* ಕರ್ನಾಟಕ ರಾಜ್ಯಸಭಾ ಚುನಾವಣೆ 2022* ಹಠ ಸಾಧಿಸಿದ ಸಿದ್ದರಾಮಯ್ಯ* ಖರ್ಗೆ-ದೇವೇಗೌಡಗೆ ಮುಖಭಂಗ
ಬೆಂಗಳೂರು, (ಜೂನ್.03) : ಕರ್ನಾಟಕ ರಾಜ್ಯಸಭಾ ಚುನಾವಣೆಯ (Karnataka Rajya Sabha Elections 2022) ಕಣದಿಂದ ಎರಡನೇ ಅಭ್ಯರ್ಥಿಯನ್ನು ವಾಪಾಸ್ ಪಡೆಯುವುದು ಬೇಡ ಎಂದಿದ್ದ ಸಿದ್ದರಾಮಯ್ಯ ಕೊನೆಗೂ ತಮ್ಮ ಹಠ ಸಾಧಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯತಂತ್ರ ಸಿದ್ದರಾಮಯ್ಯ ಮುಂದೆ ಠುಸ್ ಆಗಿದೆ.
ಹೌದು...ಜೆಡಿಎಸ್ ಗೆ ಚೆಕ್ ಮೇಟ್ ಕೊಡುವುದಕ್ಕಾಗಿಯೇ ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕೆ ಇಳಿಸಿದೆ. ಎಷ್ಟೇ ಒತ್ತಡ ಬಂದರೂ ನಾಮಪತ್ರ ವಾಪಾಸ್ ತೆಗೆಯದೇ ಇರುವ ಮೂಲಕ ಜೆಡಿಎಸ್ ಗೆ ದೊಡ್ಡ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ. ಎರಡನೇ ಅಭ್ಯರ್ಥಿಗೆ ಸೋಲು ಪಕ್ಕಾ ಎಂಬುದು ಗೊತ್ತಿದ್ದರೂ ಜೆಡಿಎಸ್ ಸೋಲಿಸಬೇಕೆಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಠವಾಗಿದ್ದು, ಜೂನ್ 10 ರಂದು ಎಲ್ಲ ಕಾಂಗ್ರೆಸ್ ಶಾಸಕರು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೇ ಮತ ಹಾಕಬೇಕೆಂದು ವಿಪ್ ಜಾರಿಗೊಳಿಸಿದೆ.
ಖರ್ಗೆ ದಿಲ್ಲಿಗೆ ತೆರಳುತ್ತಿದ್ದಂತೆ ರಾಜ್ಯದಲ್ಲಿ ಸಂಚಲನ, ಸಿದ್ದು ಡಿಕೆಶಿ ಗೌಪ್ಯ ಮಾತುಕತೆ
ಮತದಾನ ಅನಿವಾರ್ಯ
ಯೆಸ್..ನಿರ್ಮಲಾ ಸೀತರಾಮನ್ ಹಾಗೂ ಜಗ್ಗೇಶ್ ಮೊದಲ ಪ್ರಾಶಸ್ತ್ಯ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಇನ್ನೂ ಕಾಂಗ್ರೆಸ್‌ನಿಂದ ಜಯರಾಮ್ ರಮೇಶ್ ಅವರು ಕೂಡ ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಆದ್ರೆ, 4ನೇ ಸ್ಥಾನಕ್ಕೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಬಳಿ ಮತಗಳ ಕೊರೆತ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ನಾಲ್ಕನೇ ಸ್ಥಾನಕ್ಕೆ ತಮ್ಮ-ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ರಾಜ್ಯಸಭಾ ಚುನಾವಣೆ ರಂಗೇರಿದೆ. ಈ ಹಿನ್ನೆಲೆಯಲ್ಲಿ ಮತದಾನ ಅನಿವಾರ್ಯ. ಜೆಡಿಎಸ್ ಕಾಂಗ್ರೆಸ್ ಬಲಿ ಬೆಂಬಲ ಕೋರಿದೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಮನ್ಸೂರ್ ಅಲಿ ಅವರನ್ನ ಅಖಾಡಕ್ಕಿಳಿಸಿದ್ದು, ಜೆಡಿಎಸ್ ಆಸೆಗೆ ತಣ್ಣೀರು ಸುರಿಸಿದ್ದಾರೆ.
ಖರ್ಗೆ-ದೇವೇಗೌಡಗೆ ಮುಖಭಂಗ
ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲೆಂದೇ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಎದುರು ಹಾಕಿಕೊಂಡು ನಾಲ್ಕನೇ ಸ್ಥಾನಕ್ಕೆ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ. ಇತ್ತ ಕಾಂಗ್ರೆಸ್ ಬೆಂಬಲದಿಂದ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನ ಗೆಲ್ಲಿಸಿಕೊಳ್ಳಬೇಕೆಂದು ದೇವೇಗವಡ ಖರ್ಗೆ ಮೂಲಕ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಖರ್ಗೆ ಸಹ ದೇವೇಗೌಡ ಅವರನ್ನ ಕರೆದುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂದಿ ಹಾಗೂ ರಾಹುಲ್ ಗಾಂಧಿ ಜತೆ ಚರ್ಚಿಸಿ ತಮ್ಮ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದುಕೊಳ್ಳಲು ಹೇಳಿ ಎಂದು ಮನವಿ ಮಾಡಿದ್ರು. ಆದ್ರೆ, ಸಿದ್ದರಾಮಯ್ಯ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಇದರಿಂದ ಖರ್ಗೆ ಹಾಗೂ ದೇವೇಗೌಡಗೆ ಹಿನ್ನಡೆಯಾದಂತಾಗಿದೆ.
ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಕೊನೆಯ ದಿನವಾದ ಶುಕ್ರವಾರ ಕಾಂಗ್ರೆಸ್ ಇಟ್ಟ ಹೆಜ್ಜೆ ಹಿಂಪಡೆಯದೇ ಇರುವುದರಿಂದ ರಾಜ್ಯಸಭಾ ಚುನಾವಣೆಗೆ ಈಗ ಮತದಾನ ಅನಿವಾರ್ಯವಾಗಿದೆ.ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್, ಕಾಂಗ್ರೆಸ್ ನ ಜೈರಾಂ ರಮೇಶ್, ಮನ್ಸೂರ್ ಅಲಿಖಾನ್ ಹಾಗೂ ಜೆಡಿಎಸ್ ನ ಕುಪ್ಪೇಂದ್ರ ರೆಡ್ಡಿ ಈಗ ಕಣದಲ್ಲಿ ಇದ್ದಾರೆ.
ಜೂನ್ 10 ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಚುನಾವಣೆ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಒಟ್ಟಿನಲ್ಲಿ ತೀವ್ರ ಕರ್ನಾಟಕ ರಾಜ್ಯಸಭಾ ಚುನಾವಣೆ 4ನೇ ಸ್ಥಾನಕ್ಕೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಯಾರಿಗೆ ಗೆಲುವು ಸಿಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
