ಬೆಂಗಳೂರು[ಡಿ.12]: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಹುದ್ದೆ ಆಕಾಂಕ್ಷಿ ಕೆ.ಎಚ್‌. ಮುನಿಯಪ್ಪ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.

ಕೆಪಿಸಿಸಿ ಹುದ್ದೆಗೆ ಲಾಬಿ ನಡೆಸಲು ಮಂಗಳವಾರವಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್‌ ಪ್ರಮುಖರ ಭೇಟಿಗೆ ಯತ್ನಿಸಿದ್ದ ಮುನಿಯಪ್ಪ ಅವರು ಇದು ಸಾಧ್ಯವಾಗದೇ ನಗರಕ್ಕೆ ಹಿಂತಿರುಗಿದ್ದು, ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಉಭಯ ನಾಯಕರ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ.

ದೇವೇಗೌಡರ ಜತೆ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ ಅವರು, ರಾಜಕೀಯದಲ್ಲಿ ಸಾಕಷ್ಟುಅನುಭವ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಜವಾಬ್ದಾರಿ ನೀಡಿದರೆ ನಾನು ನಿಭಾಯಿಸುತ್ತೇನೆ. ಆದರೆ, ಹೈಕಮಾಂಡ್‌ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಅದಕ್ಕೆ ಬದ್ಧವಾಗಿರುತ್ತೇನೆ. ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಹಣ ಖರ್ಚು ಮಾಡಿ ಗೆಲುವು ಸಾಧಿಸಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ನಾಯಕತ್ವಕ್ಕೆ ರಾಜೀನಾಮೆ ನೀಡಿ ಪಕ್ಷದ ಗೌರವ ಮತ್ತು ವೈಯಕ್ತಿಕ ಗೌರವ ಹೆಚ್ಚಿಸಿಕೊಂಡಿದ್ದಾರೆ. ಜನಾದೇಶಕ್ಕೆ ನಾವು ಬದ್ಧವಾಗಿರಬೇಕು ಎಂದರು.