗೆ ಶೇ.1.5ರಷ್ಟುಬಡ್ಡಿ ಇಳಿಸುವ ಮೂಲಕ ಒಟ್ಟು 34,880 ಕೋಟಿ ರು. ವಿಶೇಷ ಅನುದಾನ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಸಭೆಯಲ್ಲಿ ಸ್ವಾಗತಿಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡೆಯಲ್ಲಿ ಭಾಗವಹಿಸಿದ ಸಾಧಕರಿಗೆ ಶೇ.2ರಷ್ಟುಮೀಸಲಾತಿ ನೀಡುವ ನಿರ್ಧಾರ ಕೈಗೊಂಡಿದ್ದಕ್ಕಾಗಿ ಅವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕೇಂದ್ರದ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ….ಸಂತೋಷ್‌ ಅವರ ನೇಮಕವನ್ನು ಸಭೆಯು ಒಕ್ಕೊರಲಿನಿಂದ ಸ್ವಾಗತಿಸಿತು.

ಮೋದಿಯ ಮಿಷನ್‌ ದಕ್ಷಿಣ್‌ಗೆ ಯಡಿಯೂರಪ್ಪ ನೇಮಕದಿಂದ ಶಕ್ತಿ, ಪಕ್ಷದಲ್ಲಿ ಉತ್ಸಾಹ: ಸಿಎಂ ಬೊಮ್ಮಾಯಿ

ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

5ರ ಬದಲು 7 ಕಡೆ ಬಿಜೆಪಿ ಜನೋತ್ಸವ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಮೂರು ವರ್ಷ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಮೊದಲ ವಾರದಿಂದ ಏಳು ಕಡೆಗಳಲ್ಲಿ ‘ಜನೋತ್ಸವ ಸಮಾವೇಶ’ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಸಮಾವೇಶ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ.

ಸೆ.10, 11ರಂದು ರಾಜ್ಯ ಕಾರ್ಯಕಾರಿಣಿ

ಬೆಂಗಳೂರು: ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ಬರುವ ಸೆ.10 ಮತ್ತು 11ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಗುರುವಾರ ನಡೆದ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಸಂಘಟನೆ ಬಲಪಡಿಸುವ ದಿಕ್ಕಿನಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
 

Follow Us:
Download App:
  • android
  • ios