Asianet Suvarna News Asianet Suvarna News

ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಯಾಕಿನ್ನೂ ಅವಶ್ಯಕತೆ?

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಇನ್ನೇನು ಅವರ ರಾಜಕೀಯ ಮುಗಿದೇ ಹೋಯಿತು ಎಂದುಕೊಳ್ಳುವಷ್ಟರಲ್ಲೇ ಮತ್ತೆ ಪುಟಿದೆದ್ದು ಬಂದಿದ್ದಾರೆ ರಾಜ್ಯ ಬಿಜೆಪಿಯ ಜನಕ.

Karnataka BjP need Bs Yediyurappa as frontline leader ahead of Assembly election
Author
Bangalore, First Published Aug 18, 2022, 4:38 PM IST

ರವಿ ಶಿವರಾಮ್ - ಸುವರ್ಣ ನ್ಯೂಸ್ ರಾಜಕೀಯ ವರದಿಗಾರ

90ರ ದಶಕದಲ್ಲಿ ಬಿಎಸ್ ಯಡಿಯೂರಪ್ಪರ ಸಾಮರ್ಥ್ಯ ಗುರುತಿಸುವ ಘೋಷ ವಾಕ್ಯವೊಂದು ಅವರ ಜೊತೆ ಸೇರಿತ್ತು. ಅದುವೆ "ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗೀತು" ಎಂಬ ಸಾಲು ಇಂದು ಕೂಡ ರಾಜ್ಯ ಬಿಜೆಪಿಗೆ ಮತ್ತು ಯಡಿಯೂರಪ್ಪರಿಗೆ ಪ್ರಸ್ತುತವಾಗಿದೆ. ಕಳೆದ ವರ್ಷ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಇನ್ನೇನು ಅವರ ರಾಜಕೀಯ ಮುಗಿದೇ ಹೋಯಿತು ಎಂದುಕೊಳ್ಳುವಷ್ಟರಲ್ಲೇ ಮತ್ತೆ ಪುಟಿದೆದ್ದು ಬಂದಿದ್ದಾರೆ ರಾಜ್ಯ ಬಿಜೆಪಿಯ ಜನಕ. ಕೇಂದ್ರ ಸಂಸದೀಯ ಸಮಿತಿ ಮತ್ತು ಚುನಾವಣೆ ಸಮಿತಿ ಇಡೀ ಬಿಜೆಪಿ ಪಕ್ಷಕ್ಕೆ ಒಂದು ರೀತಿ ಕಣ್ಣಿದ್ದಂತೆ‌. ಆ ಎರಡು ಸರ್ವೋಚ್ಚ ಸಮಿತಿ ಇಡೀ ಪಕ್ಷದ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಆ ಎರಡು ಸಮಿತಿ ಯಾರು ಸಿಎಂ ಆಗಬೇಕು ಎನ್ನೋದನ್ನ ನಿರ್ಧರಿಸುತ್ತದೆ. ಆ ಎರಡು ಸಮಿತಿ ಪಕ್ಷದ ಮುಂದಿನ ಭವಿಷ್ಯ, ವರ್ತಮಾನ ಎರಡನ್ನೂ ಅವಲೋಕಿಸಿ ನಿರ್ಣಯ ಕೈಗೊಳ್ಳುತ್ತದೆ. ಅಂತಹ ಸಮಿತಿಗೆ ಯಡಿಯೂರಪ್ಪರನ್ನು ಆಯ್ಕೆ ಮಾಡುವ ಮೂಲಕ ಯಡಿಯೂರಪ್ಪರನ್ನು ಪಕ್ಷದ ಹೈಕಮಾಂಡ್ ಸೈಡ್ ಲೈನ್ ಮಾಡಿತು ಎನ್ನುವ ಕೆಲ ಸ್ವಪಕ್ಷಿಯರ ಒಳದನಿಗೆ, ವಿಪಕ್ಷಗಳ ರಾಜಕೀಯ ಲಾಭದ ಮಾತಿಗೆ ಪ್ರಧಾನಿ ಮೋದಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಈ ಅತ್ಯುನ್ನತ ಸಮಿತಿಗೆ ನೇಮಕವಾದ ಯಡಿಯೂರಪ್ಪ ಕೇವಲ ರಾಜ್ಯ ರಾಜಕೀಯಕ್ಕೆ ಮಾತ್ರವಲ್ಲ; ರಾಷ್ಟ್ರ ರಾಜಕಾರಣದ ಡಿಸೈಡಿಂಗ್ ಕಮಿಟಿಯ ಮೆಂಬರ್ ಆಗಿ, ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಮತ್ತೆ ವಿಜೃಂಭಿಸುತ್ತಿದ್ದಾರೆ‌. ಯಡಿಯೂರಪ್ಪ ನೇಮಕದಿಂದ ರಾಜ್ಯ ರಾಜಕೀಯ ಚಿತ್ರಣವನ್ನೊಮ್ಮೆ ಅವಲೋಕನ ಮಾಡಿದಾಗ ಯಡಿಯೂರಪ್ಪ ಯಾಕೆ ಇನ್ನೂ ರಾಜ್ಯ ಬಿಜೆಪಿಗೆ ಅವಶ್ಯಕ ಎನ್ನೋದು ಅರ್ಥವಾಗುತ್ತದೆ. 

ಯಡಿಯೂರಪ್ಪ ಇತಿಹಾಸವೇ ಅಂತದ್ದು!

ಸಂಘದ ಶಾಖೆಯಲ್ಲಿ ಬೆಳೆದು, ಪ್ರಚಾರಕರಾಗಿ ಸೇವೆ ಮಾಡುತ್ತಾ, ರಾಜ್ಯ ರಾಜಕಾರಣದಲ್ಲಿ ಸೂಜಿಗಲ್ಲಿನಂತೆ ಸೆಳೆದ ವ್ಯಕ್ತಿತ್ವ ಯಡಿಯೂರಪ್ಪರದ್ದು. 
1992 ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ರೈತ ಪರ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಬಂಗಾರಪ್ಪ ವಿರುದ್ಧ ಆಡಿದ್ದ ಮಾತು ತೋರಿದ್ದ ಆಕ್ರೋಶ, ನೇರವಾಗಿ ವಿಧಾನಸೌಧಕ್ಕೆ ಕೇಳಿಸುವಷ್ಟರ ಮಟ್ಟಕ್ಕೆ ಜೋರಾಗಿತ್ತು. ಅಂದು ಒಂದು ಸಂಜೆ ಪತ್ರಿಕೆ "ಬಂಗಾರಪ್ಪ ವಿರುದ್ಧ ಗುಡುಗಿದ ಯಡಿಯೂರಪ್ಪ" ಎನ್ನುವ ಹೆಡ್ಡಿಂಗ್ ನೊಂದಿಗೆ ಸುದ್ದಿ ಅಚ್ಚೊತ್ತಿತ್ತು. ಆ ರೈತ ಹೋರಾಟದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಭಾಗಿಯಾಗಿದ್ದ ಇಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅದೇ ಪದವನ್ನು ಪ್ರಾಸಬದ್ಧಗೊಳಿಸಿ "ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗೀತು" ಎಂದು ಘೋಷಣೆ ಕೂಗಲು ಆರಂಭಿಸಿದ್ರು. ಅದೇ ವಾಕ್ಯ ಮುಂದೆ ಜನಮಾನಸದಲ್ಲಿ ಹೆಗ್ಗುರುತಾಗಿ ಬೆಳೆಯಿತು. 

ರಾಜ್ಯಾಧ್ಯಕ್ಷರನ್ನು ಬದಲಾಯಿಸುವುದೇ ಆಗಿದ್ದರೆ ಕಟೀಲರನ್ನು ಜೊತೆಯಲ್ಲೇ ಕರೆದುಕೊಂಡು ಬರ್ತಿದ್ರಾ ಶಾ?

ಬಸವಕಲ್ಯಾಣದಿಂದ ಬೀದರ್, ಬಸವನಬಾಗೇವಾಡಿಯಿಂದ ಅಂದಿನ ಬಿಜಾಪುರ ತನಕ ರೈತಪರ ಹೋರಾಟ ಸಂಘಟಿಸಿ ರಾಜ್ಯ ಬಿಜೆಪಿಗೆ ರೈತಪರ ಇಮೇಜ್ ನೀಡಿದ ನಾಯಕ ಬಿ.ಎಸ್ ಯಡಿಯೂರಪ್ಪ. 1994 ರಲ್ಲಿ ಶಿವಮೊಗ್ಗದಿಂದ ಬೆಂಗಳೂರು ತನಕ 13 ದಿನ ರೈತರ ಪರವಾಗಿ ಪಾದಯಾತ್ರೆ ಮಾಡಿದ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಪ್ರತಿ ಜಿಲ್ಲೆಯಿಂದ ಹಿಡಿದು ಗ್ರಾಮ ಮಟ್ಟದ ತನಕ ರೈತರ ಪರ ದನಿ ಎತ್ತಿ ರೈತ ನಾಯಕನಾಗಿ ಗುರುತಿಸಿಕೊಂಡರು. ಮುಂದೆ ಕುಮಾರಸ್ವಾಮಿಯವರ ವಚನ ಭ್ರಷ್ಟತೆಯನ್ನು ರಾಜ್ಯದ ಜನತೆಯ ಮುಂದೆ ಪ್ರಖರವಾಗಿ ಮಂಡಿಸುವ ಮೂಲಕ 2008 ರಲ್ಲಿ ಮುಖ್ಯಮಂತ್ರಿ ಆಗಿ ಮೂರು ವರ್ಷ ಅಧಿಕಾರ ನಡೆಸಿದರು. ರಾಜ್ಯ ಬಿಜೆಪಿಗೆ ಮಾತ್ರವಲ್ಲ; ಇಡೀ ದಕ್ಷಿಣ ಭಾರತದಲ್ಲಿ ಕೇಸರಿ ಪಕ್ಷಕ್ಕೆ ಕರ್ನಾಟಕದ ಮೂಲಕ ಅಧಿಕಾರದ ರುಚಿ ತೋರಿಸಿದರು. ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಪಕ್ಷ ಎಂಬ ಹಣೆಪಟ್ಟಿ ಹೊತ್ತಿದ್ದ ಬಿಜೆಪಿ ದಕ್ಷಿಣ ಭಾರತದಲ್ಲೂ ಗೆಲ್ಲಬಹುದು ಎನ್ನೋದನ್ನ ತೋರಿಸಿದರು. ಹೀಗಾಗಿಯೇ ಇರಬೇಕು, ಯಡಿಯೂರಪ್ಪರ 77ನೇ ಹುಟ್ಟುಹಬ್ಬದ ಆಚರಣೆ ದಿನ ಬಿ.ಎಲ್. ಸಂತೋಷ್ ಹೀಗೆ ಹೇಳಿದ್ರು, "ಕರ್ನಾಟಕ ಬಿಟ್ಟು ದಕ್ಷಿಣ ಭಾರತದಲ್ಲಿ ಬಿಜೆಪಿ ಯಾಕೆ ಇನ್ನೂ ಅಧಿಕಾರಕ್ಕೆ ಬಂದಿಲ್ಲ ಎಂದರೆ ಅಲ್ಲಿ ಯಡಿಯೂರಪ್ಪನವರು ಇಲ್ಲ" ಎಂಬ ಮಾತನ್ನು ಹೇಳುವ ಮೂಲಕ, ಒಂದೇ ವಾಕ್ಯದಲ್ಲಿ ಯಡಿಯೂರಪ್ಪರ ರಾಜಕೀಯ ತಾಕತ್ತನ್ನ ಅವರ ಹೋರಾಟದ ಮನಸ್ಥಿತಿಯನ್ನು ಹೀಗೆ ಕಟ್ಟಿಕೊಟ್ಟಿದ್ದರು. ಈಗ ಅದೇ ಯಡಿಯೂರಪ್ಪ ತನ್ನ‌ ರಾಜಕೀಯ ಸಂಧ್ಯಾಕಾಲದಲ್ಲಿ ಕೇಂದ್ರೀಯ ಚುನಾವಣಾ ಸಮಿತಿ ಮತ್ತು ಸಂಸದೀಯ ಮಂಡಳಿಯ ಸದಸ್ಯರಾಗುವ ಮೂಲಕ ರಾಷ್ಟ್ರ ರಾಜಕೀಯದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.

1989 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ:

ಕರ್ನಾಟಕದಲ್ಲಿ ಗೆದ್ದಿದ್ದು ಕೇವಲ ನಾಲ್ಕು ಸ್ಥಾನ. ಆ ನಾಲ್ಕು ಶಾಸಕರ ಪೈಕಿ ಬಿ.ಎಸ್. ಯಡಿಯೂರಪ್ಪ ಕೂಡ ಒಬ್ಬರು.  ಅಲ್ಲಿಂದ ಮುಂದೆ ಕೇವಲ ಹತ್ತು ಹದಿನೈದು ವರ್ಷದಲ್ಲೇ ರಾಜ್ಯದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿತು.‌ ಪರಿಣಾಮ 1996ರಲ್ಲಿ ಆರು ಸಂಸದರು, 1998 ರಲ್ಲಿ 13 ಸಂಸದರು, 1999 ರಲ್ಲಿ 18 ಎಂಪಿಗಳು ರಾಜ್ಯ ಬಿಜೆಪಿಯಿಂದ ಆಯ್ಕೆಯಾದರು. ಮುಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಹೀಗೆ ರಾಜ್ಯದಲ್ಲಿ ಬೇರು ಮಟ್ಟದಿಂದ ಪಕ್ಷ ಕಟ್ಟಿ, ಪಕ್ಷಕ್ಕೆ ಗೊಬ್ಬರ ನೀರು ಹಾಕಿ ಮರವಾಗಿ ಬೆಳೆಸಿದವರು ಯಡಿಯೂರಪ್ಪ. ಬಿಜೆಪಿ ಅಂದ್ರೆ ಕೇವಲ ಮೇಲ್ವರ್ಗದವರ ಪಾರ್ಟಿ , ನಗರದ ಪಕ್ಷ ಎಂಬ ಹಣೆ ಪಟ್ಟಿ ಹೊತ್ತಿದ್ದಾಗ, ಪಕ್ಷವನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋಗಿ ರಾಜ್ಯದಲ್ಲಿ ಬಿಜೆಪಿಯ ಇಮೇಜ್ ನ್ನು ಬದಲಾಯಿಸಿದ ನೇತಾರ ಅಂದ್ರೆ ಅದು ಯಡಿಯೂರಪ್ಪ

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಆದ ಪರಿಣಾಮ ಏನು?

ಒಂದು ವರ್ಷದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.  75 ವರ್ಷ ದಾಟಿದವರಿಗೆ ಸರ್ಕಾರದ ಭಾಗವಾಗಿರಲು ಅವಕಾಶ ಇಲ್ಲ ಎಂಬ ಪಕ್ಷದ ಅಲಿಖಿತ ನಿಯಮದ ಪ್ರಕಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು ಬಿಎಸ್ ವೈ. ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಲಿಂಗಾಯತ ಸಮುದಾಯ. ಆ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪ. ಯಡಿಯೂರಪ್ಪರಿಗೆ ಅವಧಿ ಪೂರ್ತಿ ಮಾಡಲು ಅವಕಾಶ ನೀಡಬೇಕಿತ್ತು ಎನ್ನುವ ಕೂಗು ಬಿಜೆಪಿಯ ಒಳಗೆ, ಕಾರ್ಯಕರ್ತ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಒಂದಿಷ್ಟು ಬಿಜೆಪಿ ಶಾಸಕರೆ ನೇರವಾಗಿ ಯಡಿಯೂರಪ್ಪ ಬದಲಾವಣೆಗಾಗಿ ಹೈಕಮಾಂಡ್ ಕದ ತಟ್ಟಿದ್ದು, ಬಹಿರಂಗವಾಗಿ ಹೇಳಿಕೆ ನೀಡಿದ್ದು, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಾತಾವರಣ ಒಂದೂವರೆ ವರ್ಷದ ಹಿಂದೆ ಸೃಷ್ಟಿ ಮಾಡಿದ್ದು  ಬಹಿರಂಗ ಸತ್ಯ. ಪಕ್ಷದ ಆಂತರಿಕ ವಲಯದಲ್ಲಿ ಆ ರೀತಿಯ ಭಾವನೆ ಮೂಡಿಸಿದ್ದರು ನಾಯಕತ್ವದ ವಿರುದ್ಧ ಕೆಲವು ಶಾಸಕರು ಗುಟುರು ಹಾಕಿದ್ದರೂ, ಪಕ್ಷದ ಕಾರ್ಯಕರ್ತರು ಯಾವ ಸಂದರ್ಭದಲ್ಲಿಯೂ ಯಡಿಯೂರಪ್ಪರ ಮೇಲೆ ಅಸಮಾಧಾನಗೊಂಡಿರಲಿಲ್ಲ ಎನ್ನೋದು ಮುಖ್ಯ. ಯಡಿಯೂರಪ್ಪರ ಬದಲಾವಣೆ ಸುದ್ದಿ ಖಚಿತ ಆಗುತ್ತಿದಂತೆ ಅದಕ್ಕೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಯಿತು. ಮಠ-ಮಾನ್ಯಗಳು ಯಡಿಯೂರಪ್ಪ ಪರ ವಕಾಲತ್ತು ಮಾಡಿತ್ತು. ಅಂತಿಮವಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ ಮೇಲೆ ಬಹುತೇಕ ಎಲ್ಲಾ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪರ ಕಣ್ಣೀರಿಗೆ ತಾವೂ ಜೊತೆ ಆಗಿದ್ದರು. ಅಂದರೆ ಅಷ್ಟರ ಮಟ್ಟಿಗೆ ಯಡಿಯೂರಪ್ಪರ ಮೇಲೆ ಪ್ರೀತಿ ತೋರಿದ್ದರು. ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಮತ್ತೆಂದು ಮುಖ್ಯಮಂತ್ರಿ ಆಗೋದಿಲ್ಲವಲ್ಲ ಎನ್ನುವ ದುಃಖ ಬಹುತೇಕ ಎಲ್ಲಾ ಕಾರ್ಯಕರ್ತರಿಗೆ ನೋವಿನ ರೂಪದಲ್ಲಿ ಕಾಡಿತ್ತು. ಅಂತಿಮವಾಗಿ ಯಡಿಯೂರಪ್ಪರ ಬಳಿಕ ಬಸವರಾಜ್ ಬೊಮ್ಮಾಯಿಗೆ ಪಟ್ಟ ಕಟ್ಟಲಾಯಿತು. 

ನೂತನ ಸಂಪುಟ ರಚನೆ ಆಯಿತು. ಆದರೆ ಯಾರೆಲ್ಲ ಅಂದು ಯಡಿಯೂರಪ್ಪ ವಿರುದ್ಧ ಪಕ್ಷದ ಒಳಗೆ ಗುಟುರು ಹಾಕಿದ್ದರೋ, ಯಾರು ಸಿಎಂ ಆಗಬೇಕು ಎಂದು ಕನಸು ಕಂಡು ಪದೇ ಪದೇ ದೆಹಲಿ ವಿಮಾನ ಏರಿ ಹಾರಾಡುತ್ತಿದ್ದರೋ, ಅವರಿಗೆ ಸಿಎಂ ಗಾದಿ ಹಾಗಿರಲಿ, ಕೊನೆ ಪಕ್ಷ ಸಚಿವ ಸ್ಥಾನ ಕೂಡ ಸಿಗದಂತೆ ಮಾಡಿದ್ರು ಯಡಿಯೂರಪ್ಪ. ಇದು ಪಕ್ಷದ ಒಳಗೆ ಮತ್ತು ಕಾರ್ಯಕರ್ತರ ಮಧ್ಯೆ ಒಬ್ಬ ನಾಯಕನಾಗಿ ಯಡಿಯೂರಪ್ಪಗೆ ಇರುವ ತಾಕತ್ತು ಮತ್ತು ವರ್ಚಸ್ಸು. ಯಡಿಯೂರಪ್ಪ ಕೆಳಗಿಳಿದ ಮೇಲೆ ನಿಶ್ಚಿತವಾಗಿ ಆ ಒಂದು ಖದರ್ ಇರುವ ಲೀಡರ್ ಶಿಪ್ ಬಿಜೆಪಿಯಲ್ಲಿ ಮರೆಯಾಗಿದ್ದು ಸತ್ಯ. ಯಡಿಯೂರಪ್ಪ ನಾಯಕತ್ವ ಇಲ್ಲದ ರಾಜ್ಯ ಬಿಜೆಪಿ ಹಡಗು ಸಂಚರಿಸುವಾಗ ಚಿಕ್ಕ ಗಾಳಿ ಬಂದರು ಅಲ್ಲಾಡೋಕೆ ಆರಂಭವಾಯಿತು. ಆ ಹಡಗಿನಲ್ಲಿ ಕುಳಿತ, ಹಡಗನ್ನು ಮುನ್ನಡೆಸುತ್ತಿದ್ದ ನಾವಿಕ(ಬೊಮ್ಮಾಯಿ)ನನ್ನು ಪ್ರಶ್ನೆ ಮಾಡೋಕೆ ಶುರು ಮಾಡಿದ್ರು. ಅದೇ ಸಮಯದಲ್ಲಿ ಆ ಹಡಗಿನ  ಪಥ ಬದಲಸಿಬಲ್ಲ ನಾಯಕನಿಗೆ ಮತ್ತೆ ರಾಷ್ಟ್ರ ಮಟ್ಟದಲ್ಲಿ ಪಕ್ಷ ಸರ್ವೋಚ್ಚ ಸ್ಥಾನ ನೀಡಿ, ಯಡಿಯೂರಪ್ಪರಿಗೆ ಮಣೆ ಹಾಕಿದೆ. ಯಡಿಯೂರಪ್ಪಗೆ ಪದವಿ ನೀಡಿ ಈ ಚುನಾವಣೆ ಎದುರಿಸದೇ ಹೋದರೆ ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಸುಲಭವಲ್ಲ ಎನ್ನೋದು ಹೈಕಮಾಂಡ್ ಗೆ ಸ್ಪಷ್ಟವಾಗಿ ತಿಳಿದಿದೆ. 

ಯಡಿಯೂರಪ್ಪ ಹೈಕಮಾಂಡ್'ಗೆ ಅನಿವಾರ್ಯ ಆಗಿದ್ದು ಯಾಕೆ?

ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಿತ್ತಿದಂತೆ, ಅನೇಕ ರಾಜಕೀಯ ವಿದ್ಯಮಾನಗಳು ಘಟಿಸಿ, ಮೂರು ವರ್ಷದ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಬಿಜೆಪಿಯ ಅಲಿಖಿತ ನಿಯಮದ ಪ್ರಕಾರ 75 ವರ್ಷ ದಾಟಿದವರಿಗೆ ಅಧಿಕಾರ ಇಲ್ಲ ಎಂಬ ನಿಯಮ ಇದ್ದರೂ, ಅದಾಗಲೇ 75 ವರ್ಷ ಪೂರೈಸಿದ್ದ ಯಡಿಯೂರಪ್ಪರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಿತ್ತು ಅಂದ್ರೆ ಅದಕ್ಕೆ ಕಾರಣ ಯಡಿಯೂರಪ್ಪ ಜೊತೆ ಇರುವ ಮತಗಳು. ಯಡಿಯೂರಪ್ಪರಿಗೆ ಬಿಜೆಪಿ  ಎಷ್ಟು ಮುಖ್ಯವೊ, ರಾಜ್ಯ ಬಿಜೆಪಿಗೆ ಸಹ ಯಡಿಯೂರಪ್ಪ ಹೆಸರು ಅಷ್ಟೇ ಅನಿವಾರ್ಯ. ಯಡಿಯೂರಪ್ಪ ಇಲ್ಲದ ಬಿಜೆಪಿ ಮತ್ತು ಬಿಜೆಪಿ ಇಲ್ಲದ ಯಡಿಯೂರಪ್ಪ ಈ ಎರಡು ವರ್ಶನ್ ಕಂಡಿದ್ದಾಗಿದೆ. ಅಂದು ಯಡಿಯೂರಪ್ಪ ಕೆಲವು ನಾಯಕರ ಮೇಲೆ ಮುನಿಸಿಕೊಂಡು ಬಿಜೆಪಿ ಬಿಟ್ಟು ಕೆಜೆಪಿ ಸ್ಥಾಪಿಸಿದ ಪರಿಣಾಮ ಅನಾಯಾಸವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಏರಲು ಸಹಾಯವಾಯಿತು. ಮಾತ್ರವಲ್ಲ 2008 ರಲ್ಲಿ 33.36% ಮತ ಪಡೆದಿದ್ದ ಬಿಜೆಪಿ, 2013 ರಲ್ಲಿ ಕೇವಲ 19.97% ಮತ ಪಡೆದು ಕೇವಲ 40 ಸೀಟ್ ಪಡೆದು ಹೀನಾಯವಾಗಿ ಸೋತಿತ್ತು.

ಬಿಜೆಪಿಯ ಬುಟ್ಟಿಯೊಳಗಿದ್ದ 9.83% ವೋಟ್ ಗಳನ್ನು ತನ್ನ ಖಾತೆಗೆ ಜಮೆ‌ ಮಾಡಿಕೊಂಡಿದ್ದ ಯಡಿಯೂರಪ್ಪ ಬಿಜೆಪಿ ಸೋಲಿಗೆ ಮಾತ್ರವಲ್ಲ ಕಾಂಗ್ರೆಸ್ ಗೆಲುವು ಸುಲಭ ಆಗೋಕೆ ನೇರ ಕಾರಣಕರ್ತರಾಗಿದ್ದರು. ಪಕ್ಷ ಕಟ್ಟಿದ ಕೆಲ ತಿಂಗಳಲ್ಲೇ ಹತ್ತು ಶೇಕಡಾ ಮತ ಪಡೆಯೋದು ಸುಲಭದ ಮಾತಲ್ಲ. ಆ ಮತ ಯಡಿಯೂರಪ್ಪರ ಹೆಸರ ಮೇಲೆ ಬಂದಿದ್ದು ಎನ್ನೋದನ್ನ ಮರೆಯುವಂತಿಲ್ಲ. ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಬರೋಬ್ಬರಿ 43 ಕ್ಷೇತ್ರಗಳಲ್ಲಿ ಬಿಜೆಪಿಗೆ ನೇರ ಸೋಲಾಗಿದ್ದು ಯಡಿಯೂರಪ್ಪ ಅಂದು ಕಟ್ಟಿದ್ದ ಕೆಜೆಪಿ ಪಕ್ಷದಿಂದ ಎನ್ನೋದು ಗಮನಾರ್ಹ. ಯಡಿಯೂರಪ್ಪರಿಗೆ ಲಿಂಗಾಯತ ಮತಬ್ಯಾಂಕ್ ಒಂದು ಕಡೆಯಾದರೆ ಅವರನ್ನು ವೈಯಕ್ತಿಕವಾಗಿ ಇಷ್ಟ ಪಡುವ ಜಾತಿ ಮೀರಿದ ಸಮುದಾಯ ದಾಟಿದ ವರ್ಗವೂ ಇದೆ. ಅದು ಯಡಿಯೂರಪ್ಪ ತಮ್ಮ ಓಡಾಟ, ಹೋರಾಟ ಸಂಘಟನೆಯಿಂದ ಗಳಿಸಿಕೊಂಡ ಪ್ರೀತಿಯದು. ಅದೇ ಪ್ರೀತಿಯನ್ನು ಮತವಾಗಿ ಬದಲಾಯಿಸುವ ಸಾಮರ್ಥ್ಯ ಇರುವ ಕೆಲವೇ ಕೆಲವು ರಾಜ್ಯ ನಾಯಕರಲ್ಲಿ ಯಡಿಯೂರಪ್ಪ ಅಗ್ರಗಣ್ಯ. ಈ ಸಂಗತಿ ಬಿಜೆಪಿ ಹೈಕಮಾಂಡ್ ಗೆ ಚೆನ್ನಾಗಿ ಗೊತ್ತಿದೆ. ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿ ಜೊತೆ ವಿಲೀನ ಮಾಡಿದ ಕೆಲವು ದಿನಗಳ‌ ತನಕ ಪಕ್ಷದಲ್ಲಿ ಅವರಿಗೆ ಯಾವುದೇ ಉನ್ನತ ಸ್ಥಾನ ಇರಲಿಲ್ಲ. ಸಮಯ ಕಳೆದಂತೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪರನ್ನು ರಾಜ್ಯಾಧ್ಯಕ್ಷರಾಗಿ ನೇಮಕ‌ ಮಾಡುವ ಮೂಲಕ ರಾಜ್ಯದಲ್ಲಿ ಕಳೆ ಕಳೆದುಕೊಂಡಿದ್ದ ಬಿಜೆಪಿಗೆ ಮರು ಜೀವ ನೀಡಲು ಮತ್ತೆ ಬಳಸಿಕೊಂಡಿದ್ದು ಯಡಿಯೂರಪ್ಪ ಎನ್ನುವ ಬಿಜೆಪಿಯ ಕಟ್ಟಾಳುವನ್ನೇ ಎನ್ನೋದು ಅಂಡರ್ ಲೈನ್ ಮಾಡಿ ಹೇಳಬೇಕಿರುವ ವಿಷಯ.‌

ಬೊಮ್ಮಾಯಿ ನಾಟ್ ರೀಚ್ ಎಬಲ್..?

2008 ರಲ್ಲಿ ಬಸವರಾಜ್ ಬೊಮ್ಮಾಯಿಯವರನ್ನು ತಾವೇ ಬಿಜೆಪಿಗೆ ಕರೆದುಕೊಂಡು ಬಂದ ಯಡಿಯೂರಪ್ಪ,  ಐದು ವರ್ಷಗಳ ಕಾಲ ಅತಿದೊಡ್ಡ ಖಾತೆಯನ್ನು ಅವರಿಗೆ ನೀಡಿ ಬಿಜೆಪಿ ಪಕ್ಷದಲ್ಲಿ ಬೊಮ್ಮಾಯಿನ್ನು ಬೆಳೆಸಿದ ನಾಯಕ ಎನ್ನೋದರಲ್ಲಿ ಯಾವುದೇ ಸಂದೇಹ ಇಲ್ಲ. ಅಂತಹ ಬೊಮ್ಮಾಯಿ ಯಡಿಯೂರಪ್ಪ ಬಳಿಕ ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ್ರು. ಆರಂಭದಲ್ಲಿ ಒಂದಿಷ್ಟು ಸದ್ದು ಮಾಡಿದ ಬೊಮ್ಮಾಯಿ ಅವರ ಆಡಳಿತ ವೈಖರಿ ಬರಬರುತ್ತಾ ಕುಂಟುತ್ತಾ ಸಾಗಿತ್ತು. ಒಂದಿಷ್ಟು ಯೋಜನೆಗಳ ಘೋಷಣೆ ಮಾಡಿದ ಬೊಮ್ಮಾಯಿ ಆಡಳಿತದಲ್ಲಿ ನಿರೀಕ್ಷೆ ಹೆಚ್ಚಿಸಿದರೂ ಕೂಡ, ಯಡಿಯೂರಪ್ಪನಂತಹ ಜನನಾಯಕನ ಸ್ಥಾನವನ್ನು ಫುಲ್ ಫಿಲ್ ಮಾಡೋದು ಸುಲಭದ ಮಾತಾಗಿರಲಿಲ್ಲ.  ಯಡಿಯೂರಪ್ಪ ಗರಡಿಯಲ್ಲಿ ಪಳಗಿದರೂ ಸಹ ಬೊಮ್ಮಾಯಿ ಕಾರ್ಯಕರ್ತರನ್ನು ರೀಚ್ ಆಗಿಲ್ಲ ಎನ್ನುವ ಆರೋಪ ಇದೆ. ಬೊಮ್ಮಾಯಿ ಯೋಜನೆಗಳನ್ನು ಘೋಷಣೆ ಮಾಡಿದರು ಅದು ತಳಮಟ್ಟದಲ್ಲಿ ಕಾರ್ಯಕರ್ತನ‌ ಜನಸಾಮಾನ್ಯರ ಮನಮುಟ್ಟಿಲ್ಲ ಎನ್ನುವ ಚಿತ್ರಣವಿದೆ. ಕಾರ್ಯಕರ್ತರ ಕೊಲೆಯಾದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿಲ್ಲ ಎನ್ನುವ ಬೇಸರ ಕಾರ್ಯಕರ್ತ ಪಡೆಗೆ ಇದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಹೈಕಮಾಂಡ್, ಇದೇ ದಿಕ್ಕಿನಲ್ಲಿ ಸಾಗಿದರೆ ಮುಂಬರುವ ವಿಧಾನಭೆ ಚುನಾವಣೆ ಕಷ್ಟವಾಗಲಿದೆ ಎನ್ನುವ ರಾಜಕೀಯ ಮಾಹಿತಿ ಪಡೆದು,ಯಡಿಯೂರಪ್ಪರಿಗೆ ಹೈಕಮಾಂಡ್ ಮಟ್ಟದಲ್ಲಿ ಸ್ಥಾನ ನೀಡಿ, ಅವರನ್ನು ಹೈಪರ್ ಆಕ್ಟಿವ್ ಮಾಡಿದ್ದಾರೆ ಪ್ರಧಾನಿ ಮೋದಿ. ಅಲ್ಲಿಗೆ ಬೊಮ್ಮಾಯಿ ಸಿಎಂ ಆಗಿದ್ದರೂ, ರಾಜ್ಯ ಬಿಜೆಪಿಗೆ ಅಘೋಷಿತ ಸಾರಥಿ ಯಡಿಯೂರಪ್ಪನವರೇ ಎನ್ನೋದನ್ನ ಒತ್ತಿ ಒತ್ತಿ ಹೇಳುವ ಪ್ರಯತ್ನ ಮಾಡಿದೆ ಎನ್ನೋದರಲ್ಲಿ ಯಾವ ಸಂದೇಹವೇ ಬೇಡ. 

 ಈ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್‌ಗೆ ಶಾಕ್:

ಯಡಿಯೂರಪ್ಪ ನಾಯಕತ್ವ ಇಲ್ಲದ ಶೂನ್ಯವನ್ನು ಆವರಿಸಿಕೊಳ್ಳುವ ದಾವಂತದಲ್ಲಿದ್ದ ರಾಜ್ಯ ಕಾಂಗ್ರೆಸ್ ಇದು ಒಂದು ರೀತಿಯಲ್ಲಿ ಹಿನ್ನಡೆ. ಮಾತು ಮಾತಿಗೂ ಯಡಿಯೂರಪ್ಪಗೆ ಹೈಕಮಾಂಡ್ ಅನ್ಯಾಯ ಮಾಡಿತು ಎನ್ನುವ ಮಾತನ್ನು ಸದನದ ಒಳಗೂ, ಹೊರಗು, ಜನರ ಮಧ್ಯೆ ಹೋದಾಗಲೆಲ್ಲಾ ಮೈಕ್ ವಾಲ್ಯುಮ್ ಹೆಚ್ಚಿಸಿಕೊಂಡು ಮಾತಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಯಡಿಯೂರಪ್ಪ ಈ ಆಯ್ಕೆ ರಾಜಕೀಯ ನಷ್ಟ. ಇನ್ನು ಬಿಜೆಪಿ ಒಳಗಿದ್ದ ಯಡಿಯೂರಪ್ಪ ಫಾಲೋವರ್ಸ್'ಗೆ, ಅವರನ್ನು ಇಷ್ಟ ಪಡುವ ಕಾರ್ಯಕರ್ತ ಪಡೆಗೆ, ಸಮುದಾಯಕ್ಕೆ ಒಂದು ಸಂದೇಶ. ಯಡಿಯೂರಪ್ಪರನ್ನು ಕೇಂದ್ರ ನಾಯಕತ್ವ ಎಂದಿಗೂ ಕಡೆಗಣಿಸಿಲ್ಲ ಎನ್ನುವ ಮೆಸೇಜ್ ನ್ನು ಈ ರೂಪದಲ್ಲಿ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ತಮ್ಮ ಒಂದು ನಿರ್ಧಾರದಿಂದ ಎರಡು ಲಾಭ ಪಡೆಯುವ ಗೇಮ್ ಪ್ಲಾನ್ ಮಾಡಿದ್ದಾರೆ. 

ರಾಜ್ಯಸಭೆ ಚುನಾವಣೆ: ಸಿದ್ದು ಲೆಕ್ಕಾಚಾರದಲ್ಲಡಗಿದೆ 2023 ರ ತಂತ್ರ!

ರಾಜ್ಯ ಕಾಂಗ್ರೆಸ್'ಗೆ ಯಡಿಯೂರಪ್ಪ ಕೌಂಟರ್

ಕೇಂದ್ರ ಬಿಜೆಪಿಯ ಈ ಗೇಮ್ ಪ್ಲಾನ್ ವರ್ಕೌಟ್ ಆಗಿ, ಅದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೂಸ್ಟರ್ ಆಗಬಲ್ಲದು ಎನ್ನೋ ಚರ್ಚೆ ನೆನ್ನೆಯಿಂದಲೇ ಶುರುವಾಗಿದೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಗುದ್ದಾಟ ಮಾಡುತ್ತಿದ್ದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ವೇಗಕ್ಕೆ ಯಡಿಯೂರಪ್ಪ ಎನ್ನುವ ಚುನಾವಣೆ ಚಾಣಾಕ್ಷನ ಅನುಭವ, ನಾಯಕತ್ವ ಮುನ್ನುಗ್ಗುತ್ತಿರುವ ಕಾಂಗ್ರೆಸ್'ಗೆ ಟೆನ್ಷನ್ ನೀಡೋಕೆ ಶುರು ಮಾಡಿದೆ‌. ಇಡೀ ದಕ್ಷಿಣ ಭಾರತದ ಮೇಲೆ ನೀವು ದೃಷ್ಟಿ ಹಾಯಿಸಿ ಅಲ್ಲೆಲ್ಲಾ ಪಕ್ಷ ಬಲಪಡಿಸಿ ಎಂದು ಪ್ರಧಾನಿ ಮೋದಿ ಯಡಿಯೂರಪ್ಪರಿಗೆ ಸ್ವತಃ ಸೂಚನೆ ನೀಡಿದ ಹೊರತಾಗಿಯೂ, ರಾಜ್ಯ ಕಾಂಗ್ರೆಸ್ "ಯಡಿಯೂರಪ್ಪ ಮುಕ್ತ ಕರ್ನಾಟಕ" ಎಂದು ಟ್ವೀಟ್ ಮಾಡುವ ಮೂಲಕ ತನ್ನ ಆತಂಕವನ್ನು ಈ ರೂಪದಲ್ಲಿ ತೋರಿದಂತೆ ಕಾಣುತ್ತಿದೆ. 

ಅದೇನೆ ಇರಲಿ ಬಿಡಿ.  ಸಿಎಂ ಸ್ಥಾನದಿಂದ ಕೆಳಗೆ ಇಳಿದ ಮೇಲೆ ಹೆಚ್ಚಾಗಿ ಮೌನಕ್ಕೆ ಶರಣಾದಂತೆ ಕಾಣುತ್ತಿದ್ದ ಯಡಿಯೂರಪ್ಪ, ನೆನ್ನೆಯಿಂದಲೇ ಮತ್ತೆ ಆಕ್ಟಿವ್ ಆಗಿದ್ದಾರೆ. ಸಂಜೆ ಪತ್ರಿಕಾಗೋಷ್ಠಿ ಮಾಡಿದ್ರು. ಬಳಿಕ ಬಿಜೆಪಿ ಕಚೇರಿಗೆ ಒಂದು ವಿಸಿಟ್ ಹಾಕಿದ್ರು. ಅಲ್ಲಿಂದ ಕೇಶವಕೃಪಾಗೆ ಹೋದ್ರು. ರಾತ್ರಿ ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಜೊತೆಗೂಡಿ ಹೊಟೇಲ್ ಅಶೋಕ್ ಗೆ ತೆರಳಿ ಊಟ ಮಾಡಿದ್ರು. ಯಡಿಯೂರಪ್ಪ ನೆನ್ನೆ ಸಂಜೆಯಿಂದ ಎಲ್ಲೆಲ್ಲಿ ಓಡಾಟ ಮಾಡಿದ್ರೋ, ಯಡಿಯೂರಪ್ಪರ ಕಾರಿನ ಹಿಂಬದಿ ಸೀಟಿನಲ್ಲಿ ಬೊಮ್ಮಾಯಿ ಕೂಡ ಕುಳಿತಿದ್ರು. ಈ ಒಂದು ಪಕ್ಷದ ಸರ್ವೋಚ್ಛ ಸ್ಥಾನ ಯಡಿಯೂರಪ್ಪರನ್ನು ಮತ್ತೆ ಮುಂದಿನ ಸೀಟಿಗೆ ತಂದು ಕೂರಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಮುಂದಿನ ಸೀಟಿನಲ್ಲೇ ಕೂರಿಸ್ತಾರಾ? ಎನ್ನುವ ಪ್ರಶ್ನಗೆ ಇನ್ನೂ ಏಳೆಂಟು ತಿಂಗಳು ಕಾಯಬೇಕಾಗುತ್ತದೆ.

Follow Us:
Download App:
  • android
  • ios